ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಿಯಂತ್ರಣದಲ್ಲಿ ಫೇಸ್ಬುಕ್‌: ಅಮೆರಿಕ ಪತ್ರಿಕೆ ವರದಿ ಉಲ್ಲೇಖಿಸಿದ ರಾಹುಲ್

Last Updated 17 ಆಗಸ್ಟ್ 2020, 3:06 IST
ಅಕ್ಷರ ಗಾತ್ರ

ದೆಹಲಿ: ಬಿಜೆಪಿ ನಾಯಕರ ದ್ವೇಷ ಭಾಷಣವನ್ನು ಫೇಸ್‌ಬುಕ್ ಕಡೆಗಣಿಸಿದೆ ಎಂದು ಆರೋಪಿಸಿ ಅಮೆರಿಕದ ಪತ್ರಿಕೆಯೊಂದು ಪ್ರಕಟಿಸಿರುವ ಲೇಖನವನ್ನು ಆಧರಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಿಜೆಪಿ ಮತ್ತು ಆರೆಸ್ಸೆಸ್‌ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

‘ದ್ವೇಷ ಭಾಷಣ ನಿಯಮಗಳನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕಾರಣಿ ಮತ್ತು ಇತರ ಹಿಂದೂ ರಾಷ್ಟ್ರೀಯವಾದಿ ವ್ಯಕ್ತಿಗಳು ಮತ್ತು ಗುಂಪುಗಳಿಗೆ ಅನ್ವಯಿಸುವುದನ್ನು ಫೇಸ್‌ಬುಕ್‌ ಭಾರತದ ಹಿರಿಯ ಅಧಿಕಾರಿಯೊಬ್ಬರು ವಿರೋಧಿಸಿದ್ದರು. ಬಿಜೆಪಿ ನಾಯಕರ ದ್ವೇಷ ಭಾಷಣಗಳನ್ನು ಫೇಸ್‌ಬುಕ್‌ ನಿರ್ಲಕ್ಷಿಸುತ್ತಿದೆ,’ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಭಾನುವಾರ ವರದಿ ಮಾಡಿದೆ.

ಇದೇ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

‘ಭಾರತದಲ್ಲಿ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ನಿಯಂತ್ರಣದಲ್ಲಿವೆ. ಇದರ ಮೂಲಕ ಅವರು ಸುಳ್ಳು ಸುದ್ದಿ ಮತ್ತು ದ್ವೇಷವನ್ನು ಹರಡುತ್ತಿದ್ದಾರೆ. ಅಲ್ಲದೆ, ಅದನ್ನು ಚುನಾವಣೆ ವ್ಯವಸ್ಥೆ ಮೇಲೆ ಪರಿಣಾಮ ಬೀರಲು ಬಳಸಿಕೊಳ್ಳಲಾಗುತ್ತಿದೆ. ಅಂತಿಮವಾಗಿ ಅಮೆರಿಕದ ಮಾಧ್ಯಮವೊಂದು ಫೇಸ್‌ಬುಕ್‌ ಕುರಿತ ಸತ್ಯವೊಂದನ್ನು ಹೊರತಂದಿದೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಅವರ ಟ್ವೀಟ್‌ಗೆ ಕಮೆಂಟ್‌ ಮಾಡಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ‘ಮಾಧ್ಯಮದ ಈ ವರದಿ ಮತ್ತು ಭಾರತದಲ್ಲಿ ದ್ವೇಷ-ಭಾಷಣಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ ಏನನ್ನು ಪ್ರಸ್ತಾಪಿಸಲಿದೆ ಎಂಬುದರ ಬಗ್ಗೆ ಫೇಸ್‌ಬುಕ್‌ನಿಂದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಖಂಡಿತವಾಗಿಯೂ ಪ್ರತಿಕ್ರಿಯೆ ಕೇಳಲು ಬಯಸುತ್ತದೆ,’ ಎಂದಿದ್ದಾರೆ.

ಕೇಂದ್ರದ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ರಾಹುಲ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ‘ತಮ್ಮ ಪಕ್ಷದವರ ಮೇಲೆಯೂ ಪ್ರಭಾವ ಬೀರಲು ಸಾಧ್ಯವಿಲ್ಲದವರು ಇಡೀ ಜಗತ್ತನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿದೆ ಎಂದು ಬಡಬಡಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಫೇಸ್‌ಬುಕ್‌ ಮತ್ತು ಟ್ವಿಟರ್‌ನಿಂದ ದತ್ತಾಂಶ ಸಂಗ್ರಹಿಸಿದ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಕೇಂಬ್ರಿಜ್‌ ಅನಲಿಟಿಕಾವನ್ನು 2019ರ ಲೋಕಸಭಾ ಚುನಾವಣೆಯ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್‌ ಪಕ್ಷವು ಬಳಸಿಕೊಂಡಿತ್ತು ಎಂಬ 2018ರ ಆರೋಪವನ್ನು ಪ್ರಸಾದ್‌ ಉಲ್ಲೇಖಿಸಿದ್ದಾರೆ. ‘ಚುನಾವಣೆಗೆ ಮೊದಲು ದತ್ತಾಂಶ ಸಂಗ್ರಹಕ್ಕೆ ಕೇಂಬ್ರಿಜ್‌ ಅನಲಿಟಿಕಾ ಮತ್ತು ಫೇಸ್‌ಬುಕ್‌ ಅನ್ನು ಬಳಸಿಕೊಂಡು ಸಿಕ್ಕಿಬಿದ್ದಿದ್ದ ಕಾಂಗ್ರೆಸ್‌ ಈಗ ನಮ್ಮನ್ನು ಪ್ರಶ್ನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಕೇಂಬ್ರಿಜ್‌ ಅನಲಿಟಿಕಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸಾಂಡರ್‌ ನಿಕ್ಸ್‌ ಜತೆಗೆ ಚರ್ಚೆ ನಡೆಸಿದ್ದು ಹೌದು. ಆದರೆ, ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್‌ ಪಕ್ಷವು ಆ ಸಂದರ್ಭದಲ್ಲಿ ಸ್ಪಷ್ಟೀಕರಣ ಕೊಟ್ಟಿತ್ತು.

‘ಮಾಹಿತಿ ಲಭ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಈಗ ಪ್ರಜಾಪ್ರಭುತ್ವೀಕರಣಗೊಂಡಿದೆ. ಅದು ಈಗ ನಿಮ್ಮ ಕುಟುಂಬದ ನಿಯಂತ್ರಣದಲ್ಲಿ ಇಲ್ಲ. ಈ ಅಂಶವೇ ನಿಮ್ಮಲ್ಲಿ ನೋವು ಉಂಟು ಮಾಡುತ್ತಿದೆ. ಈ ಮಧ್ಯೆ, ಬೆಂಗಳೂರು ಗಲಭೆಯ ಬಗ್ಗೆ ನಿಮ್ಮ ಖಂಡನೆ ಕೇಳಲೇ ಇಲ್ಲ. ನಿಮ್ಮ ಧೈರ್ಯ ಎಲ್ಲಿ ಮಾಯವಾಗಿತ್ತು?’ ಎಂದೂ ಪ್ರಸಾದ್‌ ಹೇಳಿದ್ದಾರೆ.

‘ಭಾರತದ ಫೇಸ್‌ಬುಕ್‌ನ ಉನ್ನತ ಅಧಿಕಾರಿಯಾಗಿರುವ ಅಂಕಿ ದಾಸ್ ಎಂಬುವವರು, ಆಡಳಿತ ಪಕ್ಷದೊಂದಿಗಿನ ಕಂಪನಿಯ ಸಂಬಂಧ ಹಾಳಾಗುವ ಭಯದಿಂದ ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರ ವಿರುದ್ಧ ದ್ವೇಷ ಭಾಷಣ ನಿಯಮಗಳನ್ನು ಅನ್ವಯಿಸುವುದನ್ನು ವಿರೋಧಿಸಿದ್ದರು,’ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿಯಲ್ಲಿ ಉಲ್ಲೇಖಿಸಿದೆ.

ರಾಜಾ ಸಿಂಗ್‌ ಅವರು ತೆಲಂಗಾಣದ ಏಕೈಕ ಬಿಜೆಪಿ ಶಾಸಕ.

‘ಮೋದಿ ಅವರ ಪಕ್ಷಕ್ಕೆ ಸಂಬಂಧಿಸಿದ ನಾಯಕರ ದ್ವೇಷ ಭಾಷಣಗಳ ಮೇಲೆ ಕ್ರಮ ಕೈಗೊಳ್ಳದಂತೆ ಕಂಪನಿಯ ಉದ್ಯೋಗಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ಹಾಗೆ ಮಾಡಿದರೆ, ಭಾರತದಲ್ಲಿ ಕಂಪನಿಯ ವ್ಯವಹಾರಕ್ಕೆ ಸಮಸ್ಯೆಯಾಗಲಿದೆ,’ ಎಂದೂ ಅಂಕಿ ದಾಸ್‌ ಅವರು ಹೇಳಿದ್ದರು ಎಂದು ಕಂಪನಿಯ ಹಾಲಿ, ಮಾಜಿ ಉದ್ಯೋಗಿಗಳ ಮಾಹಿತಿ ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT