ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದ ಸಜೀವ ದಹನ ಪ್ರಕರಣ: ಬೋಗ್‌ತುಇ ಗ್ರಾಮದಲ್ಲಿ ಸ್ಮಶಾನ ಮೌನ

ಪರಾರಿಯಾದ ಜನರಿಗೆ ಮನೆಗೆ ಮರಳಲು ಜೀವ ಭಯ
Last Updated 26 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಬೋಗ್‌ತುಇ (ಪಶ್ಚಿಮ ಬಂಗಾಳ): ಎಂಟು ಜನರು ಸಜೀವ ದಹನಗೊಂಡ ಬೋಗ್‌ತುಇ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

ರಾಮ್‌ಪುರಹಾಟ್‌ನ ಸಮೀಪದ ಈ ಗ್ರಾಮದ ಹಲವು ಜನರು ಪರಾರಿಯಾಗಿದ್ದಾರೆ. ಟಿಎಂಸಿಯ ಸ್ಥಳೀಯ ಮುಖಂಡ ಭಾಡು ಶೇಖ್‌ ಹತ್ಯೆಯ ಬಳಿಕ, ಇಡೀ ದೇಶವನ್ನು ಆಘಾತಗೊಳಿಸಿದ ಸಜೀವ ದಹನ ಪ್ರಕರಣ ನಡೆದಿತ್ತು. ಇನ್ನಷ್ಟು ಹಿಂಸೆ ನಡೆಯಬಹುದು ಎಂಬ ಭೀತಿಯಲ್ಲಿ ಹಲವು ಜನರು ಗ್ರಾಮ ಬಿಟ್ಟು ಹೋಗಿದ್ದಾರೆ.

ಸುತ್ತಮುತ್ತಲಿನ ಹಳ್ಳಿಗಳಾದ ಪುರ್ಬಪಾರಾ, ಪಶ್ಚಿಮಪಾರಾ ಮತ್ತು ಮಯರ್‌ಪಾರಾದ ನಿವಾಸಿಗಳು ಕೂಡ ತಮ್ಮ ಮನೆ ಬಿಟ್ಟು ಹೋಗಿದ್ದಾರೆ. ಇಲ್ಲಿ ಒಂದು ಸರ್ಕಾರಿ ಶಾಲೆ ಇದೆ, ಆದರೆ ವಿದ್ಯಾರ್ಥಿಗಳು ಯಾರೂ ಶಾಲೆಯತ್ತ ಸುಳಿದಿಲ್ಲ. ಇಲ್ಲಿನ ಅಂಗನವಾಡಿಯ ಬಾಗಿಲು ತೆರೆದೇ ಇದೆ. ಆದರೆ, ಮಕ್ಕಳನ್ನು ತಂದು ಅಲ್ಲಿ ಯಾರೂ ಬಿಡುತ್ತಿಲ್ಲ.

ಗ್ರಾಮಕ್ಕೆ ಈಗ ಪತ್ರಕರ್ತರು, ಅಧಿಕಾರಿಗಳು ಮತ್ತು ಪೊಲೀಸರು ಪದೇ ಪದೇ ಭೇಟಿ ಕೊಡುತ್ತಿದ್ದಾರೆ. ಆದರೆ, ಅವರನ್ನು ಸ್ವಾಗತಿಸಲು ಜನರು ಮಾತ್ರ ಇಲ್ಲ. ಬಾಗಿಲು ಅಥವಾ ಕಿಟಕಿ ಸಂಧಿಯಿಂದ ಒಳಕ್ಕೆ ಇಣುಕಿದರೆ, ಜನರು ಆತುರಾತುರವಾಗಿ ಮನೆ ಬಿಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ವಸ್ತುಗಳೆಲ್ಲ ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತರಕಾರಿ
ಗಳು ಹಾಗೆಯೇ ಇವೆ, ಒಣ ಹಾಕಿದ ಬಟ್ಟೆಗಳನ್ನು ಅಲ್ಲಿಯೇ ಬಿಡಲಾಗಿದೆ. ಸದ್ದಾಂ ಶೇಖ್‌ ಅವರ ಮನೆಯ ಸ್ಥಿತಿಯೂ ಹಾಗೆಯೇ ಇದೆ. ಸಜೀವ ದಹನಗೊಂಡ ಏಳು ಮೃತದೇಹಗಳು ಪತ್ತೆಯಾದ ಸೋನು ಶೇಖ್‌ ಅವರ ಮನೆಯ ಪಕ್ಕದ ಮನೆಯೇ ಸದ್ದಾಂ ಅವರದ್ದು.

ಜನರಿಗೆ ಪೂರ್ಣ ಭದ್ರತೆ ಒದಗಿಸಲಾಗುವುದು ಎಂದು ಗ್ರಾಮಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ಕೊಟ್ಟಿದ್ದಾರೆ. ಆದರೆ, ಹಲವು ಮನೆಗಳ ಜನರು ಈಗಲೂ ಬಾಗಿಲು ಹಾಕಿಕೊಂಡು ಮನೆಯೊಳಗೇ ಕುಳಿತಿದ್ದಾರೆ.

‘ಓಡಿಹೋದವರು ಎಲ್ಲಿ ಹೋಗಿದ್ದಾರೆ ಎಂಬುದೇ ತಿಳಿದಿಲ್ಲ. ಅವರಿಗೆ ಬೇರೆ ಆಯ್ಕೆಯೇ ಇರಲಿಲ್ಲ. ನನ್ನ ಮಗ ಕೂಡ ಇಲ್ಲಿ ಇಲ್ಲ. ಅವರೆಲ್ಲರೂ ಗ್ರಾಮದಿಂದ ದೂರ ಇರುವ ಸಂಬಂಧಿಕರ ಮನೆಯಲ್ಲಿ ಇದ್ದಾರೆ’ ಎಂದು ಸೋನು ಶೇಖ್‌ ಅವರ ಮಾವ ಸಾಹಿ ಆಲಂ ಶೇಖ್‌ ಹೇಳಿದ್ದಾರೆ.

ಆಲಂ ಅವರು ಸಜೀವ ದಹನ ಕೃತ್ಯವನ್ನು ಕಣ್ಣಾರೆ ಕಂಡವರು. ಆದರೆ, ಘಟನೆಯ ಬಗ್ಗೆ ಅವರು ಏನನ್ನೂ ಹೇಳುತ್ತಿಲ್ಲ.

‘ಇದು ಪ‍್ರತೀಕಾರದ ಹತ್ಯೆ. ನಾವು ಮನೆಯ ಒಳಗಿನಿಂದಲೇ ಎಲ್ಲವನ್ನೂ ನೋಡಿದ್ದೇವೆ. ಸೋನು ಅವರ ಮನೆಯತ್ತ ಜನರ ಗುಂಪು ಬಾಂಬ್‌ ಎಸೆಯುವುದನ್ನು ಕಂಡು ನಾವು ಮನೆಯ ಒಳಕ್ಕೆ ಓಡಿದೆವು. ಆ ಬಳಿಕ ಏನಾಯಿತು ಎಂಬುದು ತಿಳಿದಿಲ್ಲ’ ಎಂದು ಹೇಳಿದ್ದಾರೆ.

ಗ್ರಾಮದಲ್ಲಿ ಇರುವ 15 ಮನೆಗಳಿಗೆ ರಕ್ಷಣೆ ಕೊಡಲು ದೊಡ್ಡ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ. ಗ್ರಾಮದಲ್ಲಿ ಒಟ್ಟು ಏಳು ಸಾವಿರ ಜನರಿದ್ದಾರೆ.

‘ನನ್ನ ಮಕ್ಕಳೂ ಅಡಗಿಕೊಂಡಿದ್ದಾರೆ. ಗ್ರಾಮದ ಜನರು ಎಲ್ಲಿ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ನನಗೆ ಈ ಬಗ್ಗೆ ಮಾತನಾಡುವುದೇ ಬೇಡವಾಗಿದೆ. ನಮ್ಮ ಜೀವದ ಬಗ್ಗೆ ಭೀತಿ ಎದುರಾಗಿದೆ’ ಎಂದು ಮುಮ್ತಾಜ್‌ ಹೇಳುತ್ತಾರೆ. ‘ನನ್ನ ಮಕ್ಕಳು ಹೊರಗೆ ಹೋಗಿದ್ದಾರೆ. ಆದಷ್ಟು ಬೇಗನೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿ’ ಎಂದು ಅವರು ಹಾರೈಸುತ್ತಿದ್ದಾರೆ. ಆದರೆ, ಪರಾರಿಯಾದವರಿಗೆ ಗ್ರಾಮಕ್ಕೆ ಮರಳುವ ಭರವಸೆಯೇ ಇಲ್ಲ.

‘ಹೇಗೆ ನಾವು ಹಿಂದಿರುಗುವುದು? ನಮಗೆ ಜೀವ ಭಯ ಇದೆ. ಪೊಲೀಸರು ಗ್ರಾಮ ಬಿಟ್ಟು ಹೋದ ಬಳಿಕ ಏನಾಗಬಹುದು?’ ಎಂದು ಸೋನು ಶೇಖ್‌ ಸಂಬಂಧಿಕರೊಬ್ಬರು ಪ್ರಶ್ನಿಸಿದ್ದಾರೆ.

ಸಜೀವ ದಹನ ಪ್ರಕರಣವು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಎಡಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಭಾರಿ ಟೀಕೆ ಮಾಡಿವೆ. ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು, ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಸಿಬಿಐ ತಂಡ
ರಾಮ್‌ಪುರಹಾಟ್‌ (ಪಿಟಿಐ): ಪಶ್ಚಿಮ ಬಂಗಾಳದ ಬಿರ್‌ಭೂಮ್‌ ಜಿಲ್ಲೆಯಲ್ಲಿ ನಡೆದ ಸಜೀವ ದಹನ ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿದೆ. ಸಿಬಿಐ ತಂಡವು ಪ್ರಕರಣ ನಡೆದ ಬೋಗ್‌ತುಇ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದೆ.

ಸುಮಾರು 20 ಸದಸ್ಯರ ತಂಡ ಇದಾಗಿದೆ.ಸುಟ್ಟು ಕರಕಲಾಗಿದ್ದ ಏಳು ಮೃತ ದೇಹಗಳು ಪತ್ತೆಯಾದ ಮನೆ ಒಳಗೆ ಹೋಗಿ ಸಿಬಿಐ ಸಿಬ್ಬಂದಿ ಪರಿಶೀಲನೆ ನಡೆಸಿದರು.

‘ಇಂದಿನಿಂದ (ಶನಿವಾರ) ನಾವು ತನಿಖೆ ಆರಂಭಿಸಿದ್ದೇವೆ. ತನಿಖೆ ನಡೆಸಲು ನಮಗೆ ಸಮಯದ ಗಡುವು ನೀಡಲಾಗಿದೆ. ಹೀಗಾಗಿ ನಾವು ಯುದ್ಧೋಪಾದಿಯಲ್ಲಿ ತನಿಖೆ ನಡೆಸಬೇಕಿದೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದರು.

ಸಿಬಿಐನ ಘಟಕವಾದ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎಸ್‌ಎಫ್‌ಎಲ್‌) ತಜ್ಞರ ತಂಡವು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದೆ.

ಬಿರ್‌ಭೂಮ್‌ ಸಜೀವ ದಹನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕಲ್ಕತ್ತ ಹೈಕೋರ್ಟ್‌ ಶುಕ್ರವಾರ ಆದೇಶ ನೀಡಿತ್ತು. ತನಿಖೆ ನಡೆಸಲು ಏಪ್ರಿಲ್‌ 7ರ ವರೆಗೆ ಸಮಯಾವಕಾಶವನ್ನು ಕೋರ್ಟ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT