ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: ಮೊದಲ ಹಂತದ ಮತದಾನ ಇಂದು

Last Updated 28 ಅಕ್ಟೋಬರ್ 2020, 0:50 IST
ಅಕ್ಷರ ಗಾತ್ರ

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ನಡೆಯಲಿದೆ. ಕೋವಿಡ್‌–19 ಸಾಂಕ್ರಾಮಿಕ ಕಾಣಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದು.

ಒಟ್ಟು 71 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಇವುಗಳಲ್ಲಿ ಬಹುತೇಕ ಕ್ಷೇತ್ರಗಳು ನಕ್ಸಲ್‌ ಪೀಡಿತ ಮಗಧ, ಶಾಬಾದ್‌ ಮತ್ತು ಮುಂಗೇರ್‌ ಪ್ರದೇಶಕ್ಕೆ ಸೇರಿವೆ. ನಕ್ಸಲ್‌ ಬಾಧಿತ ಪ್ರದೇಶದಲ್ಲಿ ಮತದಾನಕ್ಕಾಗಿ ವ್ಯಾಪಕ ಬಂದೋಬಸ್ತ್‌ ಮಾಡಲಾಗಿದೆ.

ಸತತ ನಾಲ್ಕನೇ ಅವಧಿಗೂ ಮುಖ್ಯಮಂತ್ರಿ ಹುದ್ದೆ ಉಳಿಸಿಕೊಳ್ಳಲು ಬಯಸಿರುವ ನಿತೀಶ್‌ ಕುಮಾರ್‌ ಅವರಿಗೆ ಆರ್‌ಜೆಡಿಯ ತೇಜಸ್ವಿ ಯಾದವ್‌ ಭಾರಿ ಸ್ಪರ್ಧೆ ಒಡ್ಡಿದ್ದಾರೆ.

ಎನ್‌ಡಿಎ ಮೈತ್ರಿಕೂಟದಲ್ಲಿ ಜೆಡಿಯು, ಬಿಜೆಪಿ, ಎಚ್‌ಎಎಂ ಮತ್ತು ಹೊಸ ಪಕ್ಷ ವಿಕಾಸಶೀಲ ಇನ್ಸಾನ್‌ ಪಾರ್ಟಿ (ವಿಐಪಿ) ಇವೆ. ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಮತ್ತು ಎಡಪಕ್ಷಗಳಿವೆ.

ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿರುವ ಎಲ್‌ಜೆಪಿ, ಬಿಹಾರದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. ಈ ಪಕ್ಷದ 137 ಅಭ್ಯರ್ಥಿಗಳು ಕಣದ
ಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಜೆಡಿಯು ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಇರುವಲ್ಲಿ ಎಲ್‌ಜೆಪಿ ಅಭ್ಯರ್ಥಿ
ಗಳನ್ನು ಹಾಕಿಲ್ಲ. ನಿತೀಶ್‌ ಕುಮಾರ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದೇ ಗುರಿ ಎಂದು ಘೋಷಿಸಿಕೊಂಡಿರುವ ಎಲ್‌ಜೆಪಿ, ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವುದಾಗಿ ಹೇಳುತ್ತಿದೆ. ಈ ಮೂಲಕ ಮತದಾರರನ್ನು ಗೊಂದಲಕ್ಕೆ ಕೆಡವುವ ಯತ್ನ ನಡೆಸಿದೆ.

ಮಕ್ಕಳ ಸಂಖ್ಯೆಯ ಜಟಾಪಟಿ

‘ಒಂಬತ್ತು ಮಕ್ಕಳನ್ನು ಹೊಂದಿರುವವರು ಅಭಿವೃದ್ಧಿಯ ಬಗ್ಗೆ ನನಗೆ ಬೋಧನೆ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಾಡಿರುವ ಟೀಕೆಗೆ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಪ್ರತಿಕ್ರಿಯೆ ನೀಡಿದ್ದಾರೆ.

‘ಗಂಡು ಮಗು ಬೇಕು ಎಂಬ ಕಾರಣಕ್ಕೆ ಕೆಲವರು ಏಳು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರಿಗೆ ಹೆಣ್ಣು ಮಕ್ಕಳಲ್ಲಿ ನಂಬಿಕೆ ಇಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಅಂತಹ ಜನರು ನನಗೆ ಅಭಿವೃದ್ಧಿಯ ವಿಚಾರದಲ್ಲಿ ಬೋಧನೆ ಮಾಡುತ್ತಿದ್ದಾರೆ’ ಎಂದು ಲಾಲು ಪ್ರಸಾದ್‌ ಮತ್ತು ರಾಬ್ಡಿ ದೇವಿ ಅವರನ್ನು ಉಲ್ಲೇಖಿಸದೆಯೇ ನಿತೀಶ್‌ ಹೇಳಿದ್ದರು.ಲಾಲು–ರಾಬ್ಡಿ ದಂಪತಿಗೆ ಏಳು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ತೇಜಸ್ವಿ ಅವರಲ್ಲಿ ಕಿರಿಯವರು.

ನಿತೀಶ್‌ ಅವರ ಟೀಕೆಗೆ ತೇಜಸ್ವಿ ಮಂಗಳವಾರ ಪ್ರತಿಕ್ರಿಯೆ ನೀಡಿದರು. ನಿತೀಶ್‌ ಅವರು ಈವರೆಗಿನ ಚುನಾವಣಾ ಪ್ರಚಾರದಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡಿರಲಿಲ್ಲ. ಆದರೆ, ಈ ಚುನಾವಣೆಯಲ್ಲಿ ಅವರು ಹಲವು ಬಾರಿ ವೈಯಕ್ತಿಕ ಟೀಕೆಗಳನ್ನು ಮಾಡಿದ್ದಾರೆ.

‘ನಿತೀಶ್‌ ಅವರು ತಮ್ಮ ಟೀಕೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಗುರಿ ಮಾಡಿದ್ದಾರೆ. ಮೋದಿಯವರಿಗೂ ಐದು ಮಂದಿ ಸೋದರ–ಸೋದರಿಯರಿದ್ದಾರೆ. ಅದಷ್ಟೇ ಅಲ್ಲದೆ, ನಿತೀಶ್‌ ಅವರು ನನ್ನ ತಾಯಿಯನ್ನು ಮಾತ್ರವಲ್ಲದೆ ಇಡೀ ಮಹಿಳಾ ಸಮೂಹವನ್ನೇ ಅವಮಾನಿಸಿದ್ದಾರೆ’ ಎಂದು ತೇಜಸ್ವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT