ಚೆನ್ನೈ: ಚೆನ್ನೈ ಬಳಿಯ ವಂಡಲೂರಿನ ಅರಿಗ್ನಾರ್ ಅನ್ನಾ ಪ್ರಾಣಿ ಸಂಗ್ರಹಾಲಯದಲ್ಲಿ ಮತ್ತೊಂದು ಸಿಂಹ ಕೋವಿಡ್‌ನಿಂದಾಗಿ ಬುಧವಾರ ಮೃತಪಟ್ಟಿದೆ.
12 ವರ್ಷದ ಪಾಥಬನಾಥನ್ ಎಂಬ ಏಷ್ಯಾಟಿಕ್ ಗಂಡು ಸಿಂಹ ಸಾವನ್ನಪ್ಪಿದೆ. ಭೋಪಾಲ್‌ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್(ಎನ್ಐಹೆಚ್ಎಸ್ಎಡಿ) ವರದಿಯ ಪ್ರಕಾರ ಸಿಂಹಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಸೋಂಕಿತ ಸಿಂಹಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿತ್ತು ಎಂದು ಸಂಗ್ರಹಾಲಯದ ಉಪನಿರ್ದೇಶಕರು ಖಚಿತಪಡಿಸಿದ್ದಾರೆ.
ಜೂನ್ 4 ರಂದು ಇದೇ ಸಂಗ್ರಹಾಲಯದಲ್ಲಿ ಸಿಂಹಿಣಿ ನೀಲಾ ಕೋವಿಡ್-19 ಗೆ ಬಲಿಯಾಗಿತ್ತು. ಇತರೆ ಒಂಬತ್ತು ಪ್ರಾಣಿಗಳಲ್ಲಿ ಕೋವಿಡ್ ಪಾಸಿಟಿವ್ ಬಂದಿತ್ತು.
ಸಿಂಹಗಳಲ್ಲಿ ಸೋಂಕು ಕಾಣಿಸಿಕೊಂಡಾಗಿನಿಂದ ಇತರ ಪ್ರಾಣಿಗಳಿಗೆ ಹರಡುವುದನ್ನು ತಡೆಗಟ್ಟುವ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಮೂರು ಸಿಂಹಗಳು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.