ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ವಿಧಾನಸಭೆ ಚುನಾವಣೆ: ಕಣದಿಂದ ಹಿಂದೆ ಸರಿದ ಮಾಜಿ ಸಿಎಂ ಪ್ರಫುಲ್ಲ ಮಹಾಂತ

Last Updated 9 ಮಾರ್ಚ್ 2021, 8:26 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂ ವಿಧಾನಸಭೆಯಲ್ಲಿ ಸ್ಪರ್ಧಿಸದಿರಲು ಮಾಜಿ ಮುಖ್ಯಮಂತ್ರಿ, ಅಸ್ಸಾಂ ಗಣ ಪರಿಷತ್ (ಎಜಿಪಿ) ಸ್ಥಾಪಕ ಪ್ರಫುಲ್ಲ ಕುಮಾರ್ ಮಹಾಂತ ನಿರ್ಧರಿಸಿದ್ದಾರೆ.

ತಾವು 1991ರಿಂದ ಆರು ಬಾರಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಬ್ರಹಾಂಪುರ್ ಕ್ಷೇತ್ರವನ್ನು ಈ ಬಾರಿ ಬಿಜೆಪಿಗೆ ಬಿಟ್ಟುಕೊಟ್ಟಿರುವುದರಿಂದ ಮಹಾಂತ ಅವರು ಸ್ಪರ್ಧಿಸದಿರುವ ನಿರ್ಧಾರ ಕೈಗೊಂಡಿದ್ದಾರೆ. ಪ್ರಾದೇಶಿಕತೆಯನ್ನು ಸಮರ್ಥಿಸಿಕೊಳ್ಳುವ ವಿಚಾರದಲ್ಲಿ ಎಜಿಪಿಯ ದುರ್ಬಲ ನಿಲುವಿನಿಂದ ಮಹಾಂತ ಬೇಸರಗೊಂಡಿದ್ದಾರೆ ಎಂದು ಅವರ ಪತ್ನಿ ಜಯಶ್ರೀ ಗೋಸ್ವಾಮಿ ಹೇಳಿದ್ದಾರೆ.

‘ಇದು ಕೇವಲ ಒಂದು ಕ್ಷೇತ್ರದ ಪ್ರಶ್ನೆಯಲ್ಲ. ಅಸ್ಸಾಂನಲ್ಲಿ ಪ್ರಾದೇಶಿಕತೆಯ ಹತ್ಯೆಯಾಗಿದೆ. ಇದು ಅವರಿಗೆ ನೋವುಂಟುಮಾಡಿದೆ. ಪ್ರಸಕ್ತ ಎಜಿಪಿ ನಾಯಕತ್ವವು ಪ್ರಾದೇಶಿಕ ಸಿದ್ಧಾಂತವನ್ನು ರಾಷ್ಟ್ರೀಯ ರಾಜಕೀಯ ಪಕ್ಷಕ್ಕೆ (ಬಿಜೆಪಿ) ಮಾರಾಟ ಮಾಡಿಕೊಂಡಿದೆ. ಇದು ಎಜಿಪಿ ನಾಯಕತ್ವದ ನಿಜಬಣ್ಣ ಬಯಲುಮಾಡಿದೆ’ ಎಂದು ಗೋಸ್ವಾಮಿ ಹೇಳಿದ್ದಾರೆ.

ವಿದ್ಯಾರ್ಥಿ ನಾಯಕನಾಗಿದ್ದಾಗ ಅಸ್ಸಾಂ ಚಳವಳಿ ಅಥವಾ ವಿದೇಶೀಯರ ವಿರೋಧಿ ಚಳವಳಿಯ ನೇತೃತ್ವದ ವಹಿಸಿದ್ದ ಅವರು 1985ರಲ್ಲಿ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದ್ದರು. ಎರಡು ಬಾರಿ ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಎಜಿಪಿ ಮತ್ತು ಬಿಜೆಪಿ ನಾಯಕತ್ವದ ಜತೆ ಅವರು ಮುನಿಸಿಕೊಂಡಿದ್ದರು. 2016ರಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಎಜಿಪಿ ತೀರ್ಮಾನವನ್ನು ಅವರು ವಿರೋಧಿಸಿದ್ದರು. ಮೂಲಗಳ ಪ್ರಕಾರ, ಬಿಜೆಪಿ ನಾಯಕತ್ವ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ ವಿರುದ್ಧ ಮಹಾಂತ ಅವರು ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಆದಾಗ್ಯೂ, 2016ರಲ್ಲಿ ಬ್ರಹಾಂಪುರ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆಯುವಲ್ಲಿ ಮಹಾಂತ ಯಶಸ್ವಿಯಾಗಿದ್ದರು. ಈ ಬಾರಿ, ಎಜಿಪಿ ನಾಯಕ ಫಣಿ ಭೂಷಣ್ ಚೌಧರಿ ಹೇಳಿರುವ ಪ್ರಕಾರ ಬ್ರಹಾಂಪುರ್ ಕ್ಷೇತ್ರವನ್ನು ಎಜಿಪಿಗೆ ನೀಡಲು ಬಿಜೆಪಿ ನಿರಾಕರಿಸಿತ್ತು. ಶರ್ಮಾ ಅವರ ನಿಷ್ಠರಾದ ಜಿತು ಗೋಸ್ವಾಮಿ ಅವರನ್ನು ಬಿಜೆಪಿ ಈ ಬಾರಿ ಬ್ರಹಾಂಪುರ್ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಅಸ್ಸಾಂನ ಪ್ರಾದೇಶಿಕತೆಯ ರಕ್ಷಣೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಮಹಾಂತ ಅವರ ಪತ್ನಿ ಹೇಳಿದ್ದಾರೆ.

ಅಸ್ಸಾಂನಲ್ಲಿ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT