ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಪಿನ್ ರಾವತ್‌ ಸಾವು: ಪೈಲಟ್‌ ಕಕ್ಕಾಬಿಕ್ಕಿಯಾದ ಕಾರಣ ಅವಘಡ’

ಸಿಡಿಎಸ್‌ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್ ಪತನ ಪ್ರಕರಣ
Last Updated 14 ಜನವರಿ 2022, 19:20 IST
ಅಕ್ಷರ ಗಾತ್ರ

ನವದೆಹಲಿ: ‘ವಾತಾವರಣದಲ್ಲಿ ಆದ ದಿಢೀರ್ ಬದಲಾವಣೆಯಿಂದ ಪೈಲಟ್‌ ಕಕ್ಕಾಬಿಕ್ಕಿಯಾದರು. ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ–17 ವಿ5 ಹೆಲಿಕಾಪ್ಟರ್‌ ಪತನವಾಗಲು ಇದುವೇ ಕಾರಣ’ ಎಂದು ವಾಯುಪಡೆಯು ಶುಕ್ರವಾರ ಹೇಳಿದೆ. ಮೂರೂ ಸೇನೆಯ ಅಧಿಕಾರಿಗಳು ಇದ್ದ ಸಮಿತಿಯ ತನಿಖಾ ವರದಿಯಲ್ಲಿ ಹೀಗೆ ಹೇಳಲಾಗಿದೆ ಎಂದು ವಾಯುಪಡೆಯು ತಿಳಿಸಿದೆ.

‘ಹೀಗೆ ಆದ ಕಾರಣ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿದೆ. ಇದನ್ನು ‘ಕಂಟ್ರೋಲ್ಡ್‌ ಫ್ಲೈಟ್‌ ಇಂಟು ಟೆರೇನ್‌’ ಎನ್ನಲಾಗುತ್ತದೆ. ಪೈಲಟ್ ಮತ್ತು ಸಹ ಪೈಲಟ್‌ಗೆ ಅರಿವಿಲ್ಲದೆಯೇ, ಹೆಲಿಕಾಪ್ಟರ್ ನೆಲಮುಟ್ಟುವುದನ್ನು ಹೀಗೆ ಕರೆಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಹೆಲಿಕಾಪ್ಟರ್‌ ಅನ್ನು ನಿಯಂತ್ರಿಸುವ ಅಥವಾ ಸಹಾಯಕ್ಕಾಗಿ ಕರೆ ನೀಡುವ ಯಾವ ಅವಕಾಶಗಳೂ ಪೈಲಟ್‌ಗಳಿಗೆ ಇರುವುದಿಲ್ಲ’ ಎಂದು ವಾಯುಪಡೆಯು ಹೇಳಿದೆ.

‘ಹೆಲಿಕಾಪ್ಟರ್‌ನ ಫ್ಲೈಟ್‌ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್‌ ವಾಯ್ಸ್ ರೆಕಾರ್ಡರ್‌ಗಳನ್ನು ಪರಿಶೀಲಿಸಲಾಗಿದೆ. ಲಭ್ಯವಿದ್ದ ಇತರ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿದೆ. ಸಾಕ್ಷಿಗಳನ್ನೂ ವಿಚಾರಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಎಂಐ–17 ವಿ5 ಅತ್ಯಂತ ಸುರಕ್ಷಿತ ಹೆಲಿಕಾಪ್ಟರ್‌ ಆಗಿದೆ. ಯಾವುದೇ ಯಾಂತ್ರಿಕ ಮತ್ತು ತಾಂತ್ರಿಕ ತೊಂದರೆಯಿಂದ ಈ ಅವಘಾತ ಸಂಭವಿಸಿಲ್ಲ. ನಿರ್ಲಕ್ಷ್ಯದಿಂದಲೂ ಈ ಅಪಘಾತ ಸಂಭವಿಸಿಲ್ಲ. ಯಾವುದೇ ರೀತಿಯ ದಾಳಿಯಿಂದ ಈ ಅವಘಡ ಸಂಭವಿಸಿಲ್ಲ’ ಎಂದು ವಾಯುಪಡೆಯು ಹೇಳಿದೆ.

2021ರ ಡಿಸೆಂಬರ್ 8ರಂದು ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಸೇನಾಶಾಲೆಯಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್, ಅವರ ಪತ್ನಿ ಮತ್ತು ಇನ್ನೂ 12 ಸಿಬ್ಬಂದಿ ಹಾಗೂ ಅಧಿಕಾರಿಗಳು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ವೆಲ್ಲಿಂಗ್ಟನ್‌ನಿಂದ ಇನ್ನು ಕೆಲವೇ ಕಿ.ಮೀ. ದೂರವಿರುವಾಗ ಹೆಲಿಕಾಪ್ಟರ್ ಪತನವಾಗಿತ್ತು. ರಾವತ್ ದಂಪತಿ ಸೇರಿ 11 ಮಂದಿ ಪತನದಲ್ಲಿ ಮೃತಪಟ್ಟಿದ್ದರು. ಅವಘಡದಲ್ಲಿ ಬದುಕುಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT