ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವ್ಯಾಕ್ಸಿನ್‌: ತೀವ್ರಸ್ವರೂಪದ ಕೋವಿಡ್‌ ವಿರುದ್ಧ ಶೇ 78ರಷ್ಟು ಪರಿಣಾಮಕಾರಿ

ಭಾರತ್‌ ಬಯೋಟೆಕ್‌ ಹೇಳಿಕೆ
Last Updated 21 ಏಪ್ರಿಲ್ 2021, 14:47 IST
ಅಕ್ಷರ ಗಾತ್ರ

ನವದೆಹಲಿ: ಸೌಮ್ಯ ಪ್ರಮಾಣದಿಂದ ಹಿಡಿದು ತೀವ್ರ ತೆರನಾದ ಕೋವಿಡ್‌–19 ವಿರುದ್ಧ ಕೋವ್ಯಾಕ್ಸಿನ್ ಶೇ 78ರಷ್ಟು ಪರಿಣಾಮಕಾರಿಯಾಗಿದೆ ಎಂದು ಲಸಿಕೆ ಉತ್ಪಾದಿಸುವ ಕಂಪನಿ ಭಾರತ್‌ ಬಯೋಟೆಕ್‌ ಬುಧವಾರ ಹೇಳಿದೆ.

ಕೋವ್ಯಾಕ್ಸಿನ್‌ ಪಡೆದ ವ್ಯಕ್ತಿಯಲ್ಲಿ ರೋಗನಿರೋಧ ಶಕ್ತಿ ಹೆಚ್ಚಿದೆ. ಹೀಗಾಗಿ, ಲಸಿಕೆ ಪಡೆದ ವ್ಯಕ್ತಿ ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾದ ಸಾಧ್ಯತೆ ಶೇ 100ರಷ್ಟು ಕಡಿಮೆಯಾಗಿರುವುದು ಮೂರನೇ ಹಂತದ ಟ್ರಯಲ್‌ನ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಕಂಪನಿ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌಮ್ಯ, ಮಧ್ಯಮ ಸ್ವರೂಪದ ಹಾಗೂ ತೀವ್ರವಾದ ಲಕ್ಷಣಗಳನ್ನು ಹೊಂದಿದ್ದ 127 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಕೋವ್ಯಾಕ್ಸಿನ್‌ ನೀಡಲಾಗಿದ್ದ ಅವರಲ್ಲಿ ಲಸಿಕೆಯು ಶೇ 78ರಷ್ಟು ಪರಿಣಾಮಕಾರಿಯಾಗಿದ್ದು ಕಂಡು ಬಂದಿತು ಎಂದು ಕಂಪನಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು, ಲಕ್ಷಣ ರಹಿತ ಕೋವಿಡ್‌–19 ಪ್ರಕರಣಗಳಲ್ಲಿ ಲಸಿಕೆ ಶೇ 70ರಷ್ಟು ಪರಿಣಾಮಕಾರಿಯಾಗಿರುವುದು ದೃಢಪಟ್ಟಿದೆ ಎಂದೂ ಕಂಪನಿ ತಿಳಿಸಿದೆ.

‘ಸಾರ್ಸ್‌–ಕೋವ್‌–2’ ವಿರುದ್ಧ ಕೋವ್ಯಾಕ್ಸಿನ್‌ ಪರಿಣಾಮಕಾರಿ ಹಾಗೂ ಅತ್ಯಂತ ಸುರಕ್ಷಿತ ಎಂಬುದು ಕ್ಲಿನಿಕಲ್‌ ಟ್ರಯಲ್‌ ಹಾಗೂ ತುರ್ತು ಸಂದರ್ಭದಲ್ಲಿನ ಬಳಕೆಯಿಂದ ಸಾಬೀತಾಗಿದೆ‘ ಎಂದು ಕಂಪನಿಯ ಚೇರಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ತಿಳಿಸಿದ್ದಾರೆ.

‘ಭಾರತದಲ್ಲಿಯೇ ಸಂಶೋಧನೆ ನಡೆಸಿ, ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಈ ಜಾಗತಿಕ ಮನ್ನಣೆ ಪಡೆದ ನವೀನ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT