ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಪ್ರದೇಶದಲ್ಲಿ ಇ–ಸ್ಕೂಟರ್ ಬ್ಯಾಟರಿ ಸ್ಫೋಟ; ವ್ಯಕ್ತಿ ಸಾವು, ಮೂವರಿಗೆ ಗಾಯ

Last Updated 23 ಏಪ್ರಿಲ್ 2022, 7:35 IST
ಅಕ್ಷರ ಗಾತ್ರ

ವಿಜಯವಾಡ (ಆಂಧ್ರ ಪ್ರದೇಶ): ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನದ ಬ್ಯಾಟರಿ ಸ್ಫೋಟಗೊಂಡ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದಲ್ಲಿ ವರದಿಯಾಗಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟು ಮೂವರು ಗಭೀರವಾಗಿ ಗಾಯಗೊಂಡಿದ್ದಾರೆ.

ವಿಜಯವಾಡದಲ್ಲಿ ಶನಿವಾರ ಬೆಳಿಗ್ಗೆ ದುರಂತ ಸಂಭವಿಸಿದ್ದು,ಸ್ಕೂಟರ್‌ನ ಬ್ಯಾಟರಿಯನ್ನು ಮಲಗುವ ಕೋಣೆಯಲ್ಲಿ ಚಾರ್ಜ್‌ಗೆ ಹಾಕಲಾಗಿತ್ತು. ಸ್ಫೋಟದ ಪರಿಣಾಮ ಶಿವಕುಮಾರ್‌, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ.

ಚೀರಾಟದ ಶಬ್ದ ಕೇಳಿ ನೆರೆಹೊರೆಯವರು ರಕ್ಷಣೆಗೆ ಧಾವಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಶಿವಕುಮಾರ್‌ ಮೃತಪಟ್ಟಿದ್ದು, ಅವರ ಪತ್ನಿಯ ಸ್ಥಿತಿ ಗಂಭೀರವಾಗಿದೆ.

ಮೃತ ಶಿವಕುಮಾರ್‌ ಅವರು ಶುಕ್ರವಾರವಷ್ಟೇ ಇ–ಸ್ಕೂಟರ್‌ ಖರೀದಿಸಿದ್ದರು. ಈ ವಾಹನದ ತಯಾರಕ ಕಂಪೆನಿ ಮತ್ತು ಇತರ ವಿವರ ಇನ್ನಷ್ಟೇ ತಿಳಿಬೇಕಿದೆ.

ಇದೇ ವಾರ ತೆಲಂಗಾಣದಲ್ಲಿ ಇಂತಹದೇ ಪ್ರಕರಣ ವರದಿಯಾಗಿತ್ತು. ನಿಜಾಮಾಬಾದ್ ಜಿಲ್ಲೆಯಲ್ಲಿ ಬುಧವಾರ (ಏ.20) ಸಂಭವಿಸಿದ ದುರಂತದಿಂದಾಗಿ 80 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, ಅವರ ಕುಟುಂಬದ ನಾಲ್ವರು ಗಾಯಗೊಂಡಿದ್ದರು.

ಮೃತಪಟ್ಟವರನ್ನು ಬಿ.ರಾಮಸ್ವಾಮಿ ಎಂದು ಗುರುತಿಸಲಾಗಿದ್ದು, ಅವರ ಮಗ ಬಿ.ಪ್ರಕಾಶ್‌ ಕಳೆದೊಂದು ವರ್ಷದಿಂದ ಇ–ಸ್ಕೂಟರ್‌ ಬಳಸುತ್ತಿದ್ದರು. ಪ್ರಕರಣ ಸಂಬಂಧ ಹೈದರಾಬಾದ್‌ ಮೂಲದ ಸ್ಕೂಟರ್‌ ತಯಾರಕ ಮತ್ತು ವಿತರಕ ಕಂಪೆನಿ 'ಪ್ಯೂರ್ ಇವಿ' (Pure EV) ವಿರುದ್ಧ ಐಪಿಸಿಯ 304ಎ (ಬೇಜವಾಬ್ದಾರಿಯಿಂದ ಸಾವಿಗೆ ಕಾರಣ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಘಟನೆಗೆ ವಿಷಾದ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿರುವ 'ಪ್ಯೂರ್ ಇವಿ', ತನಿಖೆಗೆ ಸಹಕರಿಸುವುದಾಗಿ ಮತ್ತು ಗ್ರಾಹಕರಿಂದ ವಿವರ ಪಡೆಯುತ್ತಿರುವುದಾಗಿ ತಿಳಿಸಿದೆ.

ಇಂತಹ (ಬ್ಯಾಟರಿ ಸ್ಫೋಟ) ಪ್ರಕರಣಗಳು ಮರುಕಳಿಸುತ್ತಿರುವುದು, ಇ–ಸ್ಕೂಟರ್‌ಗಳ ಬ್ಯಾಟರಿ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚಿಸಿದೆ.

'ಪ್ಯೂರ್ ಇವಿ'ಯ ಮೂರು ಸ್ಕೂಟರ್‌ಗಳು ಹಾಗೂ ಇತರ ವಿದ್ಯುತ್ ಚಾಲಿತ ವಾಹನ ತಯಾರಿಕಾ ಕಂಪೆನಿಗಳ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವು ಪ್ರಕರಣಗಳು ಇತ್ತೀಚಿನ ತಿಂಗಳುಗಳಲ್ಲಿವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT