ಮಂಗಳವಾರ, ನವೆಂಬರ್ 24, 2020
25 °C

ಕಾಂಗ್ರೆಸ್‌ಗೆ ಮತ್ತೊಂದು ಆಘಾತ: ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ಶಾಸಕ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಭೋಪಾಲ್: ಮಧ್ಯಪ್ರದೇಶ ರಾಜ್ಯ ವಿಧಾನಸಭೆ ಉಪಚುನಾವಣೆಗೆ ಒಂದು ವಾರವಿದೆ ಎನ್ನುವಾಗಲೇ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದ್ದು, ಮತ್ತೋರ್ವ ಶಾಸಕ ರಾಹುಲ್ ಸಿಂಗ್ ಇಂದು ಮುಂಜಾನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಾಲ್ಕನೇ ಶಾಸಕ ರಾಜೀನಾಮೆ ನೀಡಿದಂತಾಗಿದೆ.

ರಾಜೀನಾಮೆ ನೀಡಿದ ನಂತರ ಭೋಪಾಲ್‌ನಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಸಿಂಗ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ದಾಮೋಹ್‌ನ ಶಾಸಕರಾದ ರಾಹುಲ್ ಸಿಂಗ್ ಅವರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ರಾಮೇಶ್ವರ ಶರ್ಮಾ ಅವರಿಗೆ ನೀಡಿದ್ದಾರೆ. 'ದಾಮೋಹ್ ಪ್ರದೇಶದ ಶಾಸಕ, ರಾಹುಲ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ, ಅದನ್ನು ಸ್ವೀಕರಿಸಲಾಗಿದೆ' ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ನಾನು ಸುಮಾರು 14 ತಿಂಗಳು ಕಾಂಗ್ರೆಸ್ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಅಭಿವೃದ್ಧಿಗಾಗಿ ಕೆಲಸ ಮಾಡಲು ನನಗೆ ಸಾಧ್ಯವಾಗಲಿಲ್ಲ. ದಾಮೋಹ್‌ದಲ್ಲಿ ಎಲ್ಲಾ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ತಡೆಹಿಡಿಯಲಾಗಿದೆ. ಇಂದು ನಾನು ಸ್ವಯಿಚ್ಛೆಯಿಂದ ಬಿಜೆಪಿಗೆ ಸೇರಿಕೊಂಡಿದ್ದೇನೆ. ಈ ಮೂಲಕ ದಾಮೋಹ್ ಅಭಿವೃದ್ಧಿ ಕಾಣುತ್ತದೆ ಎನ್ನುವ ಬಗ್ಗೆ ನನಗೆ ಖಾತ್ರಿಯಿದೆ' ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಭರವಸೆ ಕಳೆದುಕೊಂಡ ನಂತರ, ಅಭಿವೃದ್ಧಿಗಾಗಿ ಕೆಲಸ ಮಾಡಲು ಬಯಸುವವರು ಆ ಪಕ್ಷವನ್ನು ತೊರೆಯುತ್ತಿದ್ದಾರೆ. ದಾಮೋಹ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇಂದು ರಾಹುಲ್ ಸಿಂಗ್ ಲೋಧಿ ಅವರು ಬಿಜೆಪಿಯನ್ನು ಸೇರಿದ್ದಾರೆ' ಎಂದು ತಿಳಿಸಿದ್ದಾರೆ.

ಇದರೊಂದಿಗೆ ದಾಮೋಹ್‌ ಕ್ಷೇತ್ರವನ್ನು ಖಾಲಿ ಎಂದು ಘೋಷಿಸಲಾಗಿದೆ. 230 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ ಬಲ ಈಗ 87ಕ್ಕೆ ಇಳಿದಿದೆ.

ಜುಲೈನಲ್ಲಿ ಕಾಂಗ್ರೆಸ್ ಶಾಸಕರಾದ ಮಂದಾತ ಕ್ಷೇತ್ರದ ನಾರಾಯಣ್ ಪಟೇಲ್, ಬಾದಾ ಮಲ್ಹೆರಾದ ಪ್ರಗ್ಯುಮ್ನ್ ಸಿಂಗ್ ಲೋಧಿ ಮತ್ತು ನೇಪನಗರದ ಸುಮಿತ್ರ ದೇವಿ ಕಾಸ್ಡೇಕರ್ ಕೂಡ ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿದ್ದರು ಮತ್ತು ನಂತರ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು