ಭಾನುವಾರ, ಜುಲೈ 3, 2022
23 °C
ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ: ರಾಜಕೀಯ ವಲಯದ ವಿಶ್ಲೇಷಣೆ

ಮಹಾರಾಷ್ಟ್ರ: ‘ಮಹಾ ವಿಕಾಸ್‌ ಆಘಾಡಿ' ಮುಖಂಡರ ವಾಕ್ಸಮರ ತಾರಕಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬರುವ ಚುನಾವಣೆಗಳಲ್ಲಿ ಪಕ್ಷವು ಏಕಾಂಗಿಯಾಗಿಯೇ ಸ್ಪರ್ಧಿಸಲಿದೆ ಎಂಬುದಾಗಿ ಕಾಂಗ್ರೆಸ್‌ ಮುಖಂಡರು ಹೇಳಿದ ನಂತರ ಆಡಳಿತಾರೂಢ ಮೈತ್ರಿಕೂಟ ‘ಮಹಾ ವಿಕಾಸ್‌ ಆಘಾಡಿ’ಯ (ಎಂವಿಎ) ಅಂಗ ಪಕ್ಷಗಳ ನಡುವೆ ಆರಂಭವಾಗಿರುವ ವಾಕ್ಸಮರ ಈಗ ತಾರಕಕ್ಕೇರಿದೆ.

ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಈ ಮೈತ್ರಿಕೂಟದ ಅಂಗಪಕ್ಷಗಳಾಗಿವೆ. ದಿನಗಳು ಉರುಳಿದಂತೆ, ಮೂರೂ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರ ಉಲ್ಬಣಗೊಳ್ಳುತ್ತಿದ್ದು, ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಮುಂದಿನ ವರ್ಷ ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಲಿವೆ. ಇದನ್ನು, ವಿಧಾನಸಭೆಗೆ ನಡೆಯುವ ಮಿನಿ ಚುನಾವಣೆ ಎಂದೇ ಹೇಳಲಾಗುತ್ತದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗಳಲ್ಲಿ ಪಕ್ಷವು ಏಕಾಂಗಿಯಾಗಿಯೇ ಸ್ಪರ್ಧಿಸಲಿದೆ ಎಂದು ಕಾಂಗ್ರೆಸ್‌ನ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲೆ, ಮುಂಬೈ ಮಹಾನಗರ ಘಟಕದ ಅಧ್ಯಕ್ಷ ಭಾಯ್‌ ಜಗತಾಪ್‌ ಅವರು ಇತ್ತೀಚೆಗೆ ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು, ‘ಏಕಾಂಗಿಯಾಗಿಯೇ ಸ್ಪರ್ಧಿಸಲು ಕಾಂಗ್ರೆಸ್‌ ಬಯಸಿದರೆ ನಾವೇನೂ ಮಾಡಲು ಆಗದು. ಚುನಾವಣೆಯಲ್ಲಿ ಆ ಪಕ್ಷವನ್ನು ಎದುರಿಸುವುದೊಂದೇ ನಮ್ಮ ಮುಂದಿರುವ ಆಯ್ಕೆ’ ಎಂದು ಹೇಳಿದ್ದರು.

ರಾಹುಲ್‌ ಗಾಂಧಿಯವರ ಜನ್ಮದಿನದ ನಿಮಿತ್ತ ಕಾಂಗ್ರೆಸ್‌ ವತಿಯಿಂದ ಶನಿವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟೋಲೆ, ಜಗತಾಪ್‌ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲ ಮುಖಂಡರು, ಮುಂದಿನ ಚುನಾವಣೆಗಳಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಬೇಕು ಎಂದು ಪ್ರತಿಪಾದಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಸುಶೀಲಕುಮಾರ್‌ ಶಿಂಧೆ, ಪೃಥ್ವಿರಾಜ್‌ ಚವ್ಹಾಣ್, ಅಶೋಕ್‌ ಚವ್ಹಾಣ್‌ ಅವರೂ ಈ ವೇದಿಕೆಯಲ್ಲಿ ಇದ್ದರು. ಅಶೋಕ್‌ ಚವ್ಹಾಣ್ ಈಗಿನ ಎಂವಿಎ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದಾರೆ.

ಮಹಾರಾಷ್ಟ್ರ ಉಸ್ತುವಾರಿಯಾಗಿರುವ ಎಐಸಿಸಿ ಕಾರ್ಯದರ್ಶಿ ಎಚ್‌.ಕೆ.ಪಾಟೀಲ ಮಾತನಾಡಿ, ‘ಯಾರೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಬೇಕು ಎಂಬ ವಿಚಾರವನ್ನು ಹೈಕಮಾಂಡ್‌ಗೆ ಬಿಡಿ. ಪಕ್ಷವನ್ನು ಬಲಪಡಿಸಲು ಎಲ್ಲರೂ ಶ್ರಮಿಸಿ’ ಎಂದು ಕಿವಿಮಾತು ಹೇಳಿದ್ದರು.

ಅದೇ ದಿನ ಕೆಲವು ಗಂಟೆಗಳ ನಂತರ, ಶಿವಸೇನಾ ಪಕ್ಷದ 55ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಠಾಕ್ರೆ ಅವರು, ಪಟೋಲೆ ಹಾಗೂ ಜಗತಾಪ್‌ ಅವರ ಹೇಳಿಕೆಗಳನ್ನು ಪ್ರಸ್ತಾಪಿಸದೇ ಅವರಿಗೆ ತೀಕ್ಷ್ಣವಾದ ತಿರುಗೇಟು ನೀಡಲು ಈ ವೇದಿಕೆಯನ್ನು ಬಳಸಿಕೊಂಡರು.

‘ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಘೋಷಣೆ ಮಾಡುವ ಸಮಯ ಇದಲ್ಲ. ಆದರೆ, ಜನರ ಸಮಸ್ಯೆಗಳನ್ನು ಪ‍ರಿಹರಿಸಲು ಗಮನ ನೀಡದೇ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡುವವರಿಗೆ ಜನರು ಚಪ್ಪಲಿಯಿಂದ ಹೊಡೆಯುತ್ತಾರೆ’ ಎಂದು ಚಾಟಿ ಬೀಸಿದ್ದರು.

ಠಾಕ್ರೆ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಪಟೋಲೆ, ‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಎಂವಿಎ ರಚಿಸಲಾಗಿದೆ. ಈ ಹೊಂದಾಣಿಕೆ ಶಾಶ್ವತವೇನೂ ಅಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು