ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆ: ಚುನಾವಣೆಯಿರುವ ಗುಜರಾತ್‌ ಮೂಲಕ ಹಾದು ಹೋಗುತ್ತಿಲ್ಲವೇಕೆ?

Last Updated 24 ಆಗಸ್ಟ್ 2022, 5:15 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಪಕ್ಷವು ಹಮ್ಮಿಕೊಂಡಿರುವ ಬೃಹತ್‌ ಪಾದಯಾತ್ರೆ 'ಭಾರತ್‌ ಜೋಡೊ ಯಾತ್ರೆ'ಯ ಮಾರ್ಗಸೂಚಿ ಬಿಡುಗಡೆಯಾದ ಬೆನ್ನಲ್ಲೇ ಗುಜರಾತ್‌ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಏಕೆ ಹಾದುಹೋಗುತ್ತಿಲ್ಲ ಎಂದು ಮಾಧ್ಯಮಗಳು ಪ್ರಶ್ನಿಸಿವೆ. ಉಭಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲೇ ಇರುವುದರಿಂದ ಈ ಪ್ರಶ್ನೆಯನ್ನು ಕೇಳಲಾಗಿದೆ.

ಭದ್ರತೆ ಮತ್ತು ಭೂಗೋಳ ದಿಕ್ಸೂಚಿಗೆ ಅನುಗುಣವಾಗಿ ಪಾದಯಾತ್ರೆಯ ಮಾರ್ಗಸೂಚಿಯನ್ನು ರಚಿಸಲಾಗಿದೆ. ಹಾಗಾಗಿ ಗುಜರಾತ್‌, ಹಿಮಾಚಲ ಪ್ರದೇಶ ಸೇರಿದಂತೆ ಮತ್ತಿತರ ರಾಜ್ಯಗಳ ಮೂಲಕ ಪಾದಯಾತ್ರೆ ಸಾಗುತ್ತಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ವಿವರಿಸಿದ್ದಾರೆ.

ಪಕ್ಷದ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಅವರ ಸಮಿತಿಯು ವಿಶ್ಲೇಷಿಸಿ ಐದಾರು ಮಾರ್ಗಸೂಚಿಗಳನ್ನು ಸೂಚಿಸಿದ್ದರು. ಈ ಪೈಕಿ ಅಂತಿಮವಾಗಿ ಒಂದನ್ನು ಆಯ್ದುಕೊಳ್ಳಲಾಗಿದೆ. ಭದ್ರತೆ ಮತ್ತು ಭೂಗೋಳ ದಿಕ್ಸೂಚಿ ಮತ್ತಿತರ ಕಾರಣಗಳಿಂದ ಗುಜರಾತ್‌, ಹಿಮಾಚಲ ಪ್ರದೇಶ ಸೇರಿದಂತೆ ಮತ್ತಿತರ ರಾಜ್ಯಗಳನ್ನು ಮಾರ್ಗಸೂಚಿಯಿಂದ ಕೈಬಿಡಲಾಗಿದೆ. ರಸ್ತೆ, ದೋಣಿ ಅಥವಾ ಅರಣ್ಯ ಮಧ್ಯದ ದಾರಿಗಳನ್ನು ಒಳಗೊಂಡ ಛತ್ತೀಸಗಢದ ಮೂಲಕ ಹಾದುಹೋಗುವ ಮಾರ್ಗಸೂಚಿಗಳು ಇದ್ದವು. ಆದರೆ ಪಾದಯಾತ್ರೆಗೆ ಅನುಗುಣವಾಗಿ ಒಂದು ಮಾರ್ಗವನ್ನು ಆಯ್ದುಕೊಳ್ಳಲಾಗಿದೆ ಎಂದು ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ದಕ್ಷಿಣದ ತುದಿಯಿಂದ ಉತ್ತರದ ತುದಿಗೆ ಪಾದಯಾತ್ರೆ ಹಮ್ಮಿಕೊಂಡಂತೆ ಪಶ್ಚಿಮದಿಂದ ಪೂರ್ವಕ್ಕೆ ಏಕಿಲ್ಲ ಎಂಬ ಪ್ರಶ್ನೆಗೂ ಜೈರಾಮ್‌ ರಮೇಶ್‌ ಪ್ರತಿಕ್ರಿಯಿಸಿದ್ದಾರೆ. ಪಶ್ಚಿಮದಿಂದ ಪೂರ್ವದ ತುದಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಆದರೆ ಸದ್ಯಕ್ಕೆ ಯಾವುದೇ ದಿನಾಂಕ ನಿಗದಿ ಮಾಡಿಲ್ಲ ಎಂದರು.

ಕನ್ಯಾಕುಮಾರಿಯಿಂದ ಆರಂಭಗೊಳ್ಳಲಿರುವ ಪಾದಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅವರು ಪಾಲ್ಗೊಳ್ಳಲಿದ್ದಾರೆ. 100 ಪಾದಯಾತ್ರಿಗಳು ಆರಂಭದಿಂದ ಕೊನೆಯವರೆಗೆ ಇರಲಿದ್ದಾರೆ. ಇವರು 'ಭಾರತ್‌ ಯಾತ್ರಿಗಳು'. ಯಾವ ರಾಜ್ಯಗಳಲ್ಲಿ ಪಾದಯಾತ್ರೆ ಹಾದುಹೋಗುವುದಿಲ್ಲವೋ ಅಲ್ಲಿನ ಸುಮಾರು 100 ಯಾತ್ರಿಗಳು ಸೇರ್ಪಡೆಗೊಳ್ಳಲಿದ್ದಾರೆ. ಇವರು 'ಅತಿಥಿ ಯಾತ್ರಿಗಳು'. ಆಯಾ ರಾಜ್ಯಗಳಲ್ಲಿ ಹಾದು ಹೋಗುವಾಗ ಅಲ್ಲಿನ 100 ಯಾತ್ರಿಗಳು ಪಾಲ್ಗೊಳ್ಳುತ್ತಾರೆ. ಇವರು 'ಪ್ರದೇಶ್‌ ಯಾತ್ರಿಗಳು'. ಒಟ್ಟಾರೆ ಏಕಕಾಲಕ್ಕೆ ಭಾರತ್‌ ಯಾತ್ರಿಗಳು, ಅತಿಥಿ ಯಾತ್ರಿಗಳು ಹಾಗೂ ಪ್ರದೇಶ್‌ ಯಾತ್ರಿಗಳು ಸೇರಿದಂತೆ ಪಾದಯಾತ್ರೆಯಲ್ಲಿ 300 ಮಂದಿ ಭಾಗವಹಿಸುತ್ತಾರೆ ಎಂದು ದಿಗ್ವಿಜಯ್‌ ಸಿಂಗ್‌ ಮಾಹಿತಿ ನೀಡಿದರು.

ರಾಹುಲ್‌ ಗಾಂಧಿ ಅವರು ರಾಷ್ಟ್ರದ ಬಹುದೊಡ್ಡ ನಾಯಕರು. ಅವರು ಈ ಯಾತ್ರೆಯಲ್ಲಿ 'ಭಾರತ್‌ ಯಾತ್ರಿ'ಯಾಗಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ದಿಗ್ವಿಜಯ್‌ ಸಿಂಗ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT