ಆಳ–ಅಗಲ: ‘ಕೈ’ ಬಲಪಡಿಸಿದ ಜೋಡೊ ಯಾತ್ರೆ

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿದ ‘ಭಾರತ್ ಜೋಡೊ ಯಾತ್ರೆ’ಗೆ ಕಾಶ್ಮೀರದ ಶ್ರೀನಗರದಲ್ಲಿ ಸೋಮವಾರ ತೆರೆ ಬಿದ್ದಿದೆ. ಆದರೆ, ಯಾತ್ರೆಯು ದೊಡ್ಡ ಮಟ್ಟದ ಪರಿಣಾಮವನ್ನೇ ಬೀರಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಮುನ್ನೆಲೆಗೆ ತಂದಿದೆ; ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಲೋಕಸಭೆಗೆ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಸಾಧ್ಯತೆಗಳು ಹಿಗ್ಗಬಹುದು ಎಂಬ ನಿರೀಕ್ಷೆಯನ್ನು ಪಕ್ಷದ ಕಾರ್ಯಕರ್ತರಲ್ಲಿ ಮೂಡಿಸಿದೆ. ಹಲವು ವಿವಾದಗಳಿಗೂ ಸಾಕ್ಷಿಯಾಗಿದೆ. 2024ರ ಚುನಾವಣೆಯನ್ನು ಹೇಗೆ ಎದುರಿಸಬೇಕು? –ಕಾಂಗ್ರೆಸ್ ಪಕ್ಷದ ಮುಂದೆ ನಿಂತಿದ್ದ ಈ ಬಹುದೊಡ್ಡ ಪ್ರಶ್ನೆಗೆ ಸ್ವಲ್ಪ ಮಟ್ಟಿನ ಉತ್ತರವನ್ನು ಈ ಯಾತ್ರೆಯು ಕೊಟ್ಟಿದೆ. ಆದರೆ ಪಕ್ಷದ ನಿರೀಕ್ಷೆಯಂತೆ ಯಾತ್ರೆಯು ಚುನಾವಣೆಯಲ್ಲಿ ನೆರವಾಗಬಹುದೇ ಎಂಬುದಕ್ಕೆ ಈಗ ಉತ್ತರವೇನೂ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಹತ್ತಿರದಿಂದ ಗಮನಿಸುತ್ತಿರುವವರು ಹೇಳುತ್ತಿದ್ದಾರೆ.
ಚುನಾವಣೆಯಲ್ಲಿ ನೆರವಾಗಲಿ ಆಗದೇ ಇರಲಿ, ಯಾತ್ರೆಯು ಇತಿಹಾಸ ನಿರ್ಮಿಸಿದೆ ಎಂಬುದು ನಿಜ. ಸ್ವಾತಂತ್ರ್ಯಾನಂತರ, ರಾಜಕೀಯ ನಾಯಕನೊಬ್ಬ ನಡೆಸಿದ ಅತಿ ದೊಡ್ಡ ಯಾತ್ರೆ ಎಂದು ಇದು ದಾಖಲಾಗಿದೆ. ರಾಹುಲ್ ಗಾಂಧಿ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಮತ್ತು ಅವರೊಬ್ಬ ಅರೆಕಾಲಿಕ ರಾಜಕಾರಣಿ ಎಂಬ ಆರೋಪವನ್ನು ರಾಜಕೀಯ ಪ್ರತಿಸ್ಪರ್ಧಿಗಳು ಪದೇ ಪದೇ ಮಾಡಿದ್ದರು. ಆದರೆ ಯಾತ್ರೆಯು ರಾಹುಲ್ ಅವರ ವರ್ಚಸ್ಸನ್ನು ಬದಲಾಯಿಸಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.
ರಾಹುಲ್ ಅವರ ವರ್ಚಸ್ಸು ಬದಲಾವಣೆಯು ಯಾತ್ರೆಯ ಉದ್ದೇಶವಾಗಿರಲಿಲ್ಲ. ಆದರೆ, ಯಾತ್ರೆ ಫಲವಾಗಿ ಅವರ ವರ್ಚಸ್ಸು ಬದಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಜೈರಾಮ್ ಅವರು ಯಾತ್ರೆಯ ರೂವಾರಿಗಳು. ಆರ್ಥಿಕ ಅಸಮಾನತೆಗಳು, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ನಿರಂಕುಶಾಧಿಕಾರದಿಂದ ದೇಶದ ಮೇಲೆ ಯಾವ ಪರಿಣಾಮಗಳು ಆಗಬಹುದು ಎಂಬ ಸಂದೇಶವನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ಯಾತ್ರೆಯು ಯಶಸ್ವಿಯಾಗಿದೆ ಎಂದು ಜೈರಾಮ್ ಹೇಳಿದ್ದಾರೆ.
ತಮ್ಮ ಬೆಂಬಲಿಗರು ಮಾತ್ರವಲ್ಲದೆ ಟೀಕಾಕಾರರು ಹಾಗೂ ಪ್ರತಿಸ್ಪರ್ಧಿಗಳ ಗಮನವನ್ನೂ ಸುಮಾರು 4,000 ಕಿ.ಮೀ. ಉದ್ದದ ಯಾತ್ರೆಯಲ್ಲಿ ರಾಹುಲ್ ಸೆಳೆದಿದ್ದಾರೆ. ಕಮಲ್‌ಹಾಸನ್, ರಘುರಾಮ್ ರಾಜನ್ ಅವರಂತಹ ಗಣ್ಯರು ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳ ಹಲವು ಮುಖಂಡರು ಯಾತ್ರೆಯ ಜೊತೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಲವು ಬಾರಿ ಯಾತ್ರೆಯನ್ನು ಕೂಡಿಕೊಂಡಿದ್ದಾರೆ. ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಡ್ಯದಲ್ಲಿ ಒಮ್ಮೆ ಮತ್ತು ದೆಹಲಿಯಲ್ಲಿ ಒಮ್ಮೆ ಯಾತ್ರೆಯ ಭಾಗವಾಗಿದ್ದಾರೆ. ಯಾತ್ರೆಯು ರಾಜ್ಯಗಳಿಗೆ ಪ್ರವೇಶಿಸಿದಾಗ ರಾಜ್ಯಗಳ ಹಿರಿಯ ಮುಖಂಡರು ರಾಹುಲ್ ಅವರ ಜೊತೆ ಹೆಜ್ಜೆ ಹಾಕಿದ್ದಾರೆ.
ಹಲವು ಮೈಲುಗಲ್ಲುಗಳಿಗೂ ಯಾತ್ರೆಯು ಸಾಕ್ಷಿಯಾಗಿದೆ. ಹೈದರಾಬಾದ್‌ನ ಚಾರ್‌ಮಿನಾರ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ಅದರಲ್ಲಿ ಒಂದು. ರಾಹುಲ್ ಅವರ ತಂದೆ, ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧಿ ಅವರು 32 ವರ್ಷಗಳ ಹಿಂದೆ ಇದೇ ಸ್ಥಳದಿಂದ ‘ಸದ್ಭಾವನಾ ಯಾತ್ರೆ’ ಆರಂಭಿಸಿದ್ದರು.
ಯಾತ್ರೆಯ ಮಧ್ಯದಲ್ಲಿ ಆಗಾಗ ಒಂದು–ಎರಡು ದಿನಗಳ ವಿರಾಮ ನೀಡಲಾಗಿತ್ತು. ಕ್ರಿಸ್‌ಮಸ್–ಹೊಸ ವರ್ಷದ ಸಂದರ್ಭದಲ್ಲಿ ಒಂಬತ್ತು ದಿನ ವಿರಾಮ ನೀಡಲಾಗಿತ್ತು. ಜನವರಿ 3ರಂದು ಪುನರಾರಂಭಗೊಂಡಿತು. ನಂತರ ಯಾತ್ರೆಯು ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಿಗೆ ಹೋಯಿತು. ಉತ್ತರ ಭಾರತದಲ್ಲಿ ಯಾತ್ರೆಗೆ ಜನ ಸೇರುವುದು ಕಷ್ಟ ಎಂದು ವಿಶ್ಲೇಷಕರು ಭಾವಿಸಿದ್ದರು. ಆದರೆ, ಉತ್ತರ ಭಾರತದ ಎಲ್ಲ ರಾಜ್ಯಗಳಲ್ಲಿಯೂ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಕಾಶ್ಮೀರ ಕಣಿವೆ ಪ್ರವೇಶಿಸಿದ ಬಳಿಕ, ಶುಕ್ರವಾರ ನಡಿಗೆಯನ್ನು ರದ್ದುಪಡಿಸಬೇಕಾದ ಪರಿಸ್ಥಿತಿಯೂ ತಲೆದೋರಿತು. ಯಾತ್ರೆಯ ಹಾದಿಯಲ್ಲಿ ದೊಡ್ಡ ಗುಂಪೊಂದು ಎದುರಾಯಿತು. ಅಗತ್ಯ ಭದ್ರತೆ ಇರಲಿಲ್ಲ. ಭದ್ರತಾ ಲೋಪವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತು. ಆದರೆ, ಪೊಲೀಸರು ನಿರಾಕರಿಸಿದ್ದಾರೆ.
ಲಾಲ್ ಚೌಕದ ಐತಿಹಾಸಿಕ ಗಡಿಯಾರ ಗೋಪುರದಲ್ಲಿ ರಾಹುಲ್ ಅವರು ಭಾನುವಾರ ತ್ರಿವರ್ಣ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಅತ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ಧ್ವಜಾರೋಹಣ ಮಾಡುವುದರೊಂದಿಗೆ ಯಾತ್ರೆಯು ಕೊನೆಗೊಂಡಿತು.
ದಕ್ಷಿಣದಿಂದ ಉತ್ತರದತ್ತ...
ದೇಶದ ದಕ್ಷಿಣ ತುದಿಯಿಂದ ಉತ್ತರದತ್ತ ಸಾಗಿದ ಭಾರತ್ ಜೋಡೊ ಯಾತ್ರೆಗೆ ಕಾಂಗ್ರೆಸ್ಸೇತರ ಪಕ್ಷಗಳ ನಾಯಕರು, ನೂರಾರು ಸಾಮಾಜಿಕ ಕಾರ್ಯಕರ್ತರು ಮತ್ತು ಗಣ್ಯರು ಜತೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಲ್ಲಿ ಈ ಎಲ್ಲರೂ ರಾಹುಲ್ ಗಾಂಧಿ ಜತೆಗೆ ಹೆಜ್ಜೆ ಹಾಕಿದರು. ಭಿನ್ನ ಸಿದ್ಧಾಂತದ ಪಕ್ಷಗಳು, ಭಿನ್ನ ಕ್ಷೇತ್ರದ ಹೋರಾಟಗಾರರು ಮತ್ತು ಬೇರೆ–ಬೇರೆ ಕ್ಷೇತ್ರಗಳ ಗಣ್ಯರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದರು
* ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆಗೆ ಚಾಲನೆ ನೀಡಿದ್ದು ಡಿಎಂಕೆ ಮುಖ್ಯಸ್ಥ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್. ರಾಜ್ಯದ ಆಡಳಿತ ಮೈತ್ರಿಕೂಟದ ಮಿತ್ರಪಕ್ಷಗಳಾದ ಎಂಡಿಎಂಕೆ, ಐಯುಎಂಎಲ್ ಕಾಂಗ್ರೆಸ್‌ಗೆ ಜತೆಯಾಗಿದ್ದವು. ಎಡಪಕ್ಷಗಳಾದ ಸಿಪಿಎಂ ಮತ್ತು ಸಿಪಿಐ ಸಹ ಯಾತ್ರೆಗೆ ಬೆಂಬಲ ಸೂಚಿಸಿದ್ದವು
* ಕೇರಳದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಸಿನಿಮಾ ತಾರೆಯರು ಯಾತ್ರೆಯಲ್ಲಿ ಭಾಗಿಯಾಗಿದ್ದರು. ಆಡಳಿತಾರೂಢ ಎಲ್‌ಡಿಎಫ್‌ನ ಎಡಪಕ್ಷಗಳು, ‘ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಒಟ್ಟಿಗಿದ್ದೇವೆ, ಆದರೆ ರಾಜ್ಯದಲ್ಲಲ್ಲ’ ಎಂದು ಸ್ಪಷ್ಟಪಡಿಸಿದವು
* ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು, ನಟ–ಪರಿಸರವಾದಿ ಸುರೇಶ್ ಹೆಬ್ಳೀಕರ್, ಗೌರಿ ಲಂಕೇಶ್ ಅವರ ಸೋದರಿ ಕವಿತಾ ಲಂಕೇಶ್ ಮತ್ತು ತಾಯಿ ಇಂದಿರಾ ಲಂಕೇಶ್ ಭಾಗಿಯಾಗಿದ್ದರು
* ಯಾತ್ರೆಯು ಆಂಧ್ರಪ್ರದೇಶವನ್ನು ಹಾದುಹೋಗುವ ಕಾರ್ಯಕ್ರಮ ಮೂಲ ಯೋಜನೆಯಲ್ಲಿ ಇರಲಿಲ್ಲ. ಆದರೆ, ಕರ್ನಾಟಕದ ಬಳ್ಳಾರಿ ಮತ್ತು ರಾಯಚೂರನ್ನು ಹಾದುಹೋಗುವ ವೇಳೆ ಯಾತ್ರೆಯು ಆಂಧ್ರಪ್ರದೇಶಕ್ಕೆ ಎರಡು ಬಾರಿ ಭೇಟಿ ನೀಡಿತ್ತು. ಎರಡೂ ರಾಜ್ಯಗಳ ಗಡಿಯನ್ನು ಹಾದುಹೋಗುವ ವೇಳೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು
* ಆರಂಭದಲ್ಲಿ ತೆಲಂಗಾಣದ ವಿಕಾರಾಬಾದ್‌ಗೆ ಭೇಟಿ ನೀಡುವುದಷ್ಟೇ ಯಾತ್ರೆಯ ಯೋಜನೆಯಾಗಿತ್ತು. ಆದರೆ, ಯಾತ್ರೆಯನ್ನು ಹೈದರಾಬಾದ್‌ವರೆಗೂ ವಿಸ್ತರಿಸಲಾಯಿತು. ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಅವರ ತಾಯಿ ಮತ್ತು ಸೋದರ, ನಟಿ ಪೂಜಾ ಭಟ್ ಯಾತ್ರೆಯಲ್ಲಿ ರಾಹುಲ್ ಒಟ್ಟಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು
* ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಆಘಾಡಿಯ ಉದ್ಧವ್ ಠಾಕ್ರೆ ಬಣದ ಶಿವಸೇನಾ ಮತ್ತು ಎನ್‌ಸಿಪಿ ಯಾತ್ರೆಗೆ ಜತೆಯಾದವು. ಉದ್ಧವ್ ಠಾಕ್ರೆಯ ಮಗ ಆದಿತ್ಯ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ ರಾಹುಲ್ ಒಟ್ಟಿಗೆ ಹೆಜ್ಜೆಹಾಕಿದರು. ಮಹಾತ್ಮಾ ಗಾಂಧಿ ಅವರ ಮರಿಮೊಮ್ಮಗ ತುಶಾರ್ ಗಾಂಧಿ, ಹಿರಿಯ ನಟ ಅಮೋಲ್ ಪಾಲೇಕರ್, ನಟಿ ರಿಯಾ ಸೆನ್ ಮೊದಲಾದವರು ಯಾತ್ರೆಯಲ್ಲಿ ಭಾಗಿಯಾಗಿದ್ದರು
* ಮಧ್ಯಪ್ರದೇಶದಲ್ಲಿ ನಟಿ ಸ್ವರ ಭಾಸ್ಕರ್ ರಾಹುಲ್ ಜತೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು
* ಆರ್‌ಬಿಐನ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಜತೆಗೆ ಹೆಜ್ಜೆಹಾಕಿದ್ದರು. ರಾಹುಲ್ ಜತೆಗೆ ರಾಜನ್ ಅವರು ನಡೆಸಿದ್ದ ಸಂವಾದವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹಂಚಿಕೆಯಾಗಿತ್ತು
* ಬಿಹಾರದ ಆಡಳಿತಾರೂಢ ಮೈತ್ರಿಕೂಟದ ಜೆಡಿಯು ಮತ್ತು ಆರ್‌ಜೆಡಿ ಭಾರತ್ ಜೋಡೊ ಯಾತ್ರೆಗೆ ಬೆಂಬಲ ಸೂಚಿಸಿದ್ದವು. ಯಾತ್ರೆಯು ಉತ್ತರ ಪ್ರದೇಶ ಹಾದುಹೋಗುವಾಗ, ಯಾತ್ರೆಯಲ್ಲಿ ಭಾಗಿಯಾಗುವಂತೆ ಎಸ್‌ಪಿ ಮತ್ತು ಬಿಎಸ್‌ಪಿಗೆ ಆಹ್ವಾನ ನೀಡಲಾಗಿತ್ತು. ಎರಡೂ ಪಕ್ಷಗಳು ಆಹ್ವಾನವನ್ನು ತಿರಸ್ಕರಿಸಿದ್ದವು
* ಯಾತ್ರೆಯು ದೆಹಲಿಯಲ್ಲಿ ಇದ್ದಾಗ, ತಮಿಳು ನಟ ಮತ್ತು ಎಂಎನ್‌ಎಂ ಮುಖ್ಯಸ್ಥ ಕಮಲ್ ಹಾಸನ್ ಅವರು ರಾಹುಲ್‌ಗೆ ಜತೆಯಾದರು. ರಾಹುಲ್ ಮತ್ತು ಕಮಲ್ ಹಾಸನ್ ಅವರ ನಡುವಣ ಸಂವಾದವು ಹೆಚ್ಚು ಹಂಚಿಕೆಯಾಗಿತ್ತು
* ಹರಿಯಾಣದಲ್ಲೂ ಹಲವು ಗಣ್ಯರು ಯಾತ್ರೆಗೆ ಬೆಂಬಲ ಸೂಚಿಸಿ ರಾಹುಲ್ ಒಟ್ಟಿಗೆ ಹೆಜ್ಜೆ ಹಾಕಿದ್ದರು
* ಬಿಗ್ ಬಾಸ್ –7 ಖ್ಯಾತಿಯ ಕಾಮ್ಯಾ ಪಂಜಾಬಿ ಸೇರಿ, ಪಂಜಾಬ್‌ನಲ್ಲಿ ಹಲವು ಕಲಾವಿದರು ಯಾತ್ರೆಯಲ್ಲಿ ಭಾಗಿಯಾಗಿದ್ದರು. ಮೂಲ ಯೋಜನೆಯಲ್ಲಿ ಇಲ್ಲದೇ ಇದ್ದರೂ, ಹಿಮಾಚಲ ಪ್ರದೇಶದಲ್ಲಿ ಒಂದು ದಿನದ ಯಾತ್ರೆ ನಡೆಯಿತು
* ಜಮ್ಮು–ಕಾಶ್ಮೀರದಲ್ಲಿ ಯಾತ್ರೆ ಸಾಗುವ ವೇಳೆ ನಮ್ಮನ್ನು ಭೇಟಿ ಮಾಡಿ ಎಂದು ಕಾಶ್ಮೀರಿ ಪಂಡಿತರು ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದರು. ಸಂವಾದವನ್ನೂ ನಡೆಸಿದರು. ಎನ್‌ಸಿಯ ಒಮರ್ ಅಬ್ದುಲ್ಲಾ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಎನ್‌ಸಿ ಮತ್ತು ಪಿಡಿಪಿ ಯಾತ್ರೆಗೆ ಬೆಂಬಲ ಸೂಚಿಸಿದ್ದವು. ತಮಿಳು ಸಾಹಿತಿ ಪೆರುಮಾಳ್ ಮುರುಗನ್ ಕಾಶ್ಮೀರದಲ್ಲಿ ರಾಹುಲ್ ಒಟ್ಟಿಗೆ ಹೆಜ್ಜೆಹಾಕಿದ್ದರು
ನಡಿಗೆಯ ಹಾದಿ
l ಭಾರತ್ ಜೊಡೊ ಯಾತ್ರೆ ಆರಂಭಕ್ಕೆ ಮುನ್ನವೇ ಬಿಜೆಪಿ–ಕಾಂಗ್ರೆಸ್ ನಡುವೆ ಸಂಘರ್ಷ ಸೃಷ್ಟಿಯಾಗಿತ್ತು. ಯಾತ್ರೆ ಕುರಿತು ರಚಿಸಿದ್ದ ಪೋಸ್ಟರ್‌ನಲ್ಲಿ ಖಾಕಿ ಚಡ್ಡಿಗೆ ಬೆಂಕಿ ಹಚ್ಚಲಾದ ಚಿತ್ರವನ್ನು ಪ್ರಕಟಿಸಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿತ್ತು
l ಯಾತ್ರೆ ಆರಂಭಿಸುವ ವೇಳೆ, ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ರಾಹುಲ್ ಗೌರವ ಸಲ್ಲಿಸಲಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದರು. ಇದು ಸುಳ್ಳು ಆರೋಪ ಎಂದು ಸಾಬೀತುಪಡಿಸಿದ ಕಾಂಗ್ರೆಸ್, ರಾಹುಲ್ ಅವರು ಸ್ಮಾರಕಕ್ಕೆ ಭೇಟಿ ನೀಡಿದ್ದ ವಿಡಿಯೊವನ್ನು ಪ್ರಕಟಿಸಿತು
l ರಾಹುಲ್ ಅವರು ಬರ್‌ಬೆರ್ರಿ ಕಂಪನಿಯ ₹41,000 ಬೆಲೆಯ ದುಬಾರಿ ಟಿ–ಶರ್ಟ್ ಧರಿಸಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿತ್ತು. ಪ್ರಧಾನಿ ಮೋದಿ ಅವರು ₹10 ಲಕ್ಷ ಬೆಲೆಯ ಸೂಟ್ ಹಾಗೂ ₹1.5 ಲಕ್ಷ ಬೆಲೆಯ ಕನ್ನಡಕ ಧರಿಸುತ್ತಾರೆ ಎಂದು ಕಾಂಗ್ರೆಸ್ ಆರೋಪಿಸಿತು
l ಭಾರತ್ ಜೋಡೊ ಯಾತ್ರೆ ಅಂಗವಾಗಿ, ಕರ್ನಾಟಕದ ಬದನವಾಳು ಗ್ರಾಮದಲ್ಲಿ ಎರಡು ಕೇರಿಗಳನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಗ್ರೆಸ್ ನಿರ್ಮಿಸಿತು. ರಾಹುಲ್ ಅವರು ರಸ್ತೆ ಉದ್ಘಾಟಿಸಿ ಜನರ ಬಳಕೆಗೆ ಮುಕ್ತವಾಗಿಸಿದರು
l ಮೈಸೂರಿನಲ್ಲಿ ಸುರಿಯುವ ಮಳೆಯಲ್ಲಿ ತೊಯ್ದುಕೊಂಡು ರಾಹುಲ್ ಭಾಷಣ ಮಾಡಿದ್ದರು
l ರಾಹುಲ್ ‘ಗಡ್ಡ’ವೂ ಚರ್ಚೆಯ ವಸ್ತುವಾಗಿತ್ತು. ರಾಹುಲ್ ಅವರು ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಚಹರೆಯನ್ನು ಹೋಲುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದರು. ಯಾತ್ರೆಯ ಕೊನೆಯವರೆಗೆ ಗಡ್ಡ ಕತ್ತರಿಸುವುದಿಲ್ಲ ಎಂದು ರಾಹುಲ್ ಮೊದಲೇ ಹೇಳಿದ್ದರು
l ಸಾವರ್ಕರ್ ಅವರು ಕ್ಷಮಾಪಣೆ ಪತ್ರ ಬರೆದಿದ್ದರು ಎಂಬ ರಾಹುಲ್ ಆರೋಪವು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್–ಶಿವಸೇನಾ ನಡುವೆ ಜಗಳ ಹಚ್ಚಿತ್ತು
l ಕೋವಿಡ್ ನಿಯಮಾವಳಿ ಪಾಲಿಸದಿದ್ದರೆ ಯಾತ್ರೆ ನಿಲ್ಲಿಸಿ ಎಂದು ಕೇಂದ್ರ ಆರೋಗ್ಯ ಸಚಿವರು ಸೂಚಿಸಿದ್ದಕ್ಕೆ ತಿರುಗೇಟು ಕೊಟ್ಟಿದ್ದ ರಾಹುಲ್, ಯಾತ್ರೆ ನಿಲ್ಲಿಸುವ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದರು
l ದೆಹಲಿಯಲ್ಲಿ ವಾಜಪೇಯಿ ಮೊದಲಾದವರ ಸ್ಮಾರಕಕ್ಕೆ ಭೇಟಿ ನೀಡಿದ್ದ ರಾಹುಲ್, ತಮ್ಮ ಪಕ್ಷದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಸ್ಮಾರಕಕ್ಕೆ ಏಕೆ ಭೇಟಿ ನೀಡಲಿಲ್ಲ ಎಂದು ಬಿಜೆಪಿ ಹುಯಿಲೆಬ್ಬಿಸಿತ್ತು. ನರಸಿಂಹರಾವ್ ಸ್ಮಾರಕ ಹೈದರಾಬಾದ್‌ನಲ್ಲಿದೆ
l ಮಹಾರಾಷ್ಟ್ರದಲ್ಲಿ ಯಾತ್ರೆಯ ಅಂಗವಾಗಿ ನಡೆದ ಸಮಾವೇಶದ ಆರಂಭದಲ್ಲಿ, ಮೈಕ್‌ನಲ್ಲಿ ರಾಷ್ಟ್ರಗೀತೆಯ ಬದಲು ನೇಪಾಳದ ರಾಷ್ಟ್ರಗೀತೆ ಪ್ರಸಾರವಾಗಿ ಕಾಂಗ್ರೆಸ್‌ಗೆ ಮುಜುಗರ ಉಂಟಾಗಿತ್ತು
l ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಸಂಸದ ಸಂತೋಖ್ ಸಿಂಗ್ ಚೌಧರಿ ಹೃದಯಸ್ತಂಭನದಿಂದ ಮೃತಪಟ್ಟರು. ಸೇವಾದಳ ಕಾರ್ಯಕರ್ತರೊಬ್ಬರು ಮಹಾರಾಷ್ಟ್ರದಲ್ಲಿ ನಿಧನರಾದರು
ಸುಳ್ಳು ಸುದ್ದಿ ಮತ್ತು ಫ್ಯಾಕ್ಟ್ ಚೆಕ್
l ಹರಿಯಾಣದಲ್ಲಿ ಯಾತ್ರೆಯ ವೇಳೆ ರಾಹುಲ್ ಅವರು ಹೋಟೆಲ್‌ನಲ್ಲಿ ಮದ್ಯ ಸೇವಿಸಿದ್ದರು ಎನ್ನಲಾದ ಚಿತ್ರವೂ ಸದ್ದು ಮಾಡಿತ್ತು. ಈ ಚಿತ್ರವನ್ನು ತಿರುಚಲಾಗಿತ್ತು. ಮೂಲ ಚಿತ್ರದಲ್ಲಿ ಇದ್ದ ಚಹಾ ಕಪ್ ತೆಗೆದು, ಆ ಜಾಗದಲ್ಲಿ ಮದ್ಯದ ಗ್ಲಾಸ್ ಸೇರಿಸಲಾಗಿತ್ತು
l ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ನಿರ್ದೇಶಕರ ಜತೆ ರಾಹುಲ್ ಕಾಣಿಸಿಕೊಂಡಿದ್ದರು ಎಂಬುದನ್ನು ಬಿಂಬಿಸುವ ಚಿತ್ರ ವಿವಾದ ಸೃಷ್ಟಿಸಿತ್ತು. ಬ್ರಿಟನ್‌ನ ಲೇಬರ್ ಪಕ್ಷದ ಮಾಜಿ ನಾಯಕನನ್ನು ಭೇಟಿಯಾಗಿದ್ದ ಚಿತ್ರವನ್ನು ತಪ್ಪಾಗಿ ಬಿಂಬಿಸಲಾಗಿತ್ತು
l ಯಾತ್ರೆಯ ವೇಳೆ ರಾಹುಲ್ ಅವರು ಯುವತಿಯೊಬ್ಬಳ ಕೈಹಿಡಿದು ಕುಳಿತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಅರ್ಥ ಕಲ್ಪಿಸುವ ರೀತಿಯಲ್ಲಿ ಹರಿದಾಡಿತ್ತು. ಚಿತ್ರದಲ್ಲಿ ಇದ್ದಿದ್ದು ತಂಗಿ ಪ್ರಿಯಾಂಕಾ ಅವರ ಮಗಳು ಮಿರಾಯಾ ವಾದ್ರಾ
l ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ಜೊತೆ ರಾಹುಲ್ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾದ ಚಿತ್ರ ಹರಿದಾಡಿತ್ತು. ಆದರೆ ಇದು ಸುಳ್ಳು. ಚಿತ್ರದಲ್ಲಿ ರಾಹುಲ್ ಜೊತೆ ಇದ್ದಿದ್ದು ಕೇರಳ ವಿದ್ಯಾರ್ಥಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಿವಾ ಜೊಲ್ಲಿ
ಕೊರೆಯುವ ಚಳಿಯಲ್ಲೂ ಟಿ–ಶರ್ಟ್...
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ನಡಿಗೆಯಲ್ಲಿ ರಾಹುಲ್ ಅವರು ಸದಾ ಟಿ–ಶರ್ಟ್ ಧರಿಸಿಯೇ ಇದ್ದರು. ಇದು ಗಮನ ಸೆಳೆದ ಅಂಶ. ಉತ್ತರ ಭಾರತದ ಕೊರೆಯುವ ಚಳಿಯಲ್ಲಿ, ದೆಹಲಿಯಲ್ಲಿ ಮಹಾತ್ಮ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕಗಳಿಗೆ ಭೇಟಿ ನೀಡುವಾಗಲೂ ಅವರು ಟಿ–ಶರ್ಟ್ ಧರಿಸಿಯೇ ಇದ್ದರು.
ಹೀಗೆ ಇದ್ದದ್ದಕ್ಕೆ ರಾಹುಲ್ ಕೊಟ್ಟ ಕಾರಣ ಹೀಗಿದೆ: ‘ಮಧ್ಯ ಪ್ರದೇಶದಲ್ಲಿ ಮೂವರು ಹೆಣ್ಣು ಮಕ್ಕಳು ಚಳಿಗೆ ನಡುಗುತ್ತಿರುವುದನ್ನು ಕಂಡಿದ್ದೆ. ಹಾಗಾಗಿಯೇ ಯಾತ್ರೆಯ ಉದ್ದಕ್ಕೂ ಟಿ–ಶರ್ಟ್‌ನಲ್ಲಿಯೇ ಇರಲು ನಿರ್ಧರಿಸಿದೆ’ ಎಂದು ರಾಹುಲ್ ಹೇಳಿದ್ದರು. ಶ್ರೀನಗರದಲ್ಲಿ ಮಾತ್ರ ಅವರು ಸುರಿಯುತ್ತಿದ್ದ ಮಂಜಿನಿಂದ ರಕ್ಷಣೆ ಪಡೆಯಲು ಕಾಶ್ಮೀರಿ ಫೆರನ್ (ನಿಲುವಂಗಿ) ಧರಿಸಿದ್ದರು.
ಆಧಾರ: ಪಿಟಿಐ, ಕಾಂಗ್ರೆಸ್ ಟ್ವೀಟ್‌ಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.