ಶುಕ್ರವಾರ, ಮೇ 20, 2022
23 °C
ದೇಶದಾದ್ಯಂತ ರೈಲು ತಡೆ ಆಂದೋಲನ

ಕೃಷಿ ಕಾಯ್ದೆ ರದ್ದತಿಗೆ ಆಗ್ರಹ: ರೈಲ್ವೆ ಹಳಿಗಳ ಮೇಲೆ ರೈತ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ ಹಾಗೂ ಪಂಜಾಬ್‌ ಸೇರಿದಂತೆ ದೇಶದ ಹಲವು ಭಾಗಗಲ್ಲಿ ಗುರುವಾರ ರೈಲು ತಡೆ ಚಳವಳಿ ನಡೆಸಲಾಯಿತು. ಸಾವಿರಾರು ರೈತರು ರೈಲ್ವೆ ಹಳಿಗಳ ಮೇಲೆ ಕುಳಿತು ಧರಣಿ ನಡೆಸಿದರು. ರಾಷ್ಟ್ರವ್ಯಾಪಿ ರೈಲು ತಡೆ ಚಳವಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಕಳೆದವಾರ ಕರೆ ನೀಡಿತ್ತು. 

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ 4 ತಾಸುಗಳ ರೈಲು ತಡೆ ಚಳವಳಿ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕನಿಷ್ಠ 25 ರೈಲುಗಳ ಸಂಚಾರವನ್ನು ಇಲಾಖೆ ಕೆಲಕಾಲ ಸ್ಥಗಿತಗೊಳಿಸಿತ್ತು. ಹೀಗಾಗಿ ಯಾವುದೇ ಅವಘಡಗಳು ಸಂಭವಿಸಿಲ್ಲ.

ಹರಿಯಾಣದ ಕುರುಕ್ಷೇತ್ರದಲ್ಲಿ ಗೀತಾ ಜಯಂತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಹತ್ತಿದ ರೈತರು ರೈಲು ನಿಲುಗಡೆ ಮಾಡಿಸುವಲ್ಲಿ ಯಶಸ್ವಿಯಾದರು. ಆದರೆ ರೈಲಿನ ಎಂಜಿನ್‌ ಇರುವ ಬೋಗಿಗೆ ಪ್ರವೇಶಿಸಲು ಅವಕಾಶ ಮಾಡಿಕೊಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂಬಾಲ, ಪಾಣಿಪತ್, ಪಂಚಕುಲಾ, ರೋಹ್ಟಕ್, ಸೋನಿಪತ್, ಹಿಸ್ಸಾರ್ ಮತ್ತು ಫತೇಹ್‌ಬಾದ್ ಜಿಲ್ಲೆಗಳಲ್ಲೂ ಧರಣಿ ಇತ್ತು. ಜಿಂದ್ ಮತ್ತು ಫತೇಹ್‌ಬಾದ್ ಜಿಲ್ಲೆಗಳಲ್ಲಿ ಕೆಲವು ರೈತರು ಹಳಿ ಮೇಲೆ ಕುಳಿತು ಹುಕ್ಕಾ ಸೇದಿದ್ದು ಕಂಡುಬಂದಿತು.

ಪಂಜಾಬ್‌ನಲ್ಲಿ ಪ್ರತಿಭಟನಕಾರರು ದೆಹಲಿ–ಲೂಧಿಯಾನ–ಅಮೃತಸರ ರೈಲ್ವೆ ಮಾರ್ಗದ ಹಳಿಗಳ ಮೇಲೆ ಧರಣಿ ನಡೆಸಿದರು. ಜಲಂಧರ್‌ನಲ್ಲಿ ಜಲಂಧರ್–ಜಮ್ಮು ಮಾರ್ಗದ ಹಳಿಯ ಮೇಲೆ ಪ್ರತಿಭಟನೆ ನಡೆಯಿತು. ಲೂಧಿಯಾನದಲ್ಲಿ ಲೂಧಿಯಾನ–ಫಿರೋಜ್‌ಪುರ ಮಾರ್ಗದ ಮುಲ್ಲನ್‌ಪುರ, ದಖಾ, ಜಾಗರಣ್‌ಗಳಲ್ಲಿ ಹಳಿಗಳ ಮೇಲೆ ಕುಳಿತಿದ್ದರು.

ಭಟಿಂಡಾದಲ್ಲಿ ಭಟಿಂಡಾ–ದೆಹಲಿ ಮಾರ್ಗ, ಅಮೃತಸರದಲ್ಲಿ ದೆಹಲಿ–ಅಮೃತಸರ ಮಾರ್ಗ, ಅಮೃತಸರ–ತರನ್ ತಾರನ್ ಮಾರ್ಗದ ಹಳಿಗಳಲ್ಲೂ ರೈತರು ಪ್ರತಿಭಟಿಸಿದರು. ಭಾರತೀಯ ಕಿಸಾನ್ ಮೋರ್ಚಾದ ಗುಲಾಬ್ ಸಿಂಗ್ ಮಾಂಕ್ಪುರ್ ನೇತೃತ್ವದಲ್ಲಿ ರೈತರು ಅಂಬಾಲಾ ಕಂಟೋನ್ಮೆಂಟ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲಿರುವ ಶಾಹಪುರ ಗ್ರಾಮದ ಹಳಿಗಳ ಮೇಲೆ ಓಡಾಡಿದರು. ‘ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಮ್ಮ ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಯುತ್ತದೆ’ ಎಂದು ಸಿಂಗ್ ಹೇಳಿದರು.

ಪ್ರತಿಭಟನೆಯ ಕಾರಣದಿಂದ ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ರೈತರು 50 ಸ್ಥಳಗಳಲ್ಲಿ ಧರಣಿ ನಡೆಸಿದ್ದಾರೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ್ ಅಗರ್‌ವಾಲ್ ತಿಳಿಸಿದ್ದಾರೆ. ಪ್ರತಿಭಟನೆಯ ಕಾರಣಕ್ಕೆ ಯಾವುದೇ ರೈಲುಗಳ ಮಾರ್ಗ ಬದಲಾವಣೆ ಅಥವಾ ರದ್ದತಿ ಮಾಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ. ಉತ್ತರ ರೈಲ್ವೆ ವಲಯದ ಫಿರೋಜ್‌ಪುರ ವಿಭಾಗದ ರೈಲುಗಳನ್ನು ನಿಲ್ದಾಣದಲ್ಲಿ ನಿಲುಗಡೆ ಮಾಡಿದ್ದರಿಂದ ಪ್ರಯಾಣಿಕರಿಗೆ ಅಲ್ಪ ಮಟ್ಟಿನ ತೊಂದರೆಯಾಯಿತು. ಮಧ್ಯಾಹ್ನ 12ರಿಂದ 4 ಗಂಟೆ ಅವಧಿಯಲ್ಲಿ ಸಂಚರಿಸಬೇಕಿದ್ದ ರೈಲುಗಳು ನಿಲ್ದಾಣಗಳಲ್ಲಿ ಉಳಿದಿದ್ದವು. ಸಂಜೆ ನಾಲ್ಕು ಗಂಟೆ ಬಳಿಕ ಪ್ರಯಾಣ ಪುನರಾರಂಭವಾಯಿತು ಎಂದು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ರೇವರಿ–ಶ್ರೀ ಗಂಗಾನಗರ ವಿಶೇಷ ರೈಲನ್ನು ಮಾತ್ರ ರದ್ದುಗೊಳಿಸಲಾಯಿತು. ಕೆಲವು ರೈಲುಗಳು ವಿಳಂಬವಾಗಿದ್ದವು.

ಮಹಾರಾಷ್ಟ್ರದಲ್ಲೂ ಆಂದೋಲನ
ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಪುಣೆ ನಗರಗಳಲ್ಲಿ ಕೆಲಕಾಲ ರೈಲು ತಡೆ ನಡೆಸಲಾಯಿತು. ಔರಂಗಾಬಾದ್‌ನ ಲಾಸೂರ್‌ ನಿಲ್ದಾಣದಲ್ಲಿ 12 ಜನರನ್ನು ಪೊಲೀಸರು ವಶಕ್ಕೆ ಪಡೆದರು. ಜಲ್ನಾ–ಮುಂಬೈ ಜನಶತಾಬ್ದಿ ರೈಲನ್ನು ಅರ್ಧಗಂಟೆ ತಡೆಹಿಡಿಯಲಾಗಿತ್ತು. ಔರಂಗಾಬಾದ್ ನಿಲ್ದಾಣದ ಹೊರಗೆ ಪ್ರತಿಭಟನೆ ನಡೆಯಿತು.

ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಸೇರಿದ ಸದಸ್ಯರು ಗುರುವಾರ ಪುಣೆ ರೈಲು ನಿಲ್ದಾಣದಲ್ಲಿ ಆಂದೋಲನ ನಡೆಸಿದರು. ಕಾಂಗ್ರೆಸ್, ಶಿವಸೇನಾ, ಎನ್‌ಸಿಪಿ, ಜನತಾದಳ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವಾರು ಸಂಘಟನೆಗಳ ಸದಸ್ಯರು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ರೈಲು ನಿಲ್ದಾಣದಲ್ಲಿ ನಡೆದ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಕಾರ್ಮಿಕ ಕಲ್ಯಾಣ ಕಾರ್ಯಕರ್ತ ನಿತಿನ್ ಪವಾರ್ ತಿಳಿಸಿದರು. ಪ್ರತಿಭಟನಕಾರರು ಕೊಯ್ನಾ ಎಕ್ಸ್‌ಪ್ರೆಸ್ ರೈಲು ತಡೆದರು.

ಟಿಕ್ರಿ ಗಡಿಯ ನಿಲ್ದಾಣ ತಾತ್ಕಾಲಿಕ ಸ್ಥಗಿತ
(ನವದೆಹಲಿ ವರದಿ): ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಟಿಕ್ರಿ ಗಡಿಯ ನಿಲ್ದಾಣವೂ ಸೇರಿದಂತೆ ಕೆಲವು ಮೆಟ್ರೊ ನಿಲ್ದಾಣಗಳ ಪ್ರವೇಶದ್ವಾರವನ್ನು ರೈಲು ತಡೆ ಚಳವಳಿ ಕಾರಣಕ್ಕೆ 4 ಗಂಟೆಗಳ ಕಾಲ ಮುಚ್ಚಲಾಗಿತ್ತು. ಈ ಬಗ್ಗೆ ಪ್ರಯಾಣಿಕರಿಗೆ ರೈಲ್ವೆ ನಿಗಮ ಮಾಹಿತಿ ನೀಡಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದ ಬಹುತೇಕ ರೈಲು ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಪರಿಣಾಮ ಅತ್ಯಲ್ಪ: ರೈಲ್ವೆ ರೈಲು ತಡೆ ಚಳವಳಿಯಿಂದ ರೈಲು ಸೇವೆಯ ಮೇಲೆ ಅತ್ಯಲ್ಪ ಪರಿಣಾಮವಷ್ಟೇ ಉಂಟಾಗಿದೆ ಎಂದು ಇಲಾಖೆಯ ವಕ್ತಾರರು ಗುರುವಾರ ತಿಳಿಸಿದ್ದಾರೆ. ‘ಯಾವುದೇ ಅಹಿತಕರ ಘಟನೆ ನಡೆಯದೆ ಚಳವಳಿ ಮುಕ್ತಾಯವಾಗಿದೆ. ಎಲ್ಲ ವಲಯಗಳಲ್ಲಿ ರೈಲು ಸಂಚಾರ ಸಹಜವಾಗಿತ್ತು’ ಎಂದು ತಿಳಿಸಿದ್ದಾರೆ.

‘ಬಹುತೇಕ ವಲಯಗಳಲ್ಲಿ ಒಂದೂ ಘಟನೆ ವರದಿಯಾಗಿಲ್ಲ. ಕೆಲವು ನಿಲ್ಧಾಣಗಳಲ್ಲಿ ರೈಲುಗಳ ಓಡಾಟವನ್ನು ಕೆಲಕಾಲ ತಡೆದಿದ್ದನ್ನು ಬಿಟ್ಟರೆ ಬಹುತೇಕ ಸಂಚಾರ ವ್ಯವಸ್ಥೆ ಸಾಮಾನ್ಯವಾಗಿತ್ತು’ ಎಂದು ತಿಳಿಸಿದ್ದಾರೆ.

ಮಹಾಪಂಚಾಯಿತಿ‌ಗೆ ಇಲ್ಲ ಅನುಮತಿ
(ನಾಗ್ಪುರ ವರದಿ):
ರೈತ ನಾಯಕ ರಾಕೇಶ್ ಟಿಕಾಯತ್ ಅವರು ಶನಿವಾರ (ಫೆ.20ರಂದು) ನಡೆಸಲು ಉದ್ದೇಶಿಸಿರುವ ಮಹಾಪಂಚಾಯಿತಿಗೆ ಅನುಮತಿ ಸಿಕ್ಕಿಲ್ಲ. ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ ಎಂಬ ಕಾರಣವನ್ನು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲಾಡಳಿತ ನೀಡಿದೆ.

‘ಕಳೆದ ಎರಡು ದಿನಗಳಿಂದ ಕೊರೊನಾ ಪ್ರಕರಣಗಳ ಹೆಚ್ಚಳವನ್ನು ಗಮನಿಸಿ, ಅನುಮತಿ ನೀಡಬಾರದು ಎಂದು ಪೊಲೀಸ್ ಅಧೀಕ್ಷಕರು ವರದಿ ನೀಡಿದ್ದಾರೆ. ಹೀಗಾಗಿ ಗುರುವಾರ ರಾತ್ರಿಯಿಂದಲೇ ಲಾಕ್‌ಡೌನ್ ಜಾರಿಯಾಗಲಿದ್ದು, ಸಮಾವೇಶಕ್ಕೆ ಅನುಮತಿ ನೀಡಿಲ್ಲ’ ಎಂದು ಯವತ್ಮಾಲ್ ಜಿಲ್ಲಾಧಿಕಾರಿ ಎಂ.ಡಿ. ಸಿಂಗ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು