ಲಖನೌ: ಮುಂಬರುವ ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರ ದಲಿತ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರೆ. ಬಿಎಸ್‌ಪಿಯ ಮಾಜಿ ನಾಯಕರನ್ನು ಪಕ್ಷಕ್ಕೆ ಸೆಳಯಲು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಎಸ್‌ಪಿಯ ಉಚ್ಚಾಟಿತ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿರುವ ಅಖಿಲೇಶ್, ಆ ನಾಯಕರಿಗೆ ಅವರು ಈ ಹಿಂದೆ ಪ್ರತಿನಿಧಿಸಿದ್ದ ಕ್ಷೇತ್ರದಿಂದಲೇ ಸ್ಪರ್ಧಿಸಲು ಅವಕಾಶ ನೀಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.
ಬಿಸ್‌ಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಸುಖ್‌ದೇವ್ ರಾಜ್‌ಭರ್ ಅವರ ಪುತ್ರ ಕೆಲ ದಿನಗಳ ಹಿಂದಷ್ಟೇ ಎಸ್‌ಪಿ ಸೇರಿದ್ದಾರೆ. ಅಜಮಾಗಡ ಜಿಲ್ಲೆಯ ದಿದ್ರಾಗಂಜ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರಾಜ್‌ಭರ್ ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಬಿಎಸ್‌ಪಿ ತನ್ನ ಸಿದ್ಧಾಂತದಿಂದ ದೂರ ಸರಿದಿದೆ ಎಂದು ಬಹಿರಂಗ ಪತ್ರದ ಮೂಲಕ ಮಾಯಾವತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ಪುತ್ರನಿಗೆ ಎಸ್‌ಪಿಯೇ ಸೂಕ್ತ ಎಂದು ಹೇಳಿದ್ದರು.
ಬಿಎಸ್‌ಪಿಯಿಂದ ಉಚ್ಚಾಟಿತರಾಗಿರುವ ಲಾಲ್‌ಜಿ ವರ್ಮಾ, ರಾಮ್ ಅಚಲ್ ರಾಜ್‌ಭರ್ ಅವರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ಎಸ್‌ಪಿ ಉತ್ಸುಕವಾಗಿದೆ ಎಂದು ಮೂಲಗಳು ಹೇಳಿವೆ.
‘ಅವರ ಜತೆ ಮಾತುಕತೆ ನಡೆಸುತ್ತಿದ್ದೇವೆ. ಅವರ ಕ್ಷೇತ್ರಗಳನ್ನು ಅವರಿಗೇ ಬಿಟ್ಟುಕೊಡುವ ಬಗ್ಗೆ ನಮ್ಮ ತಕರಾರಿಲ್ಲ’ ಎಂದು ಎಸ್‌ಪಿಯ ಹಿರಿಯ ನಾಯಕರೊಬ್ಬರು ‘ಡೆಕ್ಕನ್ ಹೆರಾಲ್ಡ್’ಗೆ ತಿಳಿಸಿದ್ದಾರೆ.
‘ಬಿಎಸ್‌ಪಿಯ ಈ ಮಾಜಿ ನಾಯಕರು ಅವರ ಸಮುದಾಯಗಳಲ್ಲಿ ಭಾರಿ ಬೆಂಬಲ ಹೊಂದಿದ್ದಾರೆ. ಅವರಿಗೆ ಅರ್ಹ ಗೌರವ ನೀಡಲಿದ್ದೇವೆ’ ಎಂದೂ ಎಸ್‌ಪಿ ನಾಯಕ ಹೇಳಿದ್ದಾರೆ.
ಈ ಮಧ್ಯೆ, ಆರು ಮಂದಿ ಬಿಎಸ್‌ಪಿ ಶಾಸಕರು ಈಗಾಗಲೇ ಎಸ್‌ಪಿ ಸೇರಿದ್ದಾರೆ ಎನ್ನಲಾಗಿದೆ. 2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಈಗಾಗಲೇ ಚುರುಕುಗೊಂಡಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.