ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದಲ್ಲಿ ನಿಗೂಢ ರೋಗ: 347 ಮಂದಿ ಅಸ್ವಸ್ಥ, 1 ಸಾವು, ಆಸ್ಪತ್ರೆಗೆ ಸಿಎಂ ದೌಡು

Last Updated 7 ಡಿಸೆಂಬರ್ 2020, 10:14 IST
ಅಕ್ಷರ ಗಾತ್ರ

ಎಲ್ಲೂರು: ಆಂಧ್ರಪ್ರದೇಶದ ಎಲ್ಲೂರಿನಲ್ಲಿ ನಿಗೂಢ ಕಾಯಿಲೆಯೊಂದು ಹರಡಿದೆ. ಈಗಾಗಲೇ 347 ಮಂದಿಯಲ್ಲಿ ರೋಗ ಕಾಣಿಸಿಕೊಂಡಿದ್ದು, ಒಬ್ಬರು ಸಾವಿಗೀಡಾಗಿದ್ಧಾರೆ.

ಭಾನುವಾರ 292 ಮಂದಿ ಅನಾರೋಗ್ಯಕ್ಕೆ ಗುರಿಯಾಗಿದ್ದರೆ, ಸೋಮವಾರದ ಹೊತ್ತಿಗೆ ಆ ಸಂಖ್ಯೆ 347ಕ್ಕೆ ಏರಿತು. 200 ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವೈ.ಎಸ್‌ ಜಗನ್‌ಮೋಹನ ರೆಡ್ಡಿ ಎಲ್ಲೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ಮಂಗಳಗಿರಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಂದ ರಕ್ತದ ಮಾದರಿ ಸಂಗ್ರಹಿಸಿದ್ದಾರೆ.

ಅನಾರೋಗ್ಯಕ್ಕೀಡಾದವರಲ್ಲಿ 20-30 ವರ್ಷ ವಯಸ್ಸಿನವರೇ ಹೆಚ್ಚಾಗಿದ್ದಾರೆ. 12 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ 45 ಮಕ್ಕಳೂ ಅನಾರೋಗ್ಯಗೊಂಡಿದ್ದಾರೆ. ಸೊಳ್ಳೆಗಳ ನಿಯಂತ್ರಿಸಲೆಂದು ಬಳಸಲಾದ ಹೊಗೆಯಿಂದಾಗಿ ಜನರು ಕಾಯಿಲೆ ಬಿದ್ದಿರಬಹುದು ಎಂದು ಅನುಮಾನಿಸಲಾಗಿದೆಯಾದರೂ, ಅದು ಖಚಿತವಾಗಿಲ್ಲ.

ಕಾಯಿಲೆಗೆ ಗುರಿಯಾದವರು ಮೂರ್ಚೆ, ವಾಕರಿಕೆಯೊಂದಿಗೆ ದೀಢೀರ್ ಕುಸಿದು ಬೀಳುತ್ತಿದ್ದಾರೆ. ರಕ್ತ ಪರೀಕ್ಷೆ, 'ಸಿ.ಟಿ. ಸ್ಕ್ಯಾನ್‌' ನಂತರವೂ ರೋಗಕ್ಕೆ ನಿಕರವಾದ ಕಾರಣ ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗಿಲ್ಲ.

'ಕಲ್ಚರ್‌ ಟೆಸ್ಟ್‌' (ಒಂದು ಬಗೆಯ ಪರೀಕ್ಷೆ) ನಂತರವೇ ರೋಗಕ್ಕೆ ನಿಕರವಾದ ಕಾರಣ ತಿಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.

ರೋಗಕ್ಕೆ ಮಲಿನ ನೀರು ಕಾರಣ ಎಂದು ಆರಂಭದಲ್ಲಿ ಶಂಕಿಸಲಾಗಿತ್ತಾದರೂ, ಮಾದರಿ ಪರೀಕ್ಷೆಗಳು ಅದನ್ನು ತಳ್ಳಿಹಾಕಿವೆ.

ನವದೆಹಲಿಯ ಏಮ್ಸ್‌ ತಜ್ಞರೊಂದಿಗೆ ಮಾತನಾಡಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಜಿ.ವಿ.ಎಲ್‌ ನರಸಿಂಹ ರಾವ್‌, 'ವಿಷಕಾರಿ ಆರ್ಗನೋಕ್ಲೋರಿನ್ ಎಂಬ ಪದಾರ್ಥವು ರೋಗಕ್ಕೆ ಕಾರಣವಿರಬಹುದು ಎಂದು ತಜ್ಞರು ಹೇಳಿದ್ದಾರೆ,' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT