ಮಂಗಳವಾರ, ಮೇ 17, 2022
29 °C

ಕಾಶ್ಮೀರದಲ್ಲಿ ಫೆ.17ರಿಂದ ರೈಲು ಸೇವೆ ಪುನರಾರಂಭ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: 'ಕೋವಿಡ್‌ 19' ಸಾಂಕ್ರಾಮಿಕದ ಕಾರಣದಿಂದ ಸುಮಾರು ಹನ್ನೊಂದು ತಿಂಗಳ ಕಾಲ ಬಂದ್‌ ಆಗಿದ್ದ ಕಣಿವೆ ರಾಜ್ಯದ ಕಾಶ್ಮೀರದಲ್ಲಿ ರೈಲು ಸೇವೆಗಳು ಇದೇ 17 ರಿಂದ ಪುನರಾರಂಭವಾಗುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ, ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಕಾರಣ ರೈಲ್ವೆ ಇಲಾಖೆ ಫೆಬ್ರುವರಿ 17 ರಿಂದ ಸ್ಥಗಿತಗೊಂಡಿರುವ ರೈಲು ಸೇವೆಗಳನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ‘ಕೋವಿಡ್‌ 19 ಸಾಂಕ್ರಾಮಿಕ ಪ್ರಮಾಣಿತ ಕಾರ್ಯಸೂಚಿ‘(ಎಸ್‌ಒಪಿ)ಯನ್ನು ಬಿಡುಗಡೆ ಮಾಡಲಿದೆ.

‘ಸರ್ಕಾರ, ಕೋವಿಡ್‌–19ಗೆ ಸಂಬಂಧಿಸಿದ ಎಸ್‌ಒಪಿ ಸಿದ್ಧಪಡಿಸಿದರೆ, ರೈಲು ಸೇವೆಗಳು ಆರಂಭವಾ ಗುತ್ತವೆ‘ ಎಂದು ರೈಲ್ವೆ ಇಲಾಖೆಯ ಮುಖ್ಯ ವ್ಯವಸ್ಥಾಪಕ ಸಾಖಿಬ್‌ ಯೂಸುಫ್ ತಿಳಿಸಿದ್ದಾರೆ. ರೈಲು ಸೇವೆ ಸ್ಥಗಿತೊಳಿಸಿರುವುದರಿಂದ ರೈಲ್ವೆ ಇಲಾಖೆಗೆ ಸಾಕಷ್ಟು ನಷ್ಟವಾಗಿದೆ. ಆದರೆ, ಜನರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು‘ ಎಂದು ಅವರು ಹೇಳಿದ್ದಾರೆ.

ಸಾಮಾನ್ಯ ದಿನದಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾದಿಂದ ಜಮ್ಮುವಿನ ಬನಿಹಾಲ್‌(138 ಕಿ.ಮೀ) ಮಾರ್ಗದಲ್ಲಿ ನಿತ್ಯ ಕನಿಷ್ಠ 15 ರೈಲುಗಳು ನಿಯಮಿತವಾಗಿ ಸಂಚರಿಸುತ್ತವೆ. ಈ ರೈಲುಗಳು ನಿತ್ಯ ವಿದ್ಯಾರ್ಥಿಗಳು ಮತ್ತು ನೌಕರರು ಸೇರಿದಂತೆ ಸುಮಾರು 30 ಸಾವಿರ ಪ್ರಯಾಣಿಕರನ್ನು ಕರೆದೊಯ್ಯುತ್ತವೆ.

ಹನ್ನೊಂದು ತಿಂಗಳಿನಿಂದ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ತೀವ್ರ ಪರದಾಡುತ್ತಿದ್ದಾರೆ. ಅದರಲ್ಲೂ ಪ್ರತಿದಿನ ಶ್ರೀನಗರಕ್ಕೆ ಪ್ರಯಾಣಿಸಬೇಕಾದ ಉತ್ತರ ಮತ್ತು ದಕ್ಷಿಣ ಕಾಶ್ಮೀರದ ಸಾವಿರಾರು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

‘ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಆರಂಭವಾಗುತ್ತಿದ್ದಂತೆ ಸರ್ಕಾರ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ನಿರ್ಧರಿಸಿತು. ಆದರೆ ರೈಲು ಸೇವೆಗಳನ್ನು ಮಾತ್ರ ಏಕೆ ಸ್ಥಗಿತಗೊಳಿಸಬೇಕು‘ ಎಂದು ಸರ್ಕಾರಿ ಉದ್ಯೋಗಿ ರೈಸ್ ಅಹ್ಮದ್ ಪ್ರಶ್ನಿಸುತ್ತಾರೆ.

‘ರೈಲು ಸೇವೆಗಳನ್ನು ಪುನರಾರಂಭಿಸಿದರೆ,  ಚಳಿಗಾಲದಲ್ಲಿ ಅಪಾಯದ ಮಾರ್ಗವಾಗಿರುವ ಖಾಜಿಗುಂಡ್– ಬನಿಹಾಲ್ ಮಾರ್ಗವನ್ನು ಬಿಟ್ಟು, ರೈಲಿನಲ್ಲಿ ಸಂಚರಿಸುತ್ತಾರೆ. ಆಗ ಶ್ರೀನಗರ ಮತ್ತು ಜಮ್ಮು ನಗರದ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ‘ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ಆಗಸ್ಟ್ 5 ರಂದು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ, ಸುಮಾರು ನೂರು ದಿನಗಳವರೆಗೆ ಇದೇ ಬನಿಹಾಲ್ – ಬಾರಾಮುಲ್ಲಾ ನಡುವಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ನವೆಂಬರ್ 11,2019ರಂದು ರೈಲು ಸೇವೆ ಪುನರಾರಂಭಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು