ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಅನುಮತಿ ನೀಡಿದರೆ ವಿದೇಶಗಳಿಂದ ಲಸಿಕೆ ಖರೀದಿಸುತ್ತೇವೆ: ಆಂಧ್ರ ಪ್ರದೇಶ

Last Updated 11 ಮೇ 2021, 4:04 IST
ಅಕ್ಷರ ಗಾತ್ರ

ಅಮರಾವತಿ: ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದರೆ ವಿದೇಶಗಳಿಂದ ನೇರವಾಗಿ ಕೋವಿಡ್‌ ಲಸಿಕೆ ಖರೀದಿಸಲು ಸಿದ್ಧರಿದ್ದೇವೆ ಎಂದು ಆಂಧ್ರ ಪ್ರದೇಶದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್‌ ಸಿಂಘಾಲ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಘಾಲ್‌, ʼಸ್ಪುಟ್ನಿಕ್‌ ವಿ ಸೇರಿದಂತೆ ಲಭ್ಯವಿರುವ ಯಾವುದೇ ಲಸಿಕೆ ಖರೀದಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಅದಕ್ಕಾಗಿ ಜಾಗತಿಕ ಟೆಂಡರ್‌ ಕರೆಯುವುದಕ್ಕೂ ನಿರ್ಧರಿಸಿದ್ದೇವೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಒಂದುವೇಳೆ ಕೇಂದ್ರದಿಂದ ಒಪ್ಪಿಗೆ ದೊರೆತರೆ, ರಾಜ್ಯ ಸರ್ಕಾರವು ವಿದೇಶಿ ಲಸಿಕೆಗಳನ್ನು ಖರೀದಿಸಲು ಸಿದ್ಧವಾಗಿದೆʼ ಎಂದು ತಿಳಿಸಿದ್ದಾರೆ.

ಮಾತ್ರವಲ್ಲದೆ, ಯಾವುದೇ ಕಂಪೆನಿಯು ರಾಜ್ಯದಲ್ಲಿ ಲಸಿಕೆ ನೀಡಲು ಪ್ರಾಯೋಜಕತ್ವ ವಹಿಸಿದರೆ, ಅಗತ್ಯವಿರುವ ಎಲ್ಲ ರೀತಿಯ ಅನುಮತಿಯನ್ನು ಸರ್ಕಾರ ತಕ್ಷಣವೇ ನೀಡಲಿದೆ ಎಂದೂ ಹೇಳಿದ್ದಾರೆ.

ಮುಂದುವರಿದು, 45 ವರ್ಷ ಮೇಲ್ಪಟ್ಟವರಿಗೆ ಮೊದಲು ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದ ಈ ಮನವಿಯನ್ನು ಕೇಂದ್ರ ಸರ್ಕಾರವೂ ಒಪ್ಪಿಕೊಂಡಿದೆ ಎಂದು ಮಾಹಿತಿ ನೀಡಿದರು.

ʼರಾಜ್ಯದ ಜನರಿಗೆ ಅಗತ್ಯವಿರುವ ನಾಲ್ಕು ಕೋಟಿ ಲಸಿಕೆ ಖರೀದಿಸಲು ರಾಜ್ಯವು 1,600 ಕೋಟಿ ರೂ. ವ್ಯಯಿಸಲು ಸಿದ್ಧವಿದೆ. ಆದಾಗ್ಯೂ ರಾಜ್ಯ ಸರ್ಕಾರ ನೇರವಾಗಿ ಲಸಿಕೆ ಖರೀದಿಲು ಸಾಧ್ಯವಿಲ್ಲ. ಕಂಪನಿಗಳು ಮೊದಲಿಗೆ ತಮ್ಮ ಉತ್ಪಾದನೆಯ ಅರ್ಧದಷ್ಟು ಭಾಗವನ್ನು ಕೇಂದ್ರಕ್ಕೆ ಪೂರೈಸಬೇಕಾಗುತ್ತದೆ ಮತ್ತು ಕೇಂದ್ರದ ಸೂಚನೆಯಂತೆ ಉಳಿದ ಶೇ. 50 ಲಸಿಕೆಯನ್ನು ರಾಜ್ಯಗಳು ಖರೀದಿಸಬೇಕಾಗುತ್ತದೆ. ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದೆʼ ಎಂದು ಉಲ್ಲೇಖಿಸಿದ್ದಾರೆ.

ಸರ್ಕಾರವು ರಾಜ್ಯದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ಸಿದ್ಧವಾಗಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT