ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಕೋವಿಡ್ ಏರಿಕೆ: ಪರಿಸ್ಥಿತಿ ನಿಭಾಯಿಸಲು ಆಸ್ಪತ್ರೆಗಳಿಗೆ ಸೂಚನೆ

Last Updated 16 ಏಪ್ರಿಲ್ 2022, 1:35 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್‌ ಹೊಸ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಪ್ರಕರಣಗಳ ಏರಿಕೆ ಬೆನ್ನಲ್ಲೇ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವಂತೆ ಎಲ್ಲಾ ಆಸ್ಪತ್ರೆಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಸೂಚನೆ ನೀಡಿದೆ.

‘ಸದ್ಯದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಶುಕ್ರವಾರ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಆಸ್ಪತ್ರೆಗಳ ಮೂಲಸೌಕರ್ಯ ಕುರಿತು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದೇವೆ. ಜತೆಗೆ, ಹೆಚ್ಚುತ್ತಿರುವ ಹೊಸ ಪ್ರಕರಣಗಳ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ ಎಂದು ಜೈನ್ ಹೇಳಿದ್ದಾರೆ.

ಸೋಂಕಿತರನ್ನು ಪತ್ತೆ ಹಚ್ಚಲು ಆರ್‌ಟಿ–ಪಿಸಿಆರ್‌ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಜತೆಗೆ, ಮುನ್ನೆಚ್ಚರಿಕಾ ಡೋಸ್‌ಗಳ (ಬೂಸ್ಟರ್ ಡೋಸ್) ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದ ಜೈನ್, ಸಾರ್ವಜನಿಕರು ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕೋವಿಡ್‌ ಹೊಸ ಪ್ರಕರಣಗಳು ಹೆಚ್ಚಾಗಿದ್ದರೂ ಆಸ್ಪತ್ರೆಗಳಿಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಕೋವಿಡ್‌ ನಾಲ್ಕನೇ ಅಲೆಯ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಸೋಂಕು ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಲು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಏಪ್ರಿಲ್ 20 ರಂದು ಸಭೆ ಸೇರಲಿದೆ ಎಂದು ಜೈನ್ ತಿಳಿಸಿದ್ದಾರೆ.

ದೆಹಲಿಯು ಕಳೆದ 24 ಗಂಟೆಗಳಲ್ಲಿ 366 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 18,67,572ಕ್ಕೆ ಏರಿಕೆಯಾಗಿದೆ. ಆ ಪೈಕಿ 26,158 ಮಂದಿ ಸಾವಿಗೀಡಾಗಿದ್ದಾರೆ.

ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ 2ಕ್ಕಿಂತ ಹೆಚ್ಚಾಗಿದ್ದು, ಕಳೆದೊಂದು ವಾರದಲ್ಲಿ ಮನೆಯಲ್ಲಿ ಕ್ವಾರಂಟೈನ್ ಆಗಿರುವವರ ಸಂಖ್ಯೆ ಶೇ 48ರಷ್ಟಿದೆ ಎಂದು ಸರ್ಕಾರದ ದತ್ತಾಂಶಗಳು ತಿಳಿಸಿವೆ. ಶುಕ್ರವಾರ ಒಂದೇ ದಿನ 366 ಕೋವಿಡ್ ಪ್ರಕರಣಗಳು ಪತ್ತೆಯಾಗಿ, ಪಾಸಿಟಿವಿಟಿ ದರವು ಶೇ 3.95ರಷ್ಟಾಗಿತ್ತು. ಇನ್ನು ಸೋಂಕಿಗೆ ತುತ್ತಾಗಿ 574 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು, ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT