ಮಂಗಳವಾರ, ಆಗಸ್ಟ್ 16, 2022
30 °C

ಯುಎಇ, ಸೌದಿ ಅರೇಬಿಯಾಗೆ ಭೂಸೇನಾ ಮುಖ್ಯಸ್ಥ ಜ. ಎಂ.ಎಂ.ನರವಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರು ಯುನೈಟೆಡ್‌ ಅರಬ್‌ ಎಮರೇಟ್ಸ್‌ (ಯುಎಇ) ಹಾಗೂ ಸೌದಿ ಅರೇಬಿಯಾಗೆ ಆರು ದಿನಗಳ ಪ್ರವಾಸಕ್ಕಾಗಿ ಮಂಗಳವಾರ ತೆರಳಿದರು. 

ಎರಡು ಪ್ರಭಾವಶಾಲಿ ಗಲ್ಫ್‌ ರಾಷ್ಟ್ರಗಳಾದ ಯುಎಇ ಹಾಗೂ ಸೌದಿ ಅರೇಬಿಯಾ ಜೊತೆಗಿನ ಸಂಬಂಧವನ್ನು ಭಾರತವು ಮತ್ತಷ್ಟು ಸದೃಢಗೊಳಿಸಿಕೊಳ್ಳುತ್ತಿರುವುದರ ಪ್ರತಿಬಿಂಬವಾಗಿ ಈ ಅಪರೂಪದ ಪ್ರವಾಸವನ್ನು ವಿಶ್ಲೇಷಿಸಲಾಗಿದೆ. ಇರಾನಿನ ಬಹುಮುಖ್ಯ ಪರಮಾಣು ವಿಜ್ಞಾನಿ ಮೊಹ್ಸೆನ್ ಫಕ್ರಿಜಾದೇ ಅವರ ಹತ್ಯೆಯಿಂದ ಉಂಟಾಗಿರುವ ಪರಿಸ್ಥಿತಿ ಹಾಗೂ ಅರಬ್‌ ರಾಷ್ಟ್ರಗಳ ಜೊತೆ ಇಸ್ರೇಲ್‌ನ ಸಂಬಂಧ ಮತ್ತೆ ಯತಾಸ್ಥಿತಿಗೆ ಬರುತ್ತಿರುವ ಸಂದರ್ಭದಲ್ಲೇ ನರವಣೆ ಅವರು ಪ್ರವಾಸ ಕೈಗೊಂಡಿದ್ದಾರೆ.

ಮೊದಲು ಯುಎಇಗೆ ಭೇಟಿ ನೀಡಲಿರುವ ನರವಣೆ ಅವರು, ಅಲ್ಲಿನ ಹಿರಿಯ ಸೇನಾಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದು, ದ್ವಿಪಕ್ಷೀಯ ಸೇನಾ ಸಹಕಾರವನ್ನು ಮತ್ತಷ್ಟು ವೃದ್ಧಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಡಿ.13 ಮತ್ತು 14ರಂದು ಸೌದಿ ಅರೇಬಿಯಾಗೆ ನರವಣೆ ಅವರು ಭೇಟಿ ನೀಡಲಿದ್ದಾರೆ ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ. ಸೌದಿಯಲ್ಲಿ ರಾಯಲ್‌ ಸೌದಿ ಭೂಸೇನೆಯ ಕೇಂದ್ರ ಕಚೇರಿಗೆ ಭೇಟಿ ನೀಡಲಿರುವ ನರವಣೆ ಅವರು ನಂತರದಲ್ಲಿ ಕಿಂಗ್‌ ಅಬ್ದುಲ್‌ ಅಜೀಜ್‌ ಸೇನಾ ಅಕಾಡೆಮಿಗೆ ಭೇಟಿ ನೀಡಲಿದ್ದಾರೆ. 

ಕಳೆದ ಕೆಲ ವರ್ಷಗಳಿಂದ ಸೌದಿ ಅರೇಬಿಯಾ ಜೊತೆಗಿನ ಭಾರತದ ಸಂಬಂಧವು ಗಮನಾರ್ಹವಾಗಿ ಹೆಚ್ಚುತ್ತಿದ್ದು, ರಕ್ಷಣಾ ಉಪಕರಣಗಳ ಉತ್ಪಾದನೆಗೆ ಭಾರತದ ಜೊತೆ ಕೈಜೋಡಿಸಲು ಸೌದಿ ಅರೇಬಿಯಾ ಆಸಕ್ತಿ ತೋರಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು