ಬುಧವಾರ, ಆಗಸ್ಟ್ 10, 2022
23 °C

12–16 ವಾರಗಳ ಲಸಿಕಾ ಅಂತರ ಬೆಂಬಲಿಸಿದ ಕೋವಿಶೀಲ್ಡ್‌ ಪ್ರಯೋಗದ ತನಿಖಾಧಿಕಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ 12–16 ವಾರಗಳ ಅಂತರವನ್ನು ಲಸಿಕೆಯ ಕ್ಲಿನಿಕಲ್‌ ಪ್ರಯೋಗದ ಮುಖ್ಯ ತನಿಖಾಧಿಕಾರಿ ಶುಕ್ರವಾರ ಬೆಂಬಲಿಸಿದ್ದಾರೆ.

ಒಂದು ಡೋಸ್‌ನಿಂದ ಸಿಗುವ ರಕ್ಷಣೆಯು ಎರಡು ಮತ್ತು ಮೂರನೇ ತಿಂಗಳಲ್ಲಿ ಗಮನಾರ್ಹವಾಗಿ ವೃದ್ಧಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮ ಸಂಸ್ಥೆ ‘ದಿ ವೈರ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರೊಫೆಸರ್ ಆಂಡ್ರ್ಯೂ ಪೊಲಾರ್ಡ್, ‘ಬ್ರಿಟನ್ ಮತ್ತು ಭಾರತದಲ್ಲಿನ ಲಸಿಕೆ ನೀತಿಯನ್ನು ಪರಸ್ಪರ ಹೋಲಿಕೆ ಮಾಡಿ ನೋಡಲಾಗದು. ಎರಡೂ ದೇಶಗಳಲ್ಲೂ ಭಿನ್ನ ಸನ್ನಿವೇಶಗಳಿವೆ. ಪ್ರಸ್ತುತ ಕನಿಷ್ಠ ಒಂದು ಡೋಸ್‌ನೊಂದಿಗೆ ಅತಿ ಹೆಚ್ಚು ಜನರಿಗೆ ರೋಗದಿಂದ ರಕ್ಷಣೆ ನೀಡುವುದು ಭಾರತದ ಲಸಿಕೆ ನೀತಿಯಾಗಿದೆ,’ ಎಂದು ಆಕ್ಸ್‌ಫರ್ಡ್‌ ಲಸಿಕೆ ಸಮೂಹದ ನಿರ್ದೇಶಕರೂ ಆಗಿರುವ ಪೊಲಾರ್ಡ್ ಹೇಳಿದ್ದಾರೆ.

ಭಾರತದಲ್ಲಿನ ಲಸಿಕೆ ಅಂತರವನ್ನು ಪೊಲಾರ್ಡ್‌ ಬೆಂಬಲಿಸಿದ್ದಾರಾದರೂ, ಕೋವಿಶೀಲ್ಡ್‌ ಒಂದೇ ಡೋಸ್‌ನ ಲಸಿಕೆಯಲ್ಲ ಎಂಬುದನ್ನೂ ಅವರು ಪ್ರತಿಪಾದಿಸಿದ್ದಾರೆ.

‘ಕೋವಿಶೀಲ್ಡ್‌ ಎರಡು ಡೋಸ್‌ಗಳ ಲಸಿಕೆ. ಒಂದು ಡೋಸ್‌ ಹಾಕಿಸಿಕೊಂಡಿದ್ದರೆ ಸರಿ. ಆದರೆ, ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ಉದ್ದೀಪಿಸಲು ಎರಡನೇ ಡೋಸ್‌ ಅತ್ಯಗತ್ಯ,‘ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಗಂಭೀರ ಅನಾರೋಗ್ಯವನ್ನು ತಗ್ಗಿಸುವುದು, ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳನ್ನು ಕಡಿಮೆ ಮಾಡುವುದರತ್ತ ನಮ್ಮ ಗಮನ ಇರಬೇಕು,‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕೋವಿಡ್‌ ಲಸಿಕೆಗಳ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸುತ್ತಿರುವ ನಡುವೆಯೇ ಬ್ರಿಟನ್‌ನಲ್ಲಿ ಅಂತರವನ್ನು ಕಡಿಮೆ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲಾರ್ಡ್‌, ಬ್ರಿಟನ್‌ನಲ್ಲಿ ಈಗಾಗಲೇ ಭಾಗಶಃ ಜನಸಂಖ್ಯೆಗೆ ಒಂದು ಡೋಸ್‌ ನೀಡಲಾಗಿದೆ. ಹೀಗಾಗಿ ಎರಡನೇ ಡೋಸ್‌ನ ಅಂತರವನ್ನು ತಗ್ಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘ಡೆಲ್ಟಾ ಮಾದರಿಯ ಕೊರೊನಾ ವೈರಸ್‌ ತಳಿ ಭಾರತದಲ್ಲಿ ಅತಿವೇಗವಾಗಿ ಹರಡುತ್ತಿರುವುದರ ನಡುವೆಯೂ ದೇಶದಲ್ಲಿ ಬಹುದೊಡ್ಡ ಜನಸಂಖ್ಯೆಗೆ ಲಸಿಕೆ ಲಭ್ಯವಾಗಿಲ್ಲ. ಹೀಗಾಗಿ ಅವರಿಗೆ ರಕ್ಷಣೆ ದೊರೆತಿಲ್ಲ,‘ ಎಂದು ಕೆಲ ವಿಜ್ಞಾನಿಗಳು ಹೇಳಿದ್ದರು.

ಭಾರತವು ಈವರೆಗೆ ಒಟ್ಟು 26,89,60,399 (26.89 ಕೋಟಿ) ಕೋವಿಡ್‌ ಲಸಿಕೆಗಳನ್ನು ಜನರಿಗೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು