ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್‌ಪಿಯತ್ತ ರೈತ ಪಂಚಾಯಿತಿ ಚಿತ್ತ

ರೈತರ ಪ್ರಮುಖ ಬೇಡಿಕೆಗಳು, ಲಖಿಂಪುರ ಖೇರಿ ಪ್ರಕರಣದ ವಿಸ್ತೃತ ಚರ್ಚೆ
Last Updated 21 ನವೆಂಬರ್ 2021, 21:15 IST
ಅಕ್ಷರ ಗಾತ್ರ

ಲಖನೌ: ಇಲ್ಲಿ ಸೋಮವಾರ ನಡೆಯಲಿರುವ ರೈತ ಮಹಾಪಂಚಾಯಿತಿಯಲ್ಲಿಕನಿಷ್ಠ ಬೆಂಬಲ ಬೆಲೆ ಖಾತರಿ, ವರ್ಷವಿಡೀ ನಡೆದ ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ಪರಿಹಾರ, ರೈತರ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಲು ಆಗ್ರಹಿಸುವ ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ.

ಮಹಾ ಪಂಚಾಯಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವಂತೆ ಕರೆ ನೀಡಿರುವ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ಮುಖಂಡ ರಾಕೇಶ್‌ ಟಿಕಾಯತ್‌, ಕನಿಷ್ಠ ಬೆಂಬಲ ಬೆಲೆ, ರೈತರಿಗೆ ಪರಿಹಾರ ಹಾಗೂ ರೈತರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ಹಿಂದೆಗೆದುಕೊಳ್ಳುವ ಸಂಬಂಧ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.

ಎನ್‌ಡಿಎ ಸರ್ಕಾರ ಪ್ರಚುರಪಡಿಸಿದ್ದ ಕೃಷಿ ಸುಧಾರಣೆಗಳೆಲ್ಲ ಸುಳ್ಳಾಗಿದ್ದವು ಮತ್ತು ಯಾವುದೇ ತೆರನಾಗಿಯೂ ರೈತರಿಗೆ ಪ್ರಯೋಜನಕಾರಿಯಾಗುವಂತೆ ಇರಲಿಲ್ಲ ಎಂದು ಅವರು ಹೇಳಿದರು.

ಪಂಜಾಬ್‌, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಭಾಗ ಸೇರಿದಂತೆ ದೇಶದ ವಿವಿಧೆಡೆಯಿಂದ ಕೃಷಿಕರು ಮಹಾ ಪಂಚಾಯಿತಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬೃಹತ್‌ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಸೇರುವ ನಿರೀಕ್ಷೆ ಇದೆ ಎಂದು ಬಿಕೆಯು ಸ್ಥಳೀಯ ಮುಖಂಡರೊಬ್ಬರು ತಿಳಿಸಿದರು.

ಲಖಿಂಪುರ ಖೇರಿಯಲ್ಲಿನ ಪ್ರತಿಭಟನೆ–ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಆಶಿಶ್‌ ಮಿಶ್ರಾ ತಂದೆ, ಕೇಂದ್ರ ಸಚಿವ ಅಜಯ್‌ ಮಿಶ್ರಾ ಇನ್ನೂ ಸಚಿವರಾಗಿಯೇ ಮುಂದುವರಿದಿದ್ದಾರೆ. ಈ ಬಗ್ಗೆಯೂ ಮಹಾ ಪಂಚಾಯಿತಿಯಲ್ಲಿಚರ್ಚೆಯಾಗಲಿದೆ ಎಂದೂ ಅವರು ಹೇಳಿದರು.

ತಮ್ಮ ಹೋರಾಟದಲ್ಲಿ ರೈತರು ರಾಜಕೀಯ ಪಕ್ಷಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿಲ್ಲ ಹಾಗೂ ತಮ್ಮದು ರಾಜಕೀಯಕ್ಕೆ ಹೊರತಾದ ಹೋರಾಟ ಎಂದು ಹೇಳಿದ್ದಾರೆ. ಆದರೆ, ರೈತರ ಈ ಹೋರಾಟಕ್ಕೆ ವಿರೋಧ ಪಕ್ಷಗಳು ಸಂಪೂರ್ಣ ಬೆಂಬಲ ನೀಡಿದ್ದು, ಅವರು ಆಯೋಜಿಸುವ ಮಹಾ ಪಂಚಾಯಿತಿಗಳಲ್ಲಿ ಪ್ರೇಕ್ಷಕರಾಗಿಯಷ್ಟೇ ಭಾಗವಹಿಸಿದ್ದಾರೆ.

ಮಹಾ ಪಂಚಾಯಿತಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಇಲ್ಲಿನ ಬಿಜೆಪಿ ಮುಖಂಡರು, ‘ಕೃಷಿ ಕಾಯ್ದೆಗಳ ಹಿಂದಕ್ಕೆ ಪಡೆಯಬೇಕು ಎಂಬ ರೈತರ ಪ್ರಮುಖ ಬೇಡಿಕೆಗೆ ಸಮ್ಮತಿಸಲಾಗಿದೆ. ಅದಾದ ಮೇಲೂ ಪ್ರತಿಭಟನೆ ಮುಂದುವರಿಸುವುದು ಸಮರ್ಥನೀಯವಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT