ಬುಧವಾರ, ಆಗಸ್ಟ್ 17, 2022
25 °C

ವಾಜಪೇಯಿ ಪ್ರಣೀತ ಕಾಶ್ಮೀರ ನೀತಿ: ಮತ್ತೊಮ್ಮೆ ನೆನೆಯೋಣ ಬನ್ನಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯು ಹಿಂಸಾಚಾರ ಪೀಡಿತ ಕಾಶ್ಮೀರ ಕಣಿವೆಯಲ್ಲಿ ತಂಗಾಳಿಯಂತೆ ಬೀಸಿತ್ತು. ಕಾಶ್ಮೀರದ ನೆಚ್ಚಿನ ಪ್ರಧಾನಿಯಾಗಿದ್ದರು ವಾಜಪೇಯಿ.

ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಶ್ಮೀರ ನೀತಿಯೇ ಒಂದು ಅದ್ಭುತ ಚಿಂತನೆ. ಜಮ್ಮು ಮತ್ತು ಕಾಶ್ಮಿರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅದೊಂದು ಪ್ರಾಯೋಗಿಕ ವಿಧಾನವಾಗಿತ್ತು. ತಮ್ಮ ವಾಕ್ಚಾತುರ್ಯದ ಮೂಲಕ ಅವರು, ಜಮ್ಮು ಮತ್ತು ಕಾಶ್ಮಿರದ ಬಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಕೇಳಿ ಬರುತ್ತಿದ್ದ ನಿರೂಪಣೆಗಳ ಸ್ವರವನ್ನೇ ಬದಲಾಯಿಸಿದ್ದರು.

ಇದನ್ನೂ ಓದಿ: ಕವಿ ಹೃದಯದ ರಾಜಕಾರಿಣಿ, ವಾಜಪೇಯಿ ಕವಿತೆಗಳು

2003ರಲ್ಲಿ ವಾಜಪೇಯಿ ಅವರು ನೀಡಿದ ‘ಕಾಶ್ಮೀರಿಯತ್’ (ಅಂತರ್ಗತ ಕಾಶ್ಮೀರಿ ಸಂಸ್ಕೃತಿ), ಇನ್ಸಾನಿಯತ್‌ (ಮಾನವತಾವಾದ), ಜಮ್ಹೂರಿಯಾತ್‌ (ಪ್ರಜಾಪ್ರಭುತ್ವ) ಎಂಬ ಮೂರು ತತ್ವಗಳನ್ನು ಆಧರಿಸಿದ್ದ ಘೋಷಣೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮರಸ್ಯ ಶಕ್ತಿಗಳ ಮೂಲಾಧಾರವಾಗಿತ್ತು. ಈ ಮೂರು ಮಾಂತ್ರಿಕ ಪದಗಳ ಪ್ರತಿ ಉಲ್ಲೇಖವೂ ಕಣಿವೆ ರಾಜ್ಯದಲ್ಲಿ ಭಾರೀ ಸಂಚಲನವನ್ನೇ ಉಂಟುಮಾಡಿದವು.

ವಾಜಪೇಯಿ ಅವರ ಘೋಷಣೆ ಕೇವಲ ವಾಕ್ಚಾತುರ್ಯದ ಹೇಳಿಕೆ ಅಥವಾ ಕವಿಯ ಲಯಬದ್ಧವಾದ ಪದಗಳ ಕುಶಲತೆಯೂ ಆಗಿರಲಿಲ್ಲ. ಅದು, ವಿವೇಕಯುತ ಕಾಶ್ಮೀರ ನೀತಿಯನ್ನು ರೂಪಿಸುವ ಪ್ರಕ್ರಿಯೆಯಾಗಿತ್ತು. ಶಾಂತಿ ಸ್ಥಾಪನೆ ಮತ್ತು ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ಶಾಶ್ವತ ರಾಜಕೀಯ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗೋಪಾಯಗಳನ್ನು ಸೃಷ್ಟಿಸಿತ್ತು.

ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಶ್ಮೀರ ನೀತಿಯ ಯಶಸ್ಸಿನ ಸೂತ್ರಗಳು ಪುನರಾವರ್ತನೆಯಾಗಬೇಕು ಎಂದು ಎರಡು ದಶಕದ ನಂತರವೂ ರಾಜಕಾರಣಿಗಳು, ನಾಗರಿಕ ಸಮಾಜ, ಬುದ್ಧಿಜೀವಿಗಳು ಮತ್ತು ಅಲ್ಲಿನ ಸಾಮಾನ್ಯ ಜನರು ಎದುರು ನೋಡುತ್ತಿದ್ದಾರೆ.

ಹುರಿಯತ್‌ ಸಂಘಟನೆ ವಿಭಜನೆ

ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಕಾಶ್ಮಿರ ಸಮಸ್ಯೆಗೆ ಭಾರತದ ಸಂವಿಧಾನದ ಪರಿಧಿಯಾಚೆಗೆ ಪರಿಹಾರ ಹುಡುಕಲು ಸಿದ್ಧರಿದ್ದರು. ಇದು, ಹುರಿಯತ್‌ ಸಂಘಟನೆಯು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಅವಕಾಶ ಒದಗಿಸಿದ ಸಾಂಕೇತಿಕ ಸೂಚಕವೂ ಆಗಿತ್ತು. ಭೀತಿಗೊಳಗಾದ ಉಗ್ರಗಾಮಿ ಸಂಘಟನೆ ಹಿಜ್ಬುಲ್‌ ಮುಜಾಹಿದ್ದೀನ್‌ ಎರಡಾಗಿ ವಿಭಜನೆಯಾಯಿತು. ಮಜೀದ್‌ ದಾರ್‌ ನೇತೃತ್ವದ ಬಣವು ಶಾಂತಿ ಮಾತುಕತೆಗಾಗಿ ಶರಣಾಯಿತು. 2015ರಲ್ಲಿ ರಾಜ್ಯದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಗರಿಗೆದರುವವರೆಗೆ ಬಂದೂಕಿನ ನಿರರ್ಥಕತೆಯನ್ನು ಅರಿತು, ಅದನ್ನು ತಿರಸ್ಕರಿಸುವಲ್ಲಿ ಶರಣಾಗತಿಯಾದ ಬಣವು ಪ್ರಮುಖ ಪಾತ್ರ ವಹಿಸಿತು. 

1989ರಲ್ಲಿ ಜಿಯಾ ಅವರ ನಿಗೂಢ ಸಾವಿನ ನಂತರವೇ ಕಾಶ್ಮೀರ ಸಮಸ್ಯೆಗೆ ಮತ್ತೊಮ್ಮೆ ಜೀವ ಬಂತು. 2008ರಲ್ಲಿ ಕಾಶ್ಮೀರ ಸಮಸ್ಯೆಗೆ ಹೆಚ್ಚುಕಡಿಮೆ ‘ಪರಿಹಾರ’ ದೊರಕಿತ್ತು ಎಂದು ಪಾಕಿಸ್ತಾನದ ರಾಜತಾಂತ್ರಿಕರು ಹೇಳಿಕೊಂಡರೂ, ಆಗಲೇ  ಮುಂಬೈ ಮೇಲೆ ದಾಳಿಯೂ ನಡೆಯಿತು ಎನ್ನುವುದನ್ನು ಮರೆಯುವಂತಿಲ್ಲ. ಕಾಶ್ಮೀರದಲ್ಲಿ ಅಶಾಂತಿಯೂ ರೂಪ ಪಡೆಯಿತು. ಕಲ್ಲು ತೂರಾಟ, ಬೀದಿ ಬೀದಿಯಲ್ಲಿ ಹಿಂಸಾಚಾರ ನಡೆಯುವ ಮೂಲಕ ಮತ್ತೊಮ್ಮೆ ಪ್ರಕ್ಷುಬ್ಧವಾಯಿತು.

ನೆಹರೂ ಗರಡಿಯ ಪ್ರಜಾಪ್ರಭುತ್ವವಾದಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮತ್ತು ಚುನಾವಣಾ ರಾಜಕಾರಣವನ್ನು ಸತತವಾಗಿ ಪ್ರಚೋದಿಸಿದರು. ಶೇಖ್ ಅಬ್ದುಲ್ಲಾ ಸೇರಿದಂತೆ ವಿವಿಧ ರಾಜಕೀಯ ನಾಯಕರ ಅಧಿಕಾರವು ಕಣ್ಣಾಮುಚ್ಚಾಲೆ ಆಟದಂತಿತ್ತು. ಕಾಂಗ್ರೆಸ್‌ನ ರಾಜಕೀಯ ಗುಪ್ತ ಚಟುವಟಿಕೆಗಳು ಹಾಗೂ 1987ರಲ್ಲಿ ವಿಧಾನಸಭೆ ಚುನಾವಣೆಯಲ್ಲಿನ ಬದಲಾವಣೆಗಳು ರಾಜಕೀಯ ನಿರ್ವಾತ ಸ್ಥಿತಿಯನ್ನು ಸೃಷ್ಟಿಸಿತು ಮತ್ತು ಅದು ಅಂತಿಮವಾಗಿ ಬಂಡಾಯಕ್ಕೆ ನಾಂದಿ ಹಾಡಿತು.

ಹೀಗಾಗಿ, ರಾಜ್ಯದ ಜನರು ಪ್ರಜಾಪ್ರಭುತ್ವ ಮತ್ತು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡರು. ಭ್ರಮನಿರಸನಗೊಂಡು, ಹಲವು ವರ್ಷಗಳ ಕಾಲ ಚುನಾವಣಾ ಪ್ರಕ್ರಿಯೆಯಿಂದ ದೂರ ಸರಿದರು. ಇದರ ಪರಿಣಾಮವಾಗಿ ಪ್ರಜಾಪ್ರಭುತ್ವದ ಪುನರ್‌ ಸ್ಥಾಪನೆಯು ರಾಜ್ಯದಲ್ಲಿ ಏಕೈಕ ದೊಡ್ಡ ಸವಾಲಾಗಿತ್ತು.

ಬಂಡಾಯ ಮುರಿದ 1996ರ ಚುನಾವಣೆ

1996ರಲ್ಲಿ ಚುನಾವಣೆ ನಡೆಸುವ ದಿಟ್ಟ ನಡೆಯು ಬಂಡಾಯದ ಬೆನ್ನುಮೂಳೆಯನ್ನೇ ಮುರಿಯಿತು. ತರುವಾಯ, 2002ರ ಚುನಾವಣೆಯಲ್ಲಿ ವಾಜಪೇಯಿ ಅವರ ‘ಜಮ್ಹೂರಿಯತ್‌’ (ಪ್ರಜಾಪ್ರಭುತ್ವ) ಬಗೆಗಿನ ಅವರ ಅಚಲವಾದ ಬದ್ಧತೆಯು ಜನರು ವ್ಯಾಪಕವಾಗಿ ಭಾಗವಹಿಸುವ ಮೂಲಕ ವಿಶ್ವಾಸದ ಅಲೆಯನ್ನು ಹುಟ್ಟುಹಾಕಿತು. ಹಿಂದಿನ ಚುನಾವಣಾ ಅಕ್ರಮಗಳ ಕಹಿ ನೆನಪನ್ನು ಮರೆಸಿತು. ಸಾಮರಸ್ಯದ ದೃಷ್ಟಿಯಿಂದಲೂ ಪ್ರಜಾಪ್ರಭುತ್ವದ ಅಭಿವ್ಯಕ್ತಿಯ ಹೊಸ ಆಂದೋಲನವಾಗಿ ಬದಲಾಯಿತು.

ಜಮ್ಮು ಮತ್ತು ಕಾಶ್ಮಿರದಲ್ಲಿ 2016ರ ಅಶಾಂತಿಯ ದಿನಗಳ ಸಂದರ್ಭದಲ್ಲಿ, ಆಗ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ವಾಜಪೇಯಿ ಅವರ ಸಮಸ್ಯೆ ಪರಿಹಾರ ಸೂತ್ರದ ಮಾರ್ಗಗಳನ್ನು ಪುನರಾವರ್ತಿಸಲು ಯತ್ನಿಸಿದರು. 2014ರ ಲೋಕಸಭಾ ಚುನಾವಣೆಯ ಬಳಿಕ, ಕಾಶ್ಮೀರ ಪ್ರತ್ಯೇಕವಾದಿ ಮುಖಂಡ ಮಿರ್ವಾಯಿಜ್‌, ಪ್ರಧಾನಿ ನರೇಂದ್ರ ಮೋದಿ ಅವರಿಂದ ಭರವಸೆಯನ್ನು ನಿರೀಕ್ಷಿಸಿದ್ದರು ಮತ್ತು ಮೋದಿ ಅವರು ವಾಜಪೇಯಿ ಅವರ ನೀತಿಯನ್ನು ರಾಜ್ಯದಲ್ಲಿ ಪುನರಾವರ್ತಿಸಬೇಕು ಎಂದು ಬಯಸಿದ್ದರು. 

ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಶ್ಮೀರ ನೀತಿಯ ಯಶಸ್ಸಿನ ಸೂತ್ರಗಳನ್ನು ಎರಡು ದಶಕದ ನಂತರವೂ ರಾಜಕಾರಣಿಗಳು, ನಾಗರಿಕ ಸಮಾಜ, ಬುದ್ಧಿಜೀವಿಗಳು ಮತ್ತು ಅಲ್ಲಿನ ಸಾಮಾನ್ಯ ಜನರು ಪುನರಾವರ್ತಿಸಲು ಎದುರು ನೋಡುತ್ತಿದ್ದಾರೆ.

‘ಕಾಶ್ಮೀರ ಮತ್ತು ದಕ್ಷಿಣ ಏಷ್ಯಾಕ್ಕೆ ಆದ ನಷ್ಟ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೊಬ್ಬರು ವಾಜಪೇಯಿ ಅವರನ್ನು ಸ್ಮರಿಸುತ್ತಾ ಹೀಗೆ ಹೇಳಿದ್ದರು: ‘2004ರ ಚುನಾವಣೆಯಲ್ಲಾದ ನಷ್ಟ (ಲೋಕಸಬಾ ಚುನಾವಣೆ) ಕಾಶ್ಮೀರ ಮತ್ತು ದಕ್ಷಿಣ ಏಷ್ಯಾಕ್ಕೆ ಆದ ನಷ್ಟ ಎಂದು ಪರಿಗಣಿಸಲಾಗಿದೆ. ಕಾಶ್ಮೀರಿಗಳ ಭಾವನೆ ಅರ್ಥ ಮಾಡಿಕೊಂಡಿದ್ದ ಪ್ರಧಾನಿ ವಾಜಪೇಯಿ ದಕ್ಷಿಣ ಏಷ್ಯಾಕ್ಕೆ ಹೊಸ ಶಾಂತಿ ಕಾರ್ಯಸೂಚಿಯನ್ನೂ ರಚಿಸಿದ್ದರು. ಕಾಶ್ಮೀರದ ಜನರ ಭಾವನೆಗಳನ್ನು ಒಟ್ಟುಗೂಡಿಸಿದ್ದರು. ಕಾಶ್ಮೀರವನ್ನು ಯಾವುದೇ ಶಕ್ತಿ/ಬಲಪ್ರಯೋಗ ಮಾಡದೆ ಮತ್ತು ಗಡಿಗಳನ್ನು ಪುನರ್‌ ರಚಿಸದೆ ಸಮಸ್ಯೆ ಪರಿಹರಿಸಬಹುದು ಎಂದು ವಾಜಪೇಯಿ ನಂಬಿದ್ದರು’.

ಹೆಚ್ಚಿನ ಕಾಶ್ಮೀರಿಗಳು ವಾಜಪೇಯಿ ಅವರ ಮಹತ್ವವನ್ನು ಅರಿತುಕೊಂಡಿದ್ದಾರೆ. ರಾಜಕೀಯದ ಗಡಿ ದಾಟಿ, ಅವರ ನೀತಿಗಳಿಗೆ ಅಗಾಧವಾದ ಮಾನ್ಯತೆ ಇದೆ. ಕಾಶ್ಮೀರ ಜನರ ಹಿತ, ಭದ್ರತೆ ಹಾಗೂ ಶಾಂತಿ ಕುರಿತಂತೆ 1947ರ ನಂತರದ ದಿನಗಳಲ್ಲಿ ವಾಜಪೇಯಿ ಅವರ ಆಡಳಿತದ ವರ್ಷಗಳು ಅತ್ಯುತ್ತಮವಾದವು ಎಂಬುದಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಸಾಕ್ಷಿಗಳು ಸಿಗುತ್ತವೆ.

ಪಾಕಿಸ್ತಾನಕ್ಕೆ ಪ್ರತೀಕಾರ ತೀರಿಸಿದ ಪ್ರಧಾನಿ

ವಾಜಪೇಯಿ ಅವರ ಕಾಶ್ಮೀರ ನೀತಿಯನ್ನು ವಿಶ್ಲೇಷಿಸುವಾಗ, ಅವರು ‘ಶಾಂತಿ’ ಪ್ರತಿಪಾದಕ ಮಾತ್ರ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು. ಅವರು ಭಾರತಕ್ಕಾಗಿ ಪ್ರಬಲ ಶಕ್ತಿಯ (ಅಣು ಶಕ್ತಿ) ಅಗತ್ಯವನ್ನು ಮನಗಂಡಿದ್ದರು ಮತ್ತು ಪಾಕಿಸ್ತಾನದಿಂದ ಬಂದ ಯುದ್ಧ ಪ್ರಚೋದನೆಗಳಿಗೆ ಪ್ರತೀಕಾರವನ್ನೂ ತೀರಿಸಿದರು.

ಅದೇ ಸಮಯದಲ್ಲಿ ದೇಶದ ಅತ್ಯಂತ ಸಂಕೀರ್ಣವಾದ ಸಮಸ್ಯೆಗಳನ್ನು ಶಾಂತಿಯುತ ಮಾರ್ಗಗಳ ಮೂಲಕ ಪರಿಹರಿಸಲು ಪ್ರಯತ್ನಿಸುವ ದೂರದೃಷ್ಟಿ ಮತ್ತು ಧೈರ್ಯವನ್ನು ಹೊಂದಿದ್ದರು. ಪ್ರಧಾನಿಯಾಗಿದ್ದ ಅವರ ಅಧಿಕಾರವಧಿಯು ಹಿಂಸಾಚಾರ ಪೀಡಿತ ಕಾಶ್ಮೀರ ಕಣಿವೆಯಲ್ಲಿ ತಂಗಾಳಿಯಂತೆ ಬೀಸಿತ್ತು.


ನರೇಂದ್ರ ಮೋದಿ, ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು. ಬರಹ:  ಶಿವಕುಮಾರ್ ಜಿ.ಎನ್.)

 

ಇನ್ನಷ್ಟು... 

*  ಸ್ಮರಣೆ | ಜನ–ಮನದಲ್ಲಿ ಅಚ್ಚಳಿಯದೆ ಉಳಿದ ಕವಿ ಹೃದಯದ ಮತ್ಸದ್ದಿ, ‘ಅಜಾತಶತ್ರು’

ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯ ಜನಕ ಅಟಲ್‌ಜೀ

ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷಣ ಮಾಡಿದ ಮೊದಲ ನಾಯಕ ವಾಜಪೇಯಿ

ವಾಜಪೇಯಿಗೆ ಇತ್ತು ತುಮಕೂರಿನ ಗೆಳೆತನದ ನಂಟು

ಕವಿಹೃದಯದ ನೇತಾರ: ಮಾತಿನ ಸೊಗಸುಗಾರ

‘ಚಿನ್ನದೂರಿನ’ ಜತೆ ‘ಅಟಲ್‌’ ನಂಟು

ಗೌಡಾಜೀ ಆಯಿಯೇ ಕುಛ್‌ ತೋ ಕರೇಂಗೆ...ದೇವೇಗೌಡರಿಗೆ ಅಟಲ್‌ಜೀ ಸ್ವಾಗತ ನುಡಿ

‘ಅಜಾತ ಶತ್ರು’ಗೆ ಉತ್ತರ ಕನ್ನಡದ ನಂಟು

ಸಂಸ್ಮರಣೆ | ಪರಿಸರ ಸ್ನೇಹಿಯೂ; ಆಕರ್ಷಕ ಗಣಪನೂ...! 

ಸೂಚನೆ: ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಈ ಲೇಖನವನ್ನು ಮರು ಪ್ರಕಟಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು