ಬುಧವಾರ, ನವೆಂಬರ್ 30, 2022
17 °C
ಕಾನೂನು ಉಲ್ಲಂಘಿಸಿ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಜೀಪ್‌ ಚಾಲನೆ ಆರೋಪ

ಅಸ್ಸಾಂ: ಗ್ರಾಮಸ್ಥರಿಂದ ಸದ್ಗುರು, ಹಿಮಂತ ಬಿಸ್ವಾ ಶರ್ಮ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಶನಿವಾರ ರಾತ್ರಿ ವಾಹನ ಚಲಾಯಿಸಿದರು ಎಂಬ ಕಾರಣಕ್ಕೆ ಅವರಿಬ್ಬರ ವಿರುದ್ಧ ಉದ್ಯಾನ ಬಳಿಯ ಎರಡು ಗ್ರಾಮಗಳ ಇಬ್ಬರು ನಿವಾಸಿಗಳು ಎಫ್‌ಐಆರ್‌ ದಾಖಲಿಸಿದ್ದಾರೆ. 

ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಪ್ರವಾಸಿಗರಿಗಾಗಿ ಶನಿವಾರ ತೆರೆಯಲಾಯಿತು. ಅದೇ ದಿನ ರಾತ್ರಿ ಸದ್ಗುರು ಅವರು ಉದ್ಯಾನದ ಒಳಗೆ ಜೀಪ್‌ ಚಾಲನೆ ಮಾಡಿದ್ದಾರೆ, ಅವರ ಪಕ್ಕ ಹಿಮಂತ ಅವರು ಕುಳಿತಿದ್ದರು. ಅಸ್ಸಾಂ ಸಂಪುಟ ಸಚಿವ ಜಯಂತ ಮಲ್ಲ ಬರೂಆ ಮತ್ತಿತರರು ಕೂಡಾ ಜೀಪ್‌ನಲ್ಲಿ ರಾತ್ರಿ ಉದ್ಯಾನದಲ್ಲಿ ಸಂಚರಿಸಿದ್ದಾರೆ. ಇದು ವನ್ಯಜೀವಿ ಸಂರಕ್ಷಣೆ ಕಾಯ್ದೆ, 1972ರ ಉಲ್ಲಂಘನೆಯಾಗಿದೆ ಎಂದು ಎಪ್‌ಐಆರ್‌ನಲ್ಲಿ ದೂರುದಾರರು ಉಲ್ಲೇಖಿಸಿದ್ದಾರೆ.

‘ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಉದ್ಯಾನದೊಳಗೆ ಜೀಪ್‌ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಸದ್ಗುರು ಮತ್ತು ಹಿಮಂತ ಅವರು ಜೀಪ್‌ ಚಾಲನೆ ಮಾಡಿದ್ದಾರೆ. ಅವರಿಗಾಗಿ ಕಾನೂನು ಸಡಿಲಿಸುವುದು ಕಾಜಿರಂಗ ಮತ್ತು ಅಲ್ಲಿಯ ಪ್ರಾಣಿಗಳ ಸಂರಕ್ಷಣೆಗೆ ವಿಪತ್ತು ಉಂಟುಮಾಡುತ್ತದೆ. ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಅವರಿಬ್ಬರೂ ಸಾರ್ವಜನಿಕರಿಗೆ ಕ್ಷಮೆ ಯಾಚಿಸುವಂತೆ ಕಾನೂನಿನಡಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ. 

ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಆಯೋಜಿಸಿದ್ದ ‘ಚಿಂತನ ಶಿಬಿರ’ದಲ್ಲಿ ಸದ್ಗುರು ಅವರು ಶನಿವಾರ ಪಾಲ್ಗೊಂಡು ಮಾತನಾಡಿದ್ದರು.  ಮಣ್ಣಿನ ಬಳಕೆ ಮತ್ತು ಕೃಷಿ ಪದ್ಧತಿ ಕುರಿತು ಅಸ್ಸಾಂ ಸರ್ಕಾರದ ಜೊತೆ ಒಪ್ಪಂದವನ್ನೂ ಮಾಡಿಕೊಂಡಿದ್ದರು. 

ಎಫ್‌ಐಆರ್‌ ಕುರಿತು ಸದ್ಗುರು ಮತ್ತು ಹಿಮಂತ ಬಿಸ್ವಾ ಶರ್ಮ ಅವರು ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಸ್ಸಾಂನ ಗೋಲಘಾಟ್‌ ಜಿಲ್ಲೆಯ ಬೊಕಾಕಾಟ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಸೋನೇಶ್ವರ್‌ ನಾರಾ ಮತ್ತು ಪ್ರವೀಣ್‌ ಪೆಗು ಎಂಬುವವರು ಎಫ್‌ಐಆರ್‌ ದಾಖಲಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು