ಆತ್ಮಹತ್ಯೆ ಪ್ರಕರಣ: ಆರೋಪಪಟ್ಟಿ ಸಲ್ಲಿಸದಂತೆ ತಡೆ ನೀಡಲು ಅರ್ನಬ್ ಅರ್ಜಿ

ಮುಂಬೈ: 2018ರಲ್ಲಿ ನಡೆದ ಅನ್ವಯ್ ನಾಯ್ಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಪ್ರಕ್ರಿಯೆಗಳು ಹಾಗೂ ಆರೋಪಪಟ್ಟಿ ಸಲ್ಲಿಕೆಗೆ ತಡೆ ನೀಡುವಂತೆ ಕೋರಿ ರಿಪಬ್ಲಿಕ್ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಗುರುವಾರ ಬಾಂಬೆ ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ.
‘ಪ್ರಕರಣವನ್ನು ರಾಜ್ಯ ಸಿಐಡಿಯಿಂದ ಮರು ತನಿಖೆಗೆ ಒಳಪಡಿಸುವಂತೆ ಆದೇಶಿಸಲು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರಿಗೆ ಅಧಿಕಾರವಿಲ್ಲ. ಏಕೆಂದರೆ ಈ ಹಿಂದೆ ರಾಯಗಡ್ ಜಿಲ್ಲೆಯ ಅಲಿಬಾಗ್ ಪೊಲೀಸರು ನಡೆಸಿದ ತನಿಖೆಯನ್ನು ಕಳೆದ ವರ್ಷವೇ ಮುಕ್ತಾಯಗೊಳಿಸಲಾಗಿತ್ತು’ ಎಂದು ಅರ್ಜಿಯಲ್ಲಿ ಅರ್ನಬ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಲ್ಲಿ ಒಬ್ಬರಾದ ಅರ್ನಬ್ ಅವರನ್ನು ಕಳೆದ ತಿಂಗಳು ಅಲಿಬಾಗ್ ಪೊಲೀಸರು ಬಂಧಿಸಿದ್ದರು. ಸುಪ್ರೀಂ ಕೋರ್ಟ್ ಅರ್ನಬ್‌ಗೆ ಇತ್ತೀಚೆಗೆ ಜಾಮೀನು ನೀಡಿತ್ತು. ‘ನ.4ರಂದು ನನ್ನನ್ನು ಬಂಧಿಸಿರುವುದು ಕಾನೂನು ಬಾಹಿರ. ಈ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ಹೈಕೋರ್ಟ್ ವರ್ಗಾಯಿಸಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.