ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯುತ ಪ್ರತಿಭಟನೆಯೊಳಗೆ ನುಸುಳಿದ ಸಮಾಜಘಾತುಕರು: ರೈತರ ಒಕ್ಕೂಟ ಆರೋಪ

Last Updated 26 ಜನವರಿ 2021, 14:15 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ಸಮಾಜಘಾತುಕ ಶಕ್ತಿಗಳು ಶಾಂತಿಯುತ ಹೋರಾಟದಲ್ಲಿ ನುಸುಳಿವೆ ಎಂದು ರೈತರ ಸಂಘಟನೆಗಳ ಒಕ್ಕೂಟ 'ಸಂಯುಕ್ತ ಕಿಸಾನ್‌ ಮೋರ್ಚಾ' ಹೇಳಿದೆ. ಮಂಗಳವಾರ ಟ್ರ್ಯಾಕ್ಟರ್‌ ರ್‍ಯಾಲಿಯ ಸಂದರ್ಭದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಭಾಗಿಯಾಗಿರುವವರಿಗೂ ಒಕ್ಕೂಟಕ್ಕೂ ಸಂಬಂಧವಿಲ್ಲ ಎಂದಿದೆ.

ಟ್ರ್ಯಾಕ್ಟರ್‌ ರ್‍ಯಾಲಿಯ ಸಂದರ್ಭದಲ್ಲಿ ರೈತರ ಕೆಲವು ಗುಂಪು ಪೂರ್ವನಿಗದಿತ ಮಾರ್ಗದಿಂದ ಬೇರ್ಪಟ್ಟು ಮತ್ತೊಂದು ಹಾದಿ ಹಿಡಿದ ಕಾರಣದಿಂದ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಉಂಟಾಯಿತು. ಹಿಂಸಾಚಾರದ ಘಟನೆಗಳನ್ನು ರೈತ ಸಂಘಟನೆಗಳ ಒಕ್ಕೂಟ ಖಂಡಿಸಿದ್ದು, ಅವು ಸ್ವೀಕಾರಾರ್ಹವಲ್ಲ ಎಂದಿದೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಹಲವು ಗಡಿ ಭಾಗಗಳಲ್ಲಿ 41 ರೈತ ಸಂಘಟನೆಗಳು 'ಸಂಯುಕ್ತ ಕಿಸಾನ್‌ ಮೋರ್ಚಾ' ಒಕ್ಕೂಟವಾಗಿ ಪ್ರತಿಭಟನೆ ನಡೆಸುತ್ತಿವೆ.

'ಇಂದಿನ ರೈತರ ಗಣರಾಜ್ಯೋತ್ಸವ ದಿನದ ಪರೇಡ್‌ನಲ್ಲಿ ಭಾಗಿಯಾದ ರೈತರಿಗೆ ಧನ್ಯವಾದಗಳು. ಹಾಗೇ ಇಂದು ನಡೆದಿರುವ ಘಟನೆಗಳು ಸ್ವೀಕಾರಾರ್ಹವಲ್ಲ, ಅವುಗಳನ್ನು ಖಂಡಿಸುತ್ತೇವೆ ಹಾಗೂ ವಿಷಾದಿಸುತ್ತೇವೆ, ಆ ಕಾರ್ಯಗಳಲ್ಲಿ ಭಾಗಿಯಾಗಿರುವವರಿಗೂ ನಮಗೂ ಸಂಬಂಧವಿಲ್ಲ' ಎಂದು ರೈತರ ಒಕ್ಕೂಟ ಘೋಷಿಸಿದೆ.


'ನಮ್ಮ ಪೂರ್ಣ ಪ್ರಯತ್ನಗಳ ನಡುವೆಯೂ ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ನಿಗದಿತ ಮಾರ್ಗವನ್ನು ಉಲ್ಲಂಘಿಸಿ, ಖಂಡನೀಯ ಕಾರ್ಯಗಳಲ್ಲಿ ತೊಡಗಿದರು. ಸಮಾಜಘಾತುಕ ಶಕ್ತಿಗಳು ನುಸುಳದಿದ್ದರೆ ಪ್ರತಿಭಟನೆ ಶಾಂತಿಯುತವಾಗಿರುತ್ತಿತ್ತು. ಶಾಂತಿ ನಮ್ಮ ಅತಿ ದೊಡ್ಡ ಶಕ್ತಿಯಾಗಿದೆ ಹಾಗೂ ಯಾವುದೇ ಉಲ್ಲಂಘನೆಯೂ ಹೋರಾಟವನ್ನು ಘಾಸಿ ಪಡಿಸುತ್ತದೆ' ಎಂದು ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ.

ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ದೆಹಲಿಯ ಐಟಿಒದಲ್ಲಿ ಟ್ರ್ಯಾಕ್ಟರ್‌ ಮಗುಚಿ ಬಿದ್ದು ಪ್ರತಿಭಟನಾ ನಿರತ ರೈತ ಸಾವಿಗೀಡಾಗಿರುವ ಬೆನ್ನಲ್ಲೇ ರೈತರ ಒಕ್ಕೂಟ ಪ್ರಕಟಣೆ ಹೊರಡಿಸಿದೆ. ನಗರದ ಹಲವು ಭಾಗಗಳಲ್ಲಿ ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದು, ಅಶ್ರುವಾಯು ಸಹ ಸಿಡಿಸಿದ್ದಾರೆ.

ನಮ್ಮ ಶಿಸ್ತಿನ ಮಾರ್ಗವನ್ನು ಉಲ್ಲಂಘಿಸಿದ ಎಲ್ಲ ಘಟನೆಗಳಿಂದ ನಮ್ಮನ್ನು ನಾವು ಬೇರ್ಪಡಿಸಿಕೊಂಡಿದ್ದೇವೆ. ಪರೇಡ್‌ನ ನಿಯಮಗಳು ಹಾಗೂ ಮಾರ್ಗಕ್ಕೆ ಬದ್ಧರಾಗಿರುವಂತೆ ನಾವು ಎಲ್ಲರಿಗೂ ಆಗ್ರಹಿಸುತ್ತೇವೆ. ಹಿಂಸಾತ್ಮಕ ಕಾರ್ಯಗಳಲ್ಲಿ ಅಥವಾ ರಾಷ್ಟ್ರೀಯ ಘನೆತೆಗೆ ಕಳಂಕ ತರುವ ಯಾವುದೇ ಕೆಲಸಗಳಲ್ಲಿ ಭಾಗಿಯಾಗದಂತೆ ಆಗ್ರಹಿಸಿರುವುದಾಗಿ ಒಕ್ಕೂಟ ತಿಳಿಸಿದೆ. ಕೆಲವು ಸಂಘಟನೆಗಳು ಬ್ಯಾರಿಕೇಡ್‌ಗಳನ್ನು ಮುರಿದಿರುವುದು, ಕಲ್ಲು ತೂರಾಟ ನಡೆಸಿರುವುದು ಹಾಗೂ ಕೆಂಪು ಕೋಟೆಯ ಗೋಪುರಗಳಲ್ಲಿ ಅನ್ಯ ಬಾವುಟ ಹಾರಿಸಿರುವ ಘಟನೆಗಳು ನಡೆದಿವೆ.

ಪಂಜಾವ್‌, ಹರಿಯಾಣ ಹಾಗೂ ಉತ್ತರ ಪ್ರದೇಶದ ರೈತರು ನವೆಂಬರ್‌ 28ರಿಂದ ಟಿಕ್ರಿ, ಸಿಂಘು ಹಾಗೂ ಘಾಜಿಪುರದ ಸೇರಿದಂತೆ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನಷ್ಟು ಓದು–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT