ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಕಿಸಾನ್‌ ಮಹಾಪಂಚಾಯತ್‌: ಸಾವಿರಾರು ರೈತರ ಆಗಮನ– ಭಾರೀ ಭದ್ರತೆ

Last Updated 22 ಆಗಸ್ಟ್ 2022, 6:28 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿರುವ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಭಾಗವಹಿಸಲು ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ರೈತರು ಆಗಮಿಸಿದ್ದಾರೆ.

ಮಹಾಪಂಚಾಯತ್‌ ಸಭೆಯ ಹಿನ್ನೆಲೆಯಲ್ಲಿ ದೆಹಲಿಯ ಗಡಿ ಭಾಗಗಳಲ್ಲಿ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಕೆಲವು ಸ್ಥಳಗಳಲ್ಲಿ ರೈತರನ್ನು ತಡೆಯಲಾಗಿದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ನಾಯಕರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದಾರೆ.

‘ಮಹಾಪಂಚಾಯತ್ ಒಂದು ದಿನದ ಶಾಂತಿಯುತ ಕಾರ್ಯಕ್ರಮವಾಗಿದ್ದು, ಎಂಎಸ್‌ಪಿ ಮೇಲಿನ ಕಾನೂನು ಖಾತರಿ ಮತ್ತು ವಿದ್ಯುತ್ ತಿದ್ದುಪಡಿ ಮಸೂದೆ–2022 ರದ್ದತಿ ಸೇರಿದಂತೆ ಕೆಲವು ಬೇಡಿಕೆಗಳಿವೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಕೊಡಲಿದ್ದೇವೆ.’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ಬಂದಿದ್ದ ರೈತರನ್ನು ನಿನ್ನೆ(ಭಾನುವಾರ) ರಾತ್ರಿ ತಡೆದು ಜಂತರ್ ಮಂತರ್ ತಲುಪಲು ಬಿಡಲಿಲ್ಲ ಎಂದು ರೈತ ಮುಖಂಡ ಅಭಿಮನ್ಯು ಸಿಂಗ್ ಕೊಹರ್ ತಿಳಿಸಿದ್ದಾರೆ.

ರೈತರನ್ನು ಗುರುದ್ವಾರ ಬಾಂಗ್ಲಾ ಸಾಹಿಬ್, ರಾಕಬ್‌ಗಂಜ್ ಮತ್ತು ಮೋತಿ ಬಾಗ್‌ಗೆ ಕರೆದೊಯ್ಯಲಾಯಿತು ಮತ್ತು ನಂತರ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

ಪಂಜಾಬ್, ಕರ್ನಾಟಕ, ಉತ್ತರ ಪ್ರದೇಶ ಮತ್ತು ಹರಿಯಾಣದ ಕೆಲವು ಭಾಗಗಳಿಂದ ಬಂದಿರುವ ರೈತರು ದೆಹಲಿ ತಲುಪಿದ್ದಾರೆ ಎಂದು ಕೊಹರ್ ಹೇಳಿದ್ದಾರೆ.

ಈ ಹಿಂದೆ ರೈತರ ಚಳವಳಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮ ಎಲ್ಲ ಬೇಡಿಕೆಗಳನ್ನು ಪರಿಗಣಿಸುವುದಾಗಿ ಭರವಸೆ ನೀಡಿತ್ತು. ಆದರೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕೊಹರ್ ಹೇಳಿದ್ದಾರೆ.

ನಮ್ಮ ಬೇಡಿಕೆಗಳ ಕುರಿತು ಮತ್ತೊಮ್ಮೆ ಚರ್ಚಿಸಲು ಮತ್ತು ಚಳವಳಿಯ ಭವಿಷ್ಯದ ಕಾರ್ಯತಂತ್ರವನ್ನು ರೂಪಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಕೊಹರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT