ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಒಬಿಸಿ ಮೀಸಲಾತಿಗೆ ‘ಸುಪ್ರೀಂ’ ಸಮ್ಮತಿ

ಅಕ್ಷರ ಗಾತ್ರ

ನವದೆಹಲಿ:ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ನೀಡಲು ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ತ್ರಿಸ್ತರ ಪರಿಶೀಲನೆಯ ನಂತರವಷ್ಟೇಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗೆ ಮೀಸ
ಲಾತಿ ನೀಡಬೇಕು ಎಂದು ಮೇ 10ರ ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಆದರೆ ಈಚೆಗಷ್ಟೇ ಪೂರ್ಣಗೊಂಡಿರುವ ಕ್ಷೇತ್ರ ಮರುವಿಂಗಡಣೆಯ ಅನ್ವಯ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಅನುವು ಮಾಡಿಕೊಡಿ ಎಂದು ಮಧ್ಯಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.ಒಬಿಸಿ ಆಯೋಗವು ಮೇ 12ರಂದು ಸಲ್ಲಿಸಿರುವ ಎರಡನೇ ವರದಿಯ ಅನ್ವಯ ಒಬಿಸಿ ಸಮುದಾಯಗಳಿಗೆ ಮೀಸಲಾತಿ ಅಧಿಸೂಚನೆ ಹೊರಡಿಸಲು ಅನುಮತಿ ನೀಡಿ ಎಂದು ಮಧ್ಯಪ್ರದೇಶ ಸರ್ಕಾರ ಕೋರಿತ್ತು.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್, ಎ.ಎಸ್.ಓಕಾ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠವು ಈ ಅರ್ಜಿಯನ್ನು ಮಾನ್ಯ ಮಾಡಿದೆ. ಮೇ 10ರಂದು ನೀಡಲಾಗಿದ್ದ ಆದೇಶವನ್ನು ಮಧ್ಯಪ್ರದೇಶಕ್ಕೆ ಅನ್ವಯವಾಗುವಂತೆ ಮಾರ್ಪಡಿಸಿದೆ.

‘ಮೇ 10ರ ನಮ್ಮ ಆದೇಶದ ನಂತರ, ಆಯೋಗವು ಮೇ 12 ರಂದು ತನ್ನ ಎರಡನೇ ವರದಿಯನ್ನು ಸಲ್ಲಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿಗೆ ಎಷ್ಟು ಮೀಸಲಾತಿ ನೀಡಬೇಕು ಎಂಬುದರ ವಿವರವನ್ನೂ ಆಯೋಗ ತನ್ನ ಎರಡನೇ ವರದಿಯಲ್ಲಿ ನೀಡಿದೆ’ ಎಂದು ಪೀಠವು ಹೇಳಿದೆ.

‘ಒಬಿಸಿ ಆಯೋಗವು ಸಲ್ಲಿಸಿರುವ ವರದಿಯಲ್ಲಿ ಸೂಚಿಸಿರುವ, ಒಬಿಸಿ ಮೀಸಲಾತಿಗೆ ಅನುಗುಣವಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೀಸಲಾತಿ ಅಧಿಸೂಚನೆಯನ್ನು ಹೊರಡಿಸಿ. ಒಂದು ವಾರದ ಒಳಗೆ ಈ ಕೆಲಸ ಆಗಬೇಕು. ಆನಂತರದ ಒಂದು ವಾರದಲ್ಲಿ ರಾಜ್ಯ ಚುನಾವಣಾ ಆಯೋಗವು ಚುನಾವಣಾ ಅಧಿಸೂಚನೆಯನ್ನು ಹೊರಡಿಸಬೇಕು’ ಎಂದು ಪೀಠವು ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT