ಗುರುವಾರ , ಜುಲೈ 29, 2021
24 °C
ಶುರುವಾಗಿದೆ ಕೇಂದ್ರ ಸಂಪುಟ ಪುನರ್‌ರಚನೆ ಕಸರತ್ತು

ಬಿ.ವೈ. ರಾಘವೇಂದ್ರ ಸೇರ್ಪಡೆಗೆ ವರಿಷ್ಠರ ಒತ್ತು?

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಸತ್‌ನ ಮುಂಗಾರು ಅಧಿವೇಶನಕ್ಕೆ ತುಸು ಮೊದಲು ಕೇಂದ್ರ ಸಂಪುಟದ ಪುನರ್‌ರಚನೆಯ ಸಾಧ್ಯತೆ ದಟ್ಟವಾಗಿದೆ. ಈ ಸುಳಿವು ದೊರೆಯುತ್ತಿದ್ದಂತೆಯೇ ಸಚಿವ ಸ್ಥಾನದ ಕನಸು ಕಾಣುತ್ತಿರುವ ರಾಜ್ಯದ ಸಂಸದರಲ್ಲೂ ನಿರೀಕ್ಷೆಗಳು ಗರಿಗೆದರಿವೆ.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ತಮ್ಮಲ್ಲೇ ಒಬ್ಬರಿಗೆ ಅವಕಾಶ ದೊರೆಯಬಹುದು ಎಂಬ ಲೆಕ್ಕಾಚಾರ ರಾಜ್ಯ ಬಿಜೆಪಿ ಸಂಸದರದ್ದಾಗಿದೆ.

ರಾಜ್ಯದಿಂದ ಬಿಜೆಪಿಯ 25 ಸಂಸದರು ಆಯ್ಕೆಯಾಗಿದ್ದು, ಪ್ರಲ್ಹಾದ ಜೋಶಿ ಹಾಗೂ ಡಿ.ವಿ. ಸದಾನಂದಗೌಡ ಅವರಿಬ್ಬರೂ ಸಂಪುಟ ದರ್ಜೆ ಸಚಿವರಾಗಿದ್ದಾರೆ. ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ಒಬ್ಬರು ಅಥವಾ ಇಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯೂ ಇದೆ.

ಲಾಬಿಗೆ ಅವಕಾಶ ಇಲ್ಲದ್ದರಿಂದ ಹಾಗೂ ಸ್ಥಾನಮಾನ ನೀಡುವ ವಿಷಯದಲ್ಲಿ ಬಿಜೆಪಿ ವರಿಷ್ಠರು ಗುಟ್ಟನ್ನೇ ಬಿಟ್ಟು ಕೊಡದ್ದರಿಂದ ತಮ್ಮ ಆಕಾಂಕ್ಷೆಯನ್ನು ಬಹಿರಂಗಪಡಿಸದ ಕೆಲವರು, ರಾಜ್ಯ ಖಾತೆ ಅಥವಾ ಸ್ವತಂತ್ರ ಖಾತೆಯ ಸಚಿವ ಸ್ಥಾನ ದೊರೆಯಬಹುದು ಎಂಬ ವಿಶ್ವಾಸ ಹೊಂದಿದ್ದಾರೆ.

ಆದರೆ, ಸಚಿವ ಸ್ಥಾನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುತ್ರ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೆಸರು ಕೇಳಿಬರುತ್ತಿರುವುದು ರಾಜ್ಯ ರಾಜಕೀಯದಲ್ಲಿ ಸಂಭವನೀಯ ಬೆಳವಣಿಗೆ ಉಂಟಾಗಲಿದೆ ಎಂಬುದಕ್ಕೆ ಪುಷ್ಟಿ ನೀಡಿದೆ.

‘ಯಡಿಯೂರಪ್ಪ ಅವರ ‘ಸಮ್ಮತಿ’ಯ ಮೇರೆಗೇ ಕೇಂದ್ರ ಸಂಪುಟಕ್ಕೆ ರಾಘವೇಂದ್ರ  ಅವರ ಸೇರ್ಪಡೆಯಾಗಲಿದೆ. ಒಂದೊಮ್ಮೆ ಅವರಿಗೆ ಸಚಿವ ಸ್ಥಾನ ದೊರೆತಲ್ಲಿ, 3 ತಿಂಗಳೊಳಗೆ ರಾಜ್ಯದ ನಾಯಕತ್ವ ಬದಲಾವಣೆ ನಿಶ್ಚಿತ’ ಎಂಬ ಮಾತು ರಾಜ್ಯ ಬಿಜೆಪಿ ಅಂಗಳದಲ್ಲಿ ಕೇಳಿಬರುತ್ತಿದೆ.

‘ಕೇಂದ್ರ ಸಂಪುಟಕ್ಕೆ ರಾಘವೇಂದ್ರ ಸೇರ್ಪಡೆಯು ವರಿಷ್ಠರು ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರೊಂದಿಗೆ ನಡೆಸಿರುವ ಮಾತುಕತೆಯ ಪರಿಣಾಮ’ ಎಂದೂ ಹೇಳಲಾಗುತ್ತಿದೆ. ಸಹಜವಾಗಿಯೇ ಇದು ಯಡಿಯೂರಪ್ಪ ವಿರೋಧಿ ಬಣದ ಸಂತಸಕ್ಕೆ ಕಾರಣವಾಗಿದೆ.

‘ಅನೇಕ ಹಿರಿಯರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದರೂ ಎರಡನೇ ಬಾರಿ ಸಂಸದರಾಗಿರುವ ರಾಘವೇಂದ್ರ ಕೇಂದ್ರ ಸಚಿವರಾದಲ್ಲಿ ಅದು, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂಪ್ಪ ಅವರ ನಿರ್ಗಮನದ ಸ್ಪಷ್ಟ ಸೂಚನೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜ್ಯದ ಸಂಸದರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಿರಿತನ ಅಥವಾ ಪ್ರಬಲ ಸಮುದಾಯವನ್ನು ಪರಿಗಣಿಸಿ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಮಾತು ಮೋದಿ ಆಡಳಿತದಲ್ಲಿ ಹುಸಿಯಾಗಿದೆ. ಯಾರೂ ನಿರೀಕ್ಷೆಯನ್ನೇ ಮಾಡದವರಿಗೆ ಸಚಿವ ಸ್ಥಾನ ನೀಡಿದ ಉದಾಹರಣೆಗಳಿವೆ. ಈಗ ಯಾರು ಸಚಿವರಾಗುವರು ಎಂಬುದು ವರಿಷ್ಠರ ಲೆಕ್ಕಾಚಾರ ಅವಲಂಬಿಸಿದೆ ಎಂದು ಅವರು ಹೇಳಿದರು.

ಕಳೆದ 15 ದಿನಗಳಿಂದ ಸಂಪುಟ ಸಹೋದ್ಯೋಗಿಗಳ ಸಾಧನೆಯ ಮೌಲ್ಯ ಮಾಪನ ನಡೆಸುತ್ತಿರುವ ಮೋದಿ, ತಲಾ 10 ಜನ ಸಚಿವರೊಂದಿಗೆ ಎರಡೆರಡು ಬಾರಿ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಜುಲೈ 15ರ ಆಸುಪಾಸಿನಲ್ಲಿ ಸಂಪುಟ ಪುನರ್‌ರಚನೆ ಆಗಲಿದ್ದು, ಕೆಲವು ನಿಷ್ಕ್ರಿಯ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು