ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೇ ಮಾದರಿಯಾದ ದೆಹಲಿ ಆಡಳಿತ: ಕೇಜ್ರಿವಾಲ್

ಸರ್ಕಾರಿ ಶಾಲೆಗಳಲ್ಲಿ ‘ದೇಶಭಕ್ತಿ’ ಪಠ್ಯ, ವಸತಿ ಪ್ರದೇಶಗಳಲ್ಲಿ ಯೋಗ ತರಗತಿ
Last Updated 15 ಆಗಸ್ಟ್ 2021, 12:10 IST
ಅಕ್ಷರ ಗಾತ್ರ

ನವದೆಹಲಿ: ‘ಇಡೀ ದೇಶದಲ್ಲಿ ದೆಹಲಿ ಆಡಳಿತವು ಮಾದರಿಯಾಗಿ ಹೊರಹೊಮ್ಮಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.

75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಸೆ. 27ರಿಂದ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ‘ದೇಶಭಕ್ತಿ’ ಪಠ್ಯಕ್ರಮ ಹಾಗೂ ಅ. 2ರಿಂದ ದೆಹಲಿಯ ವಸತಿ ಪ್ರದೇಶಗಳಲ್ಲಿ ಯೋಗ ತರಗತಿಗಳನ್ನು ಆರಂಭಿಸುವುದಾಗಿ ಘೋಷಿಸಿದರು.

ದೆಹಲಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸಾಧನೆಗಳನ್ನು ವಿವರಿಸಿದ ಕೇಜ್ರಿವಾಲ್, ‘ಇಡೀ ಭಾರತದಲ್ಲಿ ದೆಹಲಿ ಆಡಳಿತವು ಮಾದರಿಯಾಗಿ ಹೊರಹೊಮ್ಮಿದೆ. ಇದೊಂದು ರೀತಿಯಲ್ಲಿ ಪ್ರಯೋಗಾಲಯವಾಗಿದ್ದು, ಇಲ್ಲಿನ ಯೋಜನೆಗಳನ್ನು ಭಾರತ ಮಾತ್ರವಲ್ಲದೆ ಪ್ರಪಂಚದ ವಿವಿಧೆಡೆ ಚರ್ಚಿಸಲಾಗಿದ್ದು, ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ಅವರು, ಸ್ವಾತಂತ್ರ್ಯ ಹೋರಾಟಗಾರರು, ಕೋವಿಡ್ ಸಮಯದಲ್ಲಿ ಜನರಿಗೆ ಸೇವೆ ಸಲ್ಲಿಸುವಾಗ ತಮ್ಮ ಪ್ರಾಣ ಕಳೆದುಕೊಂಡ ವೈದ್ಯರು, ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಗೌರವ ಸೂಚಿಸಿದರು.

‘ಸೆ.27 ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ವೀರ ಮರಣವನ್ನಪ್ಪಿದ ದಿನ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಆ ದಿನ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ‘ದೇಶಭಕ್ತಿ’ ಪಠ್ಯಕ್ರಮ ಕಲಿಕೆಗೆ ಚಾಲನೆ ನೀಡಲಾಗುವುದು. ಅ. 2ರಿಂದ ದೆಹಲಿ ವಸತಿಪ್ರದೇಶಗಳ ಉದ್ಯಾನ, ಸಮುದಾಯ ಭವನದಂಥ ಸ್ಥಳಗಳಲ್ಲಿ ಯೋಗ ತರಗತಿಗಳನ್ನು ಆರಂಭಿಸಲಾಗುವುದು. ಯಾವುದೇ ವಸತಿ ಪ್ರದೇಶದ 40ರಿಂದ 50 ಜನರು ಮುಂದೆ ಬಂದರೆ ಅವರಿಗೆ ದೆಹಲಿ ಸರ್ಕಾರವು ಯೋಗ ಶಿಕ್ಷಕರನ್ನು ಒದಗಿಸುತ್ತದೆ’ ಎಂದೂ ತಿಳಿಸಿದರು.

2047ರಲ್ಲಿ ದೆಹಲಿ ಕುರಿತು ಭವಿಷ್ಯದ ನೋಟ:

2047ರ ವೇಳೆಗೆ ದೆಹಲಿ ಹೇಗಿರಬೇಕೆಂಬ ಕುರಿತು ಭವಿಷ್ಯದ ನೋಟ ಬಿಚ್ಚಿಟ್ಟ ಅರವಿಂದ ಕೇಜ್ರಿವಾಲ್, ದೆಹಲಿಯನ್ನು ವಿಶ್ವದ ಅತ್ಯುತ್ತಮ ಮತ್ತು ವಾಸಯೋಗ್ಯ ನಗರ ಮಾಡಲು ಕರೆ ನೀಡಿದರು.

‘2047ರ ವೇಳೆಗೆ ದೆಹಲಿ ನಗರದ ತಲಾ ಆದಾಯವು ಸಿಂಗಪುರಕ್ಕೆ ಸಮನಾಗಿರಬೇಕು. ದೆಹಲಿಯು ತನ್ನದೇ ಆದ ಶಿಕ್ಷಣ ಮಂಡಳಿಯನ್ನು ಹೊಂದಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾರೆ. ಅಂತೆಯೇ ದೆಹಲಿಯಲ್ಲಿ ಸಶಸ್ತ್ರ ಪಡೆಗಳ ತರಬೇತಿ ಅಕಾಡೆಮಿ ಆರಂಭಿಸಲು ಕುರಿತು ಸಿದ್ಧತೆ ನಡೆಸಲಾಗುತ್ತಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT