ಶನಿವಾರ, ಜುಲೈ 31, 2021
24 °C

ಗೋಹತ್ಯೆ, ಗೋಮಾಂಸ ಸೇವನೆಗೆ ಕಡಿವಾಣ: ಅಸ್ಸಾಂನಲ್ಲಿ ಮಸೂದೆ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ: ರಾಜ್ಯದಲ್ಲಿ ಹಿಂದೂ, ಜೈನರು, ಸಿಖ್ಖರು ಮತ್ತು ಗೋಮಾಂಸ ಸೇವಿಸದ ಇತರೆ ಸಮುದಾಯದವರು ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಗೋಮಾಂಸ ಮಾರಾಟ ನಿಷೇಧಿಸಲು ಅಸ್ಸಾಂನ ಬಿಜೆಪಿ ಸರ್ಕಾರ ಉದ್ದೇಶಿಸಿದೆ.

ಈ ಸಂಬಂಧ ‘ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ 2021’ಯ ಮಸೂದೆಯನ್ನು ಸರ್ಕಾರ ಮಂಡಿಸಿದೆ. ಅದರ ಪ್ರಕಾರ ದೇಗುಲ ಸೇರಿ ಹಿಂದೂ ಧಾರ್ಮಿಕ ಸಂಸ್ಥೆಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟವನ್ನು ನಿರ್ಬಂಧಿಸಲಾಗುತ್ತದೆ.

ಅಸ್ಸಾಂ ಸರ್ಕಾರದ ಅನುಮತಿಯಿಲ್ಲದೇ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಗೋಮಾಂಸ ಸಾಗಣೆಯನ್ನೂ ನಿರ್ಬಂಧಿಸಲು ಮಸೂದೆ ಅವಕಾಶ ನೀಡಲಿದೆ. ಇದು ನೆರೆಯ ಮಿಜೋರಾಂ, ನಾಗಾಲ್ಯಾಂಡ್‌, ಮೇಘಾಲಯಗಳಿಗೆ ಇರಿಸುಮುರಿಸು ತಂದಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮಸೂದೆಯನ್ನು ಮಂಡಿಸಿದರು. ಗೋಹತ್ಯೆ, ಗೋಮಾಂಸ ಸೇವನೆ, ಸಾಗಣೆ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮಗಳಿಗೆ ಅವಕಾಶ ಇರದಿದ್ದ ಹಾಲಿ 1950ರ ಕಾಯ್ದೆ ಬದಲು ಹೊಸ ಕಾಯ್ದೆ ತರುವುದು ಉದ್ದೇಶ.

ಹಾಲಿ ಕಾಯ್ದೆಯಡಿ, 14 ವರ್ಷ ಮೀರಿದ ಜಾನುವಾರುಗಳ ಹತ್ಯೆಗೆ ಅವಕಾಶವಿತ್ತು. ಉದ್ದೇಶಿತ ಮಸೂದೆಯು ಲೈಸೆನ್ಸ್‌ ಹೊಂದಿರುವ ಕಸಾಯಿಖಾನೆಗಳಲ್ಲಿಯಷ್ಟೇ ಗೋಹತ್ಯೆಗೆ ಅವಕಾಶ ನೀಡಿದೆ. ನಿಯಮಗಳ ಉಲ್ಲಂಘನೆ ಸಾಬೀತಾದಲ್ಲಿ 3 ರಿಂದ 5 ವರ್ಷ ಸಜೆ ಮತ್ತು ₹ 3ಲಕ್ಷದಿಂದ ₹ 5 ಲಕ್ಷವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು