ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಕೋನ ಹಣಾಹಣಿಗೆ ಪಂಜಾಬ್ ಸಜ್ಜು

Last Updated 19 ಫೆಬ್ರುವರಿ 2022, 21:13 IST
ಅಕ್ಷರ ಗಾತ್ರ

ಚಂಡೀಗಡ: ಸಿಖ್ ಧರ್ಮೀಯರ ನಾಡು ಪಂಜಾಬ್‌ ಬಹು ಆಯಾಮದ ಚುನಾವಣಾ ಕದನಕ್ಕೆ ಸಜ್ಜಾಗಿದೆ. ವಿಧಾನಸಭೆಗೆ ಭಾನುವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು,ಇದೇ ಮೊದಲ ಬಾರಿಗೆ ಐದು ರಾಜಕೀಯ ಪಕ್ಷಗಳ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಇದು ಮತಗಳ ವಿಭಜನೆಗೆ ಕಾರಣವಾಗಲಿದ್ದು, ಅತಂತ್ರ ವಿಧಾನಸಭೆ ಏರ್ಪಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಾಂಗ್ರೆಸ್, ಎಎಪಿ, ಎಸ್‌ಎಡಿ–ಬಿಎಸ್‌ಪಿ ಮೈತ್ರಿಕೂಟ, ಬಿಜೆಪಿ–ಪಿಎಲ್‌ಸಿ–ಎಸ್‌ಎಡಿ (ಸಂಯುಕ್ತ) ಮೈತ್ರಿಕೂಟದ ಜೊತೆಗೆ ರೈತ ಸಂಘಟನೆಗಳ ವೇದಿಕೆಯಾದ ಸಂಯುಕ್ತ ಸಮಾಜ ಮೋರ್ಚಾ ಈ ಬಾರಿಯ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಗದ್ದುಗೆ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವಧಿಯಲ್ಲಿ ಪೆಟ್ರೋಲ್ ಹಾಗೂ ವಿದ್ಯುತ್ ದರಗಳನ್ನು ಕಡಿಮೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಪ್ರಬಲ ಎದುರಾಳಿ ಎಂದು ಪರಿಗಣಿತವಾಗಿರುವ ಆಮ್ ಆದ್ಮಿ ಪಕ್ಷವು ದೆಹಲಿ ಮಾದರಿ ಆಡಳಿತವನ್ನು ಮುಂದಿಟ್ಟುಕೊಂಡು ಪಂಜಾಬ್‌ ಗದ್ದುಗೆ ಏರಲು ಹವಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆದ್ದಿದ್ದ ಎಎಪಿ, ಇತ್ತೀಚೆಗೆ ನಡೆದ ಚಂಡೀಗಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿತ್ತು.

ಕೃಷಿ ಕಾಯ್ದೆ ವಿಚಾರವಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಜೊತೆಗಿನ ಸಂಬಂಧ ಕಡಿದುಕೊಂಡಿದ್ದ ಶಿರೋಮಣಿ ಅಕಾಲಿದಳವು ಬಿಎಸ್‌ಪಿ ಜೊತೆ ಕಣಕ್ಕಿಳಿದಿದೆ.ಸುಖ್‌ಬೀರ್ ಸಿಂಗ್ ಬಾದಲ್ ನೇತೃತ್ವದಲ್ಲಿ ಚುನಾವಣೆಗೆ ಸಜ್ಜಾಗಿರುವ ಪಕ್ಷವು ತನ್ನನ್ನು ‘ಪಂಜಾಬ್‌ನ ಸ್ವಂತ ಪಕ್ಷ’ ಎಂದು ಬಿಂಬಿಸಿಕೊಂಡಿದೆ.

ಈ ಮೊದಲಿನ ಚುನಾವಣೆಗಳಲ್ಲಿ ಮೈತ್ರಿಕೂಟದ ಸಣ್ಣಪಕ್ಷವಾಗಿದ್ದ ಬಿಜೆಪಿ, ಈ ಬಾರಿ ಪ್ರಮುಖ ಪಕ್ಷವಾಗಿ ಚುನಾವಣೆಗೆ ಧುಮುಕಿದೆ. ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್‌ಸಿ) ಹಾಗೂ ಸುಖದೇವ್ ಸಿಂಗ್ ಧಿಂಡ್ಸಾ ಅವರ ಎಸ್‌ಎಡಿ (ಸಂಯುಕ್ತ) ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಹೊಸ ಪಂಜಾಬ್ ನಿರ್ಮಾಣದಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ಆಯ್ಕೆ ಮಾಡುವಂತೆ ಬಿಜೆಪಿಯು ಮತದಾರರನ್ನು ಕೋರಿದೆ.

ರೈತ ಮುಖಂಡ ಗುರ್ನಾಮ್ ಸಿಂಗ್ ಚದೂನಿ ನೇತೃತ್ವದ ಸಂಯುಕ್ತ ಸಂಘರ್ಷ ಪಾರ್ಟಿ ಜೊತೆ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಸಮಾಜ ಮೋರ್ಚಾ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದೆ.

ಮುಖ್ಯಮಂತ್ರಿ ಚನ್ನಿ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್, ಮಾಜಿ ಮುಖ್ಯಮಂತ್ರಿಗಳಾದ ಅಮರಿಂದರ್ ಸಿಂಗ್ ಮತ್ತು ಪ್ರಕಾಶ್‌ಸಿಂಗ್ ಬಾದಲ್, ಮಾಜಿ ಮುಖ್ಯಮಂತ್ರಿ ರಾಜಿಂದರ್ ಕೌರ್ ಭಟ್ಟಲ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಶ್ವಿನ್ ಶರ್ಮಾ, ಮಾಜಿ ಕೇಂದ್ರ ಸಚಿವ ವಿಜಯ್ ಸಂಪ್ಲಾ ಮತ್ತು ಎಸ್‌ಎಡಿ ಮುಖ್ಯಸ್ಥ ಸುಖಬೀರ್‌ ಸಿಂಗ್ ಬಾದಲ್ ಮೊದಲಾದವರು ಕಣದಲ್ಲಿರುವ ಪ್ರಮುಖರಾಗಿದ್ದಾರೆ. ಬಹುತೇಕ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳನ್ನು ಘೋಷಿಸಿವೆ. 2017ರಲ್ಲಿ ಶಿರೋಮಣಿ ಅಕಾಲಿದಳ–ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಕಾಂಗ್ರೆಸ್‌ ಸೋಲಿಸಿತ್ತು. 2017ಕ್ಕೂ ಹಿಂದೆ 10 ವರ್ಷ ಶಿರೋಮಣಿ ಅಕಾಲಿದಳ–ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿತ್ತು.

ಪಂಜಾಬ್ ಚುನಾವಣೆ

ಪಂಜಾಬ್ ವಿಧಾನಸಭೆ ಸದಸ್ಯಬಲ:117
ಕಣದಲ್ಲಿರುವಅಭ್ಯರ್ಥಿಗಳು:1,304
ಮತದಾರರು:2.14 ಕೋಟಿ

ಉತ್ತರ ಪ್ರದೇಶ: 3ನೇ ಹಂತದ ಮತದಾನ ಇಂದು

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಭಾನುವಾರ ನಡೆಯಲಿದೆ. 16 ಜಿಲ್ಲೆಗಳಿಗೆ ಒಳಪಡುವ 59 ಕ್ಷೇತ್ರಗಳಲ್ಲಿ 627 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

2017ರ ಚುನಾವಣೆಯಲ್ಲಿ 59 ಕ್ಷೇತ್ರಗಳ ಪೈಕಿ ಬಿಜೆಪಿ 49ರಲ್ಲಿ, ಎಸ್‌ಪಿ 9 ಕ್ಷೇತ್ರಗಳಲ್ಲಿ ಗೆದ್ದಿದ್ದವು.

ಹಾಥರಸ್, ಫಿರೋಜಾಬಾದ್, ಇಟಾ, ಕಾಸ್‌ಗಂಜ್, ಮೈನ್‌ಪುರಿ, ಫರೂಕಾಬಾದ್‌, ಕನೌಜ್, ಇಟಾವಾ, ಔರಿಯಾ, ಕಾನ್ಪುರ ದೇಹತ್, ಕಾನ್ಪುರ ನಗರ, ಜಲೌನ್, ಝಾನ್ಸಿ, ಲಲಿತ್‌ಪುರ, ಹಮೀರ್‌ಪುರ, ಮಹೋಬಾ ಜಿಲ್ಲೆಗಳ2.15 ಕೋಟಿ ಜನರು ಮತ ಚಲಾಯಿಸಲಿದ್ದಾರೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸ್ಪರ್ಧಿಸಿರುವ ಕರ್ಹಾಲ್‌ ಕ್ಷೇತ್ರದ ಮತದಾನವೂ ಭಾನುವಾರ ನಡೆಯಲಿದೆ. ಈ ಕ್ಷೇತ್ರದಿಂದ ಕೇಂದ್ರ ಸಚಿವ ಎಸ್‌.ಪಿ. ಸಿಂಗ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಎಸ್‌ಪಿ ಸ್ಥಾಪಕ ಮುಲಾಯಂ ಸಿಂಗ್ ಅವರು ಮಗನ ಪರವಾಗಿ ಮತಯಾಚಿಸಿದ್ದರು.ಅಖಿಲೇಶ್ ಚಿಕ್ಕಪ್ಪ ಶಿವಪಾಲ್‌ ಯಾದವ್ ಅವರ ಭವಿಷ್ಯವೂ ನಿರ್ಧಾರವಾಗಲಿದೆ. ಈ ಕ್ಷೇತ್ರದಲ್ಲಿ ಅರೆಸೇನಾಪಡೆಗಳನ್ನು ಭದ್ರತೆಗೆ ನಿಯೋಜಿಸುವಂತೆ ಬಿಜೆಪಿ ಮನವಿ ಮಾಡಿತ್ತು.

ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಸಿ ಖುರ್ಷಿದ್, ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್, ಬಿಜೆಪಿಯ ಸತೀಶ್ ಮಹಾನ ಅವರು ಕಣದಲ್ಲಿರುವ ಇತರೆ ಪ್ರಮುಖರು.

ಸಿ.ಎಂ ಚನ್ನಿ ವಿರುದ್ಧ ಎಫ್‌ಐಆರ್

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿಧು ಮೂಸೆವಾಲಾ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಹಿರಂಗ ಪ್ರಚಾರವು ಶುಕ್ರವಾರ ಸಂಜೆ 6ಕ್ಕೆ ಅಂತ್ಯಗೊಂಡಿತ್ತು. ಅದರ ನಂತರವೂ ಇವರು ಚುನಾವಣಾ ಪ್ರಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಮನ್ಸಾ ಕ್ಷೇತ್ರದ ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT