ಬಿಹಾರ ಸೇತುವೆ ಕುಸಿತ– ತನಿಖೆಗೆ ಆದೇಶ

ಬೇಗುಸರಾಯ್, ಬಿಹಾರ: ಇಲ್ಲಿಯ ಬುರ್ಹಿ ಗಂಡಕ್ ನದಿಗೆ ಅಡ್ಡಲಾಗಿ ₹13.48 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆಯು ಉದ್ಘಾಟನೆಯಾಗುವುದಕ್ಕೂ ಮುನ್ನವೇ ಕುಸಿದ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಈ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಭಾನುವಾರ ಬೆಳಿಗ್ಗೆ ಸೇತುವೆಯ ಒಂದು ಭಾಗ ಕುಸಿದಿತ್ತು. ಇದು ಸೇತುವೆ ನಿರ್ಮಾಣದ ಗುಣಮಟ್ಟದ ಮೇಲೆ ಬೆಳಕು ಚೆಲ್ಲುವಂತೆ ಮಾಡಿತ್ತು.
ಗ್ರಾಮೀಣ ಅಭಿವೃದ್ಧಿ ಇಲಾಖೆ (ಆರ್‌ಡಬ್ಲ್ಯು) ತಂಡವು ಸೋಮವಾರ ರಾತ್ರಿ ಘಟನೆ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಿದೆ. ತನಿಖೆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೇಗುಸರಾಯ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರೋಶನ್ ಕುಶ್ವಾಹ ತಿಳಿಸಿದರು.
ಸ್ಥಳಿಯ ನಿರ್ಮಾಣ ಸಂಸ್ಥೆಯೊಂದು ನಿರ್ಮಿಸಿದ್ದ ಸೇತುವೆಯು ಅಧಿಕೃತವಾಗಿ ಉದ್ಘಾಟನೆಗೊಂಡಿರಲಿಲ್ಲ. ಪಾದಚಾರಿಗಳಿಗೆ ಮತ್ತು ಚಿಕ್ಕ ಗಾತ್ರದ ವಾಹನಗಳಿಗೆ ಸೇತುವೆ ಬಳಸಲು ಅನುವು ಮಾಡಲಾಗುತ್ತಿತ್ತು. ಸೇತುವೆಯ ಒಂದು ಭಾಗದಲ್ಲಿ ಬಿರುಕು ಮೂಡಿರುವುದನ್ನು ಶುಕ್ರವಾರ ಗಮನಿಸಲಾಗಿತ್ತು. ಹೀಗಾಗಿ ವಾಹನಗಳ ಓಡಾಟವನ್ನು ತಡೆಯಲಾಗಿತ್ತು. ಸಂಬಂಧಪಟ್ಟ ಇಲಾಖೆಗೆ ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಸೇತುವೆ ಕುಸಿಯುವ ಭಯ ನಮಗಿತ್ತು. ಭಾನುವಾರ ಬೆಳಿಗ್ಗೆ ಆ ಘಟನೆಯೂ ನಡೆಯಿತು’ ಎಂದು ರೋಶನ್ ಕುಶ್ವಾಹ ಹೇಳಿದರು.
ಸೇತುವೆ ಕುಸಿದಿದ್ದರಿಂದ ಸಾಹೇಬ್‌ಪುರ್ ಕಮಲ್ ಬ್ಲಾಕ್‌ನ ನಿವಾಸಿಗಳಿಗೆ ತೊಂದರೆಯಾಗಿದೆ. ಅವರು 20 ಕಿ.ಮೀ ಹೆಚ್ಚು ದೂರ ಕ್ರಮಿಸಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.