ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಕಳ್ಳಸಾಗಣೆ ಹಗರಣದಲ್ಲಿ ಕೇರಳ ಸಿಎಂ ಪಾತ್ರ ಪ್ರಶ್ನಿಸಿದ ಅಮಿತ್ ಶಾ

Last Updated 7 ಮಾರ್ಚ್ 2021, 20:25 IST
ಅಕ್ಷರ ಗಾತ್ರ

ತಿರುವನಂತಪುರ: ಚಿನ್ನ ಹಾಗೂ ಡಾಲರ್ ಕಳ್ಳಸಾಗಣೆ ಹಗರಣಗಳಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.

ತಿರುವನಂತಪುರದ ಶಂಕುಮುಖಂ ಬೀಚ್‌ನಲ್ಲಿ ಭಾನುವಾರ ನಡೆದ ಬಿಜೆಪಿ 'ವಿಜಯ ಯಾತ್ರೆ' ಸಮಾರೋಪ ಸಮಾರಂಭದಲ್ಲಿ ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ ನಡೆಸಿರುವ ಅಮಿತ್ ಶಾ, ಪ್ರಮುಖ ಆರೋಪಿಗಳು ಸಿಎಂ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಸವಾಲು ಹಾಕಿದರು.

ಈ ಮೊದಲು ಕೇಂದ್ರ ತನಿಖಾ ಏಜೆನ್ಸಿಗಳನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಪಿಣರಾಯಿ ವಿಜಯನ್ ಆರೋಪ ಮಾಡಿದ್ದರು.

ಇದರ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ತಾವು ಕೂಡಾ ಈ ಪ್ರಕರಣಗಳಲ್ಲಿ ಸಿಎಂ ಕಚೇರಿಯು ಕಸ್ಟಮ್ಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದೆಯೇ ಎಂಬುದನ್ನು ತಿಳಿಯಲು ಬಯಸುವುದಾಗಿ ಹೇಳಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕೇಂದ್ರ ಏಜೆನ್ಸಿಗಳನ್ನು ರಾಜಕೀಯ ಸಾಧನವಾಗಿ ಬಳಕೆ ಮಾಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಆರೋಪಿಸುತ್ತಿದ್ದಾರೆ. ನಾನು ಕೂಡಾ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಡಾಲರ್/ಚಿನ್ನ ಹಗರಣದ ಪ್ರಮುಖ ಆರೋಪಿಯು ಅವರ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆಯೇ ಇಲ್ಲವೋ? ಎಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸ್ವಪ್ನಾ ಸುರೇಶ್ ಅವರನ್ನು ಉಲ್ಲೇಖಿಸುತ್ತಾ ಹೇಳಿದರು.

ಕೇರಳವು ಅಭಿವೃದ್ಧಿ, ಸಾಕ್ಷರತೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೆಸರುವಾಸಿಯಾಗಿತ್ತು. ಆದರೆ ಎಲ್‌ಡಿಎಫ್ ಹಾಗೂ ಯುಡಿಎಫ್ ಬದಲಾದ ಸರ್ಕಾರಗಳು ಅಧಿಕಾರಕ್ಕೆ ಬಂದ ಬಳಿಕ ರಾಜಕೀಯ ಹಿಂಸಾಚಾರದ ವೇದಿಕೆಯಾಗಿ ಬದಲಾಗಿದೆ ಎಂದು ಆರೋಪಿಸಿದರು.

ಕೇರಳದಲ್ಲಿ ವಿಧಾನಸಭಾ ಚುನಾವಣೆಯು ಒಂದೇ ಹಂತದಲ್ಲಿ ಏಪ್ರಿಲ್ 6ರಂದು ನಡೆಯಲಿದೆ. ಹಾಗೆಯೇ ಮೇ 2ರಂದು ಮತ ಏಣಿಕೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಕೇರಳದಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಪ್ರವಾಸ
ತಿರುವನಂತಪುರ:
ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಭಾನುವಾರ ಕೇರಳದಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

ದಿನಪೂರ್ತಿ ವಿವಿಧ ಗಣ್ಯರು ಹಾಗೂ ಧರ್ಮ ಗುರುಗಳನ್ನು ಭೇಟಿಯಾದ ಅವರು, ಮುಖ್ಯವಾಗಿ ಬಿಜೆಪಿ ಮುಖಂಡರು ಹಾಗೂ ಮೆಟ್ರೋಮನ್ ಇ. ಶ್ರೀಧರನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಾಜ್ಯದಲ್ಲಿ ಪ್ರಚಾರ, ಕಾರ್ಯಕ್ರಮಗಳು, ಸಭೆಗಳ ಬಗ್ಗೆ ಡಿಸಿಎಂ ಅವರು ಶ್ರೀಧರನ್ ಜತೆ ಚರ್ಚೆ ನಡೆಸಿದರು.

ನಾರಾಯಣ ಗುರುವಿಗೆ ಗೌರವ: ತಿರುವನಂತಪುರ‌ ಜಿಲ್ಲೆಯ ವರ್ಕಾಲದಲ್ಲಿರುವ ಶ್ರೀ ನಾರಾಯಣ ಗುರು ಅವರ ಸಮಾಧಿ ಇರುವ ಶಿವಗಿರಿ ಮಠ ಮತ್ತು ಸಮೀಪದ ಕಾರ್ಡಿನಲ್ ಕ್ಲೀಮಿಸ್ ಎಮಿನೆನ್ಸ್ ಮಲಂಕರ ಚರ್ಚ್‌ಗೆ ಭೇಟಿ ನೀಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ, ‘ಕೇರಳದ ಜನರು ಪ್ರಗತಿಯನ್ನು ಬಯಸುತ್ತಾರೆ. ಇಲ್ಲಿ ಬಿಜೆಪಿ ಪರ ಅಲೆ ಬೀಸುತ್ತಿದೆ. ಎಲ್‌ಡಿಎಫ್ ಹಾಗೂ ಯುಡಿಎಫ್ ಆಡಳಿತದಿಂದ ಜನರು ಬೇಸತ್ತಿದ್ದಾರೆ’ ಎಂದರು.

ಸಂಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT