ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂ.18ರಂದೇ ನೂಪುರ್ ವಿಚಾರಣೆ ನಡೆದಿದೆ: ಸುಪ್ರೀಂಗೆ ದೆಹಲಿ ಪೊಲೀಸರ ಪ್ರತಿಕ್ರಿಯೆ

Last Updated 2 ಜುಲೈ 2022, 2:50 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ ಅವರಿಗೆ ಜೂನ್‌ 18ರಂದು ನೋಟಿಸ್‌ ನೀಡಿದ್ದೆವು ಮತ್ತು ಅದೇದಿನ ವಿಚಾರಣೆಗೊಳಪಡಿಸಿದ್ದೆವು ಎಂದು ದೆಹಲಿ ಪೊಲೀಸರು ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.

ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪ್ರವಾದಿ ಮಹಮ್ಮದರ ಕುರಿತು ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ವಿರುದ್ಧದೇಶದ ಹಲವೆಡೆ ಎಫ್‌ಐಆರ್‌ ದಾಖಲಾಗಿದ್ದವು. ಆ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ನೂಪುರ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪಾರ್ದಿವಾಲಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ನೂಪುರ್ ಅವರನ್ನು ಮತ್ತು ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.

‘ಬೇರೆಯವರ ವಿರುದ್ಧ ಎಫ್‌ಐಆರ್ ದಾಖಲಾದ ತಕ್ಷಣವೇ ಅವರನ್ನು ಬಂಧಿಸುತ್ತೀರಿ. ಆದರೆ ಇವರನ್ನು ಬಂಧಿಸಿಲ್ಲ. ಅವರ ವಿರುದ್ಧ ದಾಖಲಾದ ಎಫ್‌ಐಆರ್‌ನ ತನಿಖೆಯ ಪ್ರಗತಿ ಏನಾಯಿತು. ದೆಹಲಿ ಪೊಲೀಸರು ಏನು ಮಾಡಿದ್ದಾರೆ? ನಾವು ಆ ಬಗ್ಗೆಯೂ ಮಾತನಾಡಬೇಕೆ’ ಎಂದು ಪ್ರಶ್ನಿಸಿತ್ತು.ಇದಾದ ಕೆಲವೇ ಗಂಟೆಗಳಲ್ಲಿದೆಹಲಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಸೆಕ್ಷನ್‌ 41ಎ ಸಿಆರ್‌ಪಿಸಿ ಅಡಿಯಲ್ಲಿ ಪೊಲೀಸ್‌ ವಿಚಾರಣೆಗೆ ಹಾಜರಾಗುವಂತೆ ಜೂನ್‌ 18ರಂದು ನೂಪುರ್‌ ಶರ್ಮಾ ಅವರಿಗೆ ನೋಟಿಸ್‌ ನೀಡಿದ್ದೆವು.ಅದೇ ದಿನ ಅವರು ವಿಚಾರಣೆಗೆ ಹಾಜರಾಗಿದ್ದರು. ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್‌ ಆಯುಕ್ತ ಕೆ.ಪಿ.ಎಸ್‌. ಮಲ್ಹೋತ್ರ ಹೇಳಿದ್ದಾರೆ.

ಪ್ರವಾದಿ ಬಗೆಗಿನನೂಪುರ್ ಶರ್ಮಾ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಹಲವು ದೇಶಗಳು ಈ ಬಗ್ಗೆ ತಮ್ಮ ಆಕ್ಷೇಪ ಮತ್ತು ಪ್ರತಿಭಟನೆಯನ್ನು ದಾಖಲಿಸಿದ್ದವು. ತಕ್ಷಣವೇ ಬಿಜೆಪಿಯು ನೂಪುರ್ ಅವರನ್ನು ಪಕ್ಷದ ವಕ್ತಾರೆ ಸ್ಥಾನದಿಂದ ವಜಾ ಮಾಡಿತ್ತು.

ನೂಪುರ್ ಅವರ ಹೇಳಿಕೆ ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಉದಯಪುರದ ಟೈಲರ್‌ ಕನ್ಹಯ್ಯಲಾಲ್ ಎಂಬುವವರನ್ನು ಇಬ್ಬರು ಮುಸ್ಲಿಮರು ಕೆಲ ದಿನಗಳ ಹಿಂದೆ ಹತ್ಯೆ ಮಾಡಿದ್ದರು.ಸದ್ಯ ಹಂತಕರು ಹಾಗೂಅವರೊಂದಿಗೆ ಸಂಚಿನಲ್ಲಿ ಭಾಗಿಯಾಗಿದ್ದ ಮತ್ತಿಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT