ಶನಿವಾರ, ಅಕ್ಟೋಬರ್ 23, 2021
22 °C
ಅರೆ ನ್ಯಾಯಾಂಗ ಆಡಳಿತ ವ್ಯವಸ್ಥೆಗೆ ‘ಸುಪ್ರೀಂ’ ನಿರ್ದೇಶನ

ಪ್ರತಿ ನಿರ್ಧಾರಕ್ಕೂ ಕಾರಣ ದಾಖಲಿಸಿ: ‘ಸುಪ್ರೀಂ’ ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಅರೆ ನ್ಯಾಯಾಂಗದ ಹೊಣೆಗಾರಿಕೆ ನಿಭಾಯಿಸುತ್ತಿರುವ ಪ್ರಾಧಿಕಾರಗಳು ಮತ್ತು ಆಡಳಿತ ವ್ಯವಸ್ಥೆಯು ತಮ್ಮ ಪ್ರತಿ ತೀರ್ಮಾನಕ್ಕೂ ಕಡ್ಡಾಯವಾಗಿ ಕಾರಣ ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಲಿಖಿತವಾಗಿ ಕಾರಣಗಳನ್ನು ದಾಖಲಿಸಬೇಕು ಎಂದು ಕಾಯ್ದೆಯಲ್ಲಿ ಇದ್ದಲ್ಲಿ ಅನುಮಾನಕ್ಕೆ ಆಸ್ಪದವಿಲ್ಲದಂತೆ ಅದನ್ನು ನಿಭಾಯಿಸಬೇಕು. ಇಲ್ಲದಿದ್ದರೆ ಅದು ಕಾಯ್ದೆಯ ಉಲ್ಲಂಘನೆಯಾಗಲಿದೆ ಎಂದು ಸ್ಪಷ್ಟವಾಗಿ ಹೇಳಿತು.

‘ಕಾರಣಗಳನ್ನು ದಾಖಲಿಸುವ ಸಂದರ್ಭ ಇಲ್ಲದಿದ್ದರೆ ಅಥವಾ ಆದೇಶ ಸಮರ್ಥಿಸಲು ಕಾರಣಗಳಿದ್ದರೆ ಶಂಕೆಗೆ ಆಸ್ಪದವಿರುವುದಿಲ್ಲ. ಆದರೆ, ಪ್ರತಿ ನಿರ್ಧಾರಕ್ಕೂ ಒಂದು ಕಾರಣ ಇದ್ದಿರಲೇಬೇಕು’ ಎಂದೂ ಕೋರ್ಟ್ ಹೇಳಿತು.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಮತ್ತು ಎಸ್‌.ರವೀಂದ್ರ ಭಟ್‌ ಅವರಿದ್ದ ಪೀಠವು, ಕಾರಣವನ್ನು ತಿಳಿಯುವ ಹಕ್ಕು ಅಥವಾ ಆಸಕ್ತಿ ಇದ್ದವರಿಗೆ ಈ ಅಂಶಗಳು ತಿಳಿಯಬೇಕು ಎಂದು ಅಭಿಪ್ರಾಯಪಟ್ಟಿತು.

ಅರೆ ನ್ಯಾಯಾಂಗವಾಗಿ ಕಾರ್ಯನಿರ್ವಹಿಸುವ ಆಡಳಿತಾತ್ಮಕ ಪ್ರಾಧಿಕಾರವು, ಆಡಳಿತಾತ್ಮಕ ನಿರ್ಧಾರ ಕೈಗೊಂಡಾಗಲೂ ಅದಕ್ಕೆ ಕಾರಣ ತಿಳಿಸಬೇಕು. ಇಲ್ಲದಿದ್ದರೆ ಕಾನೂನು ಹಕ್ಕುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿತು.

ಒಕ್ಕೂಟ ಸರ್ಕಾರ ಮತ್ತು ರಾಜ್ಯಗಳಿಗೆ ಕ್ರಮವಾಗಿ ಸಂವಿಧಾನದ ವಿಧಿ 73 ಮತ್ತು 162ರ ಪ್ರಕಾರ ಕಾರ್ಯಕಾರಿ ಅಧಿಕಾರವಿದೆ. ನಿಸ್ಸಂದೇಹವಾಗಿ ಭಾರತದಲ್ಲಿ ರಾಜ್ಯಗಳ ಪ್ರತಿ ನಿರ್ಧಾರವು ನ್ಯಾಯಯುತವಾಗಿರಬೇಕು. ಇಲ್ಲದಿದ್ದರೆ ಅದು ವಿಧಿ 14ರಲ್ಲಿನ ಅಡಕಗಳ ಅಣಕವಾಗಲಿದೆ ಎಂದೂ ಪೀಠವು ತನ್ನ 109 ಪುಟಗಳ ತೀರ್ಪಿನಲ್ಲಿ ನಮೂದಿಸಿದೆ.

ಬಿಹಾರದಲ್ಲಿ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ಪಾಟ್ನಾ–ಭಕ್ತಿಯಾರ್‌ಪುರ್‌ ಹೆದ್ದಾರಿಯಲ್ಲಿ ಟೋಲ್‌ ಪ್ಲಾಜಾವನ್ನು 194 ಕಿ.ಮೀ ಬದಲಾಗಿ ಬೇರೊಂದು ಕಡೆ ಸ್ಥಾಪಿಸಬೇಕು ಎಂಬ ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪಿನಲ್ಲಿ ಕೋರ್ಟ್ ಈ ಮಾತು ಹೇಳಿತು.

ಅಲ್ಲದೆ, ಸರ್ವೀಸ್‌ ರಸ್ತೆ ಬಂದ್ ಮಾಡಿ ಹಾಕಿರುವ ಕೃತಕ ತಡೆಗೋಡೆ ತೆರವುಗೊಳಿಸಬೇಕು. ಪ್ರತಿ ನಿರ್ಧಾರಕ್ಕೆ ಸಮರ್ಪಕ ಕಾರಣ ದಾಖಲಿಸಲು ತನ್ನ ಎಲ್ಲ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಪೀಠವು ಎನ್‌ಎಚ್‌ಎಐಗೆ ನಿರ್ದೇಶನ ನೀಡಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು