ಒಟ್ಟಾಗಿ ಚುನಾವಣೆಯಲ್ಲಿ ಹೋರಾಟ: ಸಿದ್ದು-ಚನ್ನಿ ಒಗ್ಗಟ್ಟು ಪ್ರದರ್ಶನ

ಚಂಡೀಗಡ; ಪಂಜಾಬ್ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಸಭೆಯಲ್ಲಿ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಒಗ್ಗಟ್ಟು ಪ್ರದರ್ಶಿಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.
ವಿಧಾನಸಭಾ ಚುನಾವಣಾ ಕಾರ್ಯತಂತ್ರದ ಚರ್ಚೆ ನಡೆಸಲು ಮಂಗಳವಾರ ಸಂಜೆ ಕರೆದಿದ್ದ ಶಾಸಕರು ಮತ್ತು ಹಿರಿಯ ನಾಯಕರನ್ನೊಳಗೊಂಡ ಸಭೆಯಲ್ಲಿ ಅವರಿಬ್ಬರು ಪರಸ್ಪರ ಭೇಟಿಯಾದರು. ಮುಂದಿನ ಚುನಾವಣೆಯನ್ನು ಒಟ್ಟಾಗಿ ಎದುರಿಸುವುದಾಗಿ ಉಭಯ ನಾಯಕರು ಘೋಷಿಸಿದರು ಎಂದು ಅವರು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷ ಘೋಷಿಸಿದ ದಿನವೇ ಈ ಸಭೆ ನಡೆದಿದೆ,
ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಪಂಜಾಬ್ ಉಸ್ತುವಾರಿ ಹರೀಶ್ ಚೌಧರಿ ಸಹ ಸಭೆಯಲ್ಲಿದ್ದರು, ಚುನಾವಣೆಗೂ ಮುನ್ನ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಬಿಂಬಿಸಲು ಕಾಂಗ್ರೆಸ್ ಪ್ರಯತ್ನಿಸಿದೆ.
ಎಲ್ಲವೂ ಸರಿ ಇದೆ ಎಂದು ಸಭೆ ಬಳಿಕ ಸಿಧು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಿಎಂ ಚನ್ನಿ ಮತ್ತು ಚೌಧರಿ ಕೇದಾರನಾಥಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು.
ಸಭೆಯಲ್ಲಿ ಸಿಧು ಮತ್ತು ಚನ್ನಿ ಮುಂದಿನ ಚುನಾವಣೆ ಎದುರಿಸುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು ಎಂದು ಶಾಸಕ ನವತೇಜ್ ಸಿಂಗ್ ಚೀಮಾ ಹೇಳಿದ್ದಾರೆ.
ಎಲ್ಲ ನಾಯಕರು ಒಟ್ಟಾಗಿ ಮುಂದಿನ ಚುನಾವಣೆ ಎದುರಿಸಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.