ಮದುವೆ ಮುಗಿಸಿ ಹೊರಟಿದ್ದ ಜೀಪ್–ಟ್ರಕ್ ಅಪಘಾತ: ಅಮೇಥಿಯಲ್ಲಿ 6 ಮಂದಿ ಸಾವು

ಅಮೇಥಿ (ಉತ್ತರಪ್ರದೇಶ): ಮದುವೆ ಮುಗಿಸಿ ವಾಪಸ್ ಆಗುತ್ತಿದ್ದ ಜೀಪ್ ಹಾಗೂ ಟ್ರಕ್, ಜಿಲ್ಲೆಯ ಗೌರಿಗಂಜ್ ಪ್ರದೇಶದಲ್ಲಿ ಡಿಕ್ಕಿಯಾಗಿವೆ. ಪರಿಣಾಮವಾಗಿ ಜೀಪ್‌ನಲ್ಲಿದ್ದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬುಗಂಜ್ ಸಗ್ರಾ ಆಶ್ರಮದ ಸಮೀಪ ಭಾನುವಾರ ತಡರಾತ್ರಿ 12.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಮೇಥಿಯ ಬೇರೆಬೇರೆ ಊರುಗಳ ಜನರಿದ್ದ ಬೊಲೆರೊ ಜೀಪ್, ರಾಯ್ ಬರೇಲಿ ಜಿಲ್ಲೆಯ ನಾಸಿರಾಬಾದ್ ಪ್ರದೇಶದಿಂದ ಬರುತ್ತಿತ್ತು ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್‌ಪಿ) ದಿನೇಶ್ ಸಿಂಗ್ ಹೇಳಿದ್ದಾರೆ.
ಮೃತಪಟ್ಟವರನ್ನು ಕಲ್ಲು (40), ಅವರ ಮಗ ಸೌರಭ್ (8), ಕೃಷ್ಣ ಕುಮಾರ್ ಸಿಂಗ್ (30), ಶಿವ ಮಿಲನ್, ರವಿ ತಿವಾರಿ ಮತ್ತು ತ್ರಿವೇಣಿ ಪ್ರಸಾದ್ ಎಂದು ಗುರುತಿಸಲಾಗಿದೆ. ನಾಲ್ವರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಲಖನೌಗೆ ಕರೆದೊಯ್ಯಲು ಶಿಫಾರಸು ಮಾಡಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ಸದ್ಯ ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಟ್ರಕ್‌ಅನ್ನು ವಶಕ್ಕೆ ಪಡೆಯಲಾಗಿದೆ. ಟ್ರಕ್ ಚಾಲಕ ಪರಾರಿಯಾಗಿದ್ದಾನೆ ಎಂದೂ ಹೇಳಿದ್ದಾರೆ.
ಡಿಕ್ಕಿಯಾದ ರಭಸಕ್ಕೆ ಜೀಪ್ ಜಖಂಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರಿಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂತಾಪಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವುಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.