ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಬಿಜೆಪಿ–ಎಐಎಡಿಎಂಕೆ ಮೈತ್ರಿ

Last Updated 21 ನವೆಂಬರ್ 2020, 21:00 IST
ಅಕ್ಷರ ಗಾತ್ರ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಆಡಳಿತಾರೂಢ ಎಐಎಡಿಎಂಕೆ ಘೋಷಿಸಿದೆ.

‘ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಏರ್ಪಟ್ಟಿದ್ದ ಮೈತ್ರಿಯನ್ನು ವಿಧಾನಸಭಾ ಚುನಾವಣೆಗೂ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಘೋಷಿಸಲಾಯಿತು. ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಸಂಯೋಜಕ ಒ. ಪನ್ನೀರ್‌ಸೆಲ್ವಂ, ಜಂಟಿ ಸಂಯೋಜಕ ಹಾಗೂ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಈ ನಿರ್ಧಾರ ಪ್ರಕಟಿಸಿದರು.

ಅಮಿತ್ ಶಾ ಅವರು, ಮೈತ್ರಿಯ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ದರೂ, ‘ಎಐಎಡಿಎಂಕೆ ಬೆನ್ನಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಗಟ್ಟಿಯಾಗಿ ನಿಲ್ಲಲಿದೆ. ಮುಂದಿನ ವಿಧಾನಸಭಾ ಚುನಾವಣೆಯು ವಂಶಾಡಳಿತಕ್ಕೆ ಕೊನೆ ಹಾಡಲಿದೆ’ ಎಂದು ಡಿಎಂಕೆ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ಉಲ್ಲೇಖಸಿ ಹೇಳಿದರು. ಪಳನಿಸ್ವಾಮಿ ಸರ್ಕಾರವನ್ನು ಶ್ಲಾಘಿಸಿದ ಶಾ, ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಿದ ಕೊಡುಗೆಗಳ ಪಟ್ಟಿ ನೀಡಿದರು.

ಶಾ ಅವರನ್ನು ‘ಆಧುನಿಕ ಚಾಣಕ್ಯ’ ಎಂದು ಪನ್ನೀರ್‌ಸೆಲ್ವಂ ಶ್ಲಾಘಿಸಿದರು. ‘ಮೋದಿ–ಶಾ ಜೋಡಿಯು ಜಗತ್ತಿನ ಎದುರು ಭಾರತ ಚಿತ್ರಣವನ್ನೇ ಬದಲಿಸಿದೆ’ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಮೈತ್ರಿ ಘೋಷಿಸಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿತು.

ಕಾರ್ಯಕ್ರಮದ ಬಳಿಕ ಪಂಚಾತಾರಾ ಹೋಟೆಲ್‌ನಲ್ಲಿ ಶಾ ಅವರನ್ನು ಇಬ್ಬರೂ ನಾಯಕರು ಭೇಟಿ ಮಾಡಿ ಚರ್ಚಿಸಿದರು.

ತಮಿಳುನಾಡಿನಲ್ಲಿ ಅಮಿತ್‌ ಶಾಗೆ ಭವ್ಯಸ್ವಾಗತ : ಚೆನ್ನೈ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಸಾಗುವ ಮಾರ್ಗಮಧ್ಯೆ ಕಾರಿನಿಂದ ಇಳಿದ ಶಾ, ಶಿಷ್ಟಾಚಾರವನ್ನು ಬದಿಗಿರಿಸಿ ಜಿಎಸ್‌ಟಿ ರಸ್ತೆಯಲ್ಲಿ ಬೆಂಬಲಿಗರ ಜೊತೆ ಸಂಚರಿಸಿದರು.

****

ರಾಮಲಿಂಗಂ ಸೇರ್ಪಡೆ ಒಳ್ಳೆಯ ಬೆಳವಣಿಗೆ. ಇದರಿಂದ ಡಿಎಂಕೆ ಶಕ್ತಿ ಕುಂದುವುದಲ್ಲದೇ, ರಾಜ್ಯದಲ್ಲಿ ಬಿಜೆಪಿ ಬಲ ವೃದ್ಧಿಸಲಿದೆ
-ಸಿ.ಟಿ.ರವಿ
ತಮಿಳುನಾಡು ಬಿಜೆಪಿ ಉಸ್ತುವಾರಿ

***

ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಹಲವು ರಾಜ್ಯಗಳಲ್ಲಿ ವಂಶಾಡಳಿತ ಕೊನೆ<br/>ಯಾಗಿದೆ. ಈಗ ತಮಿಳುನಾಡಿನ ಸರದಿ
-ಅಮಿತ್ ಶಾ, ಕೇಂದ್ರ ಗೃಹಸಚಿವ

****

ತಮಿಳುನಾಡಿನಲ್ಲಿ ಅಮಿತ್‌ ಶಾಗೆ ಭವ್ಯ ಸ್ವಾಗತ

ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿಗೆ ಶನಿವಾರ ಭೇಟಿ ನೀಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬೆಂಬಲಿಗರಲ್ಲಿ ಅಚ್ಚರಿ ಮೂಡಿಸಿದರು. ಚೆನ್ನೈ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಸಾಗುವ ಮಾರ್ಗಮಧ್ಯೆ ಕಾರಿನಿಂದ ಇಳಿದ ಅವರು, ಶಿಷ್ಟಾಚಾರವನ್ನು ಬದಿಗಿರಿಸಿ ಜಿಎಸ್‌ಟಿ ರಸ್ತೆಯಲ್ಲಿ ಬೆಂಬಲಿಗರ ಜೊತೆ ಕಾಲ್ನಡಿಗೆಯಲ್ಲಿ ಸಂಚರಿಸಿದರು.

ವಿಮಾನ ನಿಲ್ದಾಣದಲ್ಲಿ ಶಾ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ. ಪನ್ನೀರಸೆಲ್ವಂ, ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಎಲ್. ಮುರುಗುನ್ ಹಾಗೂ ಸಂಪುಟದ ಹಿರಿಯ ಸಚಿವರು ಬರಮಾಡಿಕೊಂಡರು.

ವಿಮಾನ ನಿಲ್ದಾಣದಿಂದ ಹೊರಟ ಕಾರು, ಕೆಲವೇ ನಿಮಿಷಗಳಲ್ಲಿ ಮಾರ್ಗಮಧ್ಯೆ ನಿಂತಿತು. ಕಾರಿನಿಂದಿಳಿದ ಶಾ, ತಮ್ಮ ಸ್ವಾಗತಕ್ಕೆ ಸೇರಿದ್ದ ಬಿಜೆಪಿ ಹಾಗೂ ಎಐಎಡಿಎಂಕೆ ಕಾರ್ಯಕರ್ತರತ್ತ ಕೈಬೀಸಿ ನಡೆದರು. ತಮಿಳುನಾಡು ಬಿಜೆಪಿ ಉಸ್ತುವಾರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಜತೆಗಿದ್ದರು.

ಜಲಾಶಯಕ್ಕೆ ಅಡಿಗಲ್ಲು

ಚೆನ್ನೈ ನಗರಕ್ಕೆ ಕುಡಿಯುವ ನೀರು ಪೂರೈಸುವ ₹380 ಕೋಟಿ ವೆಚ್ಚದ ಐದನೇ ಜಲಾಶಯಕ್ಕೆ ಅಮಿತ್ ಶಾ ಅಡಿಗಲ್ಲು ಹಾಕಿದರು. ಈ ಯೋಜನೆಯೂ ಸೇರಿದಂತೆ ಒಟ್ಟು ₹67 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಕರೂರು ಜಿಲ್ಲೆಯಲ್ಲಿ ಕಾವೇರಿ ನದಿಗೆ ₹1,620 ಕೋಟಿ ವೆಚ್ಚದ ಬ್ಯಾರೇಜ್ ನಿರ್ಮಾಣ, ₹61 ಸಾವಿರ ಕೋಟಿ ಮೊತ್ತದ ಎರಡನೇ ಹಂತದ ಮೆಟ್ರೊ ಯೋಜನೆಗಳೂ ಇದರಲ್ಲಿ ಸೇರಿವೆ.

***

ಅಳಗಿರಿ ಆಪ್ತ ಬಿಜೆಪಿಗೆ ಸೇರ್ಪಡೆ

ಡಿಎಂಕೆ ಪಕ್ಷದ ಮಾಜಿ ಸಂಸದ ಕೆ.ಪಿ. ರಾಮಲಿಂಗಂ ಅವರು ಶನಿವಾರ ಬಿಜೆಪಿ ಸೇರ್ಪಡೆಯಾದರು. ಡಿಎಂಕೆ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ ಅವರನ್ನು ಬಿಜೆಪಿಗೆ ಕರೆತರಲು ಯತ್ನಿಸುವುದಾಗಿ ಅವರು ಹೇಳಿದ್ದಾರೆ.

ರಾಜ್ಯ ಬಿಜೆಪಿ ಉಸ್ತುವಾರಿ ಸಿ.ಟಿ. ರವಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಲ್. ಮುರುಗನ್ ಅವರ ಸಮ್ಮುಖದಲ್ಲಿ ರಾಮಲಿಂಗಂ ಪಕ್ಷ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT