ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಭೀತಿ ಬಿಟ್ಟು ದುಡಿಮೆಗೆ ಮರಳಿದ್ದಾರೆ ಜನ

Last Updated 20 ಅಕ್ಟೋಬರ್ 2020, 9:00 IST
ಅಕ್ಷರ ಗಾತ್ರ

ಸಿನ್ನರ್ (ಮಹಾರಾಷ್ಟ್ರ):ಭಾರತದಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಆದರೆ ಮಹಾರಾಷ್ಟ್ರ, ಕೊಲ್ಕತ್ತಾದ ಜನರು 'ಹೀಗೊಂದು ಸಾಂಕ್ರಾಮಿಕ ರೋಗ ಇದೆ‘ ಎಂಬುದನ್ನೇ ಮರೆತು ಕಾರ್ಖಾನೆಗಳಿಗೆ ಕೆಲಸಕ್ಕೆ ಮರಳಿದ್ದಾರೆ.

ಮಾರ್ಚ್ ತಿಂಗಳಲ್ಲಿ ಕಟ್ಟು ನಿಟ್ಟಿನ ಲಾಕ್‌ಡೌನ್ ಘೋಷಣೆಯಾದ ಮೇಲೆ ಸಾವಿರಾರು ಮಂದಿ ಹಸಿವಿನಿಂದ ಬಳಲಿದ್ದರು. ಎಷ್ಟು ದಿನ ಹೀಗೆ ಇರಲು ಸಾಧ್ಯ. ಹೇಗಾದರೂ ಬದುಕು ಸಾಗಲೇಬೇಕಲ್ಲ. ಹಾಗಾಗಿ ಜನರುರೋಗದ ಭೀತಿಯನ್ನು ಬದಿಗಿಟ್ಟು, ತಮ್ಮ ನಿತ್ಯದ ದುಡಿಮೆತ್ತ ಹೆಜ್ಜೆ ಹಾಕಿದ್ದಾರೆ. ಹೀಗೆ ದುಡಿಮೆಗೆ ಹೊರಟವರಲ್ಲಿ, ಒಬ್ಬೊಬ್ಬರದ್ದು ಒಂದೊಂದು ಸಂಕಷ್ಟದ ಕಥೆ.

ಸೋನಾಲಿ ದಾಂಗೆ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಜತೆಯಲ್ಲಿ ವಯಸ್ಸಾದ ಅತ್ತೆಯೂ ಇದ್ದಾರೆ. ಸೋನಾಲಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಈಗ ಅವರು ಕಾರ್ಖಾನೆಯಲ್ಲಿ ದುಡಿಯುತ್ತಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ನಮ್ಮ ಕುಟುಂಬ ಹಸಿವಿನಿಂದ ಬಳಲಿತ್ತು. ಲಾಕ್‌ಡೌನ್ ತೆರೆಯುತ್ತಿದ್ದಂತೆ ಕಾರ್ಖಾನೆ ಆರಂಭವಾಯಿತು ಕೂಡಲೇ ಮತ್ತೆ ಕೆಲಸಕ್ಕೆ ಸೇರಿದೆ. ₹25 ಸಾವಿರದ ವೇತನಕ್ಕೆ ದುಡಿಯುತ್ತಿದ್ದೇನೆ. ಕೊರೊನಾ ಸೋಂಕಿನಿಂದ ಗುಣಮುಖಳಾದ ಮೇಲೆ, ಆ ರೋಗದ ಬಗ್ಗೆ ಭಯ ಹೋಗಿಬಿಟ್ಟಿದೆ‘ ಎನ್ನುತ್ತಾರೆ ಮುಂಬೈನ ನೋಬೆಲ್‌ ಹೈಜೀನ್ ಘಟಕದಲ್ಲಿ ಕೆಲಸ ಮಾಡುವ 29ರ ಹರೆಯದ ಸೋನಾಲಿ ದಾಂಗೆ.

ಹಿರಿಯ ನಾಗರಿಕರೇ ಹೆಚ್ಚಾಗಿರುವ ಶ್ರೀಮಂತ ರಾಷ್ಟ್ರಗಳಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸಾವಿಗೀಡಾಗುವವರ ಮರಣ ಪ್ರಮಾಣವೂ ಹೆಚ್ಚಾಗಿದೆ. ಭಾರತದ ಜನಸಂಖ್ಯೆಯ ಕಾಲು ಭಾಗದಷ್ಟಿರುವ ಅಮೆರಿಕದಲ್ಲೂ ಸಾವಿನ ಸಂಖ್ಯೆ ಭಾರತಕ್ಕಿಂತ ಎರಡು ಪಟ್ಟು ಜಾಸ್ತಿ ಇದೆ. ಬಡ ದೇಶಗಳು ಹೆಚ್ಚು ಕೆಟ್ಟ ಆರ್ಥಿಕ ಸಂಕಷ್ಟ ಅನುಭವಿಸಿವೆ. ಮುಂಬರುವ ದಿನಗಳಲ್ಲಿ ವಿಶ್ವದಾದ್ಯಂತ 1.5 ಕೋಟಿ ಜನರು ತೀವ್ರ ಬಡತನಕ್ಕೆ ಸಿಲುಕಬಹುದು ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಅನೇಕ ಮಕ್ಕಳು ಈಗ ತಮ್ಮ ಹೆತ್ತವರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿದ್ದಾರೆ.ಸಾವಿರಾರು ಯುವತಿಯರಿಗೆ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಉತ್ತರ ಭಾರತದ ವಾರಣಾಸಿಯಲ್ಲಿ 12ರ ಹರೆಯದ ಸಂಚಿತ್ ಈಗ ಶಾಲೆಗೆ ಹೋಗುತ್ತಿಲ್ಲ. ಅದರ ಬದಲಾಗಿ ನಗರದ ಘಾಟ್‌ನಲ್ಲಿ ಅಂತ್ಯಸಂಸ್ಕಾರಕ್ಕೆ ಮುನ್ನ ಬಿಸಾಡಿದ ಬಟ್ಟೆಗಳನ್ನು ಹೆಕ್ಕುವ ಕೆಲಸ ಮಾಡುತ್ತಿದ್ದಾನೆ. ‘ಕೆಲವೊಂದು ದಿನ ₹50 ಸಂಪಾದಿಸುತ್ತೇನೆ‘ ಎನ್ನುತ್ತಾನೆ ಸಂಚಿತ್.

ಇವೆಲ್ಲದರ ನಡುವೆ ಭಾರತದಲ್ಲಿ ಈ ವರ್ಷ ಜಿಡಿಪಿ ಪ್ರಮಾಣ ಶೇ 10.3ರಷ್ಟು ಕುಸಿತ ಕಾಣಲಿದೆ ಎಂದು ಐಎಂಎಫ್ ಅಂದಾಜಿಸಿದೆ.

ಭಾರತದಲ್ಲಿ ಲಾಕ್‌ಡೌನ್ ಘೋಷಿಸಿದಾಗ ಲಕ್ಷಗಟ್ಟಲೆ ಜನರು ಕೆಲಸ ಕಳೆದುಕೊಂಡರು. ಹಣವಿಲ್ಲದೆ ಪರದಾಡಿದರು. ರಾತ್ರಿ ಬೆಳಗಾಗುವುದರೊಳಗೆ ನಿರಾಶ್ರಿತರಾಗಿಬಿಟ್ಟರು. ‘ಇಂಥ ಪರಿಸ್ಥಿತಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ‘ ಎನ್ನುತ್ತಾರೆ 42ರ ಹರೆಯದ ಗಾರ್ಗಿ ಮುಖರ್ಜಿ.

ಕೊಲ್ಕತ್ತಾದ ನ್ಯೂಮಾರ್ಕೆಟ್‌ನಲ್ಲಿ ಗಾರ್ಗಿಯವರ ಅಂಗಡಿ ಇದೆ. ಅವರು ಗಮನಿಸಿದಂತೆ, ಮಾಸ್ಕ್ ಇಲ್ಲದೆಯೇ ಹಲವು ಗ್ರಾಹಕರು ಇವರ ಅಂಗಡಿಗೆ ಬಂದು ಖರೀದಿ ಮಾಡುತ್ತಿದ್ದಾರೆ. ‘ಬದುಕುವುದಕ್ಕಾಗಿ ಜನರು ಮನೆಯಿಂದ ಹೊರ ಬಂದು ತಮ್ಮ ಕೆಲಸ ಮಾಡುತ್ತಿದ್ದಾರೆ.ಅವರು ದುಡಿಯದೇ ಇದ್ದರೆ ಅವರ ಕುಟುಂಬವನ್ನು ಯಾರು ನೋಡಿಕೊಳ್ಳುತ್ತಾರೆ?‘ ಎನ್ನುತ್ತಾರೆ ಗಾರ್ಗಿ.

ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ದುರ್ಗಾ ಪೂಜೆ, ದಸರಾ, ದೀಪಾವಳಿ ಇದೆ. ಈ ವೇಳೆ ಜನರು ಹಬ್ಬದ ಆಚರಣೆಗಾಗಿ ಖರೀದಿ ಮಾಡುವುದೇನೂ ಕಮ್ಮಿಯಾಗಿಲ್ಲ. ಜನರು ಈ ರೀತಿ ಮೈಮರೆತು ಗುಂಪು ಸೇರುವುದು ಸೋಂಕು ಹರಡುವಿಕೆಗೂ ಕಾರಣವಾಗುತ್ತದೆ.

ಕೊರೊನಾ ಬಗ್ಗೆ ಭಯವಿದೆ.ಆದರೆ ನಾನೇನು ಮಾಡಲಿ. ದುರ್ಗಾ ಪೂಜೆ ಆಚರಣೆ ಬಿಡುವುದಕ್ಕೆ ಆಗುವುದಿಲ್ಲಎನ್ನುತ್ತಾರೆ ಕೊಲ್ಕತ್ತಾದ ಗೃಹಿಣಿ ತಿಯಾಸ್ ಭಟ್ಟಾಚಾರ್ಯ ದಾಸ್. ದುರ್ಗಾ ಪೂಜೆ ವರ್ಷಕ್ಕೆ ಒಂದು ಬಾರಿ ಬರುತ್ತದೆ.ಅದಕ್ಕಾಗಿ ಶಾಪಿಂಗ್ ಮಾಡುವ ಖುಷಿಯನ್ನು ಕಳೆದುಕೊಳ್ಳಲು ನನಗಿಷ್ಟವಿಲ್ಲಎಂಬುದು ಅವರ ಮಾತು.

ಬಡತನದಿಂದ ಸಾಯುತ್ತೇವೋ, ಕೊರೊನಾ ವೈರಸ್‌ ಸೋಂಕು ತಗುಲಿ ಸಾಯುತ್ತೇವೋ ಅದು ಮುಂದಿನ ವಿಷಯ. ಇವೆರಡರಲ್ಲಿ ಯಾವುದಾದರೂಒಂದನ್ನು ಜನರು ಆಯ್ಕೆ ಮಾಡಿಕೊಳ್ಳಲೇಬೇಕು ಎಂದು ಮುಂಬೈ ಮೂಲಕ ಆರ್ಥಿಕ ತಜ್ಞ ಸುನೀಲ್ ಕುಮಾರ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT