ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಬಿಟಿಸಿ ಚುನಾವಣೆ: ಯುಪಿಪಿಎಲ್‌ ಕೈಹಿಡಿದ ಬಿಜೆಪಿ

ಬಿಪಿಎಫ್‌ ಆಡಳಿತ ಅಂತ್ಯ
Last Updated 13 ಡಿಸೆಂಬರ್ 2020, 18:25 IST
ಅಕ್ಷರ ಗಾತ್ರ

ಗುವಾಹಟಿ: ಇಲ್ಲಿನ ಬೋಡೊಲ್ಯಾಂಡ್‌ ಪ್ರಾದೇಶಿಕ ಮಂಡಳಿಯ (ಬಿಟಿಸಿ) ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ. ‘ಕಿಂಗ್‌ ಮೇಕರ್‌’ ಆಗಿರುವ ಬಿಜೆಪಿ, ಆಡಳಿತಾರೂಢ ಬೋಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ (ಬಿಪಿಎಫ್‌) ಜೊತೆಗಿನ ಮೈತ್ರಿಯನ್ನು ಮುರಿದುಕೊಂಡು ಯುನೈಟೆಡ್‌ ಪೀಪಲ್ಸ್‌ ಪಾರ್ಟಿ ಲಿಬರಲ್‌ನ (ಯುಪಿಪಿಎಲ್‌) ಕೈಹಿಡಿದಿದೆ.

ಮುಂದಿನ ವರ್ಷಅಸ್ಸಾಂ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಟಿಸಿ ಚುನಾವಣೆಯು ಎಲ್ಲಾ ರಾಜಕೀಯ ಪಕ್ಷಗಳ ಪಾಲಿಗೂ ಮಹತ್ವದ್ದೆನಿಸಿತ್ತು.

ತನ್ನ ಮಿತ್ರ ಪಕ್ಷ, ಬಿಪಿಎಫ್‌ ಅನ್ನು ಅಧಿಕಾರದಿಂದ ದೂರವಿಡಬೇಕೆಂಬ ಗುರಿಯೊಂದಿಗೆ ಕಣಕ್ಕಿಳಿದಿದ್ದ ಬಿಜೆಪಿ, ಅದರಲ್ಲಿ ಯಶಸ್ವಿಯೂ ಆಗಿದೆ. 2015ರ ಚುನಾವಣೆಯಲ್ಲಿ ಒಂದು ಸ್ಥಾನವನ್ನಷ್ಟೇ ಗೆದ್ದಿದ್ದ ಪಕ್ಷವು ಈ ಬಾರಿ ಈ ಸಂಖ್ಯೆಯನ್ನು ಒಂಬತ್ತಕ್ಕೆ ಹೆಚ್ಚಿಸಿಕೊಂಡಿದೆ.

ಹಗ್ರಮ್‌ ಮೋಹಿಲರಿ ನೇತೃತ್ವದ ಬಿಪಿಎಫ್‌, 17 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅಗತ್ಯವಿರುವ ‘ಮ್ಯಾಜಿಕ್‌ ನಂಬರ್‌’ (21 ಸ್ಥಾನ) ಪಡೆಯಲು ವಿಫಲವಾಗಿದೆ. ಈ ಪಕ್ಷ ಹಿಂದಿನ ಚುನಾವಣೆಯಲ್ಲಿ 20 ಸ್ಥಾನಗಳನ್ನು ಜಯಿಸಿತ್ತು. ಕಾಂಗ್ರೆಸ್‌ ಮತ್ತು ಗಾನಾ ಸುರಕ್ಷ ಪಕ್ಷ (ಜಿಎಸ್‌ಪಿ) ತಲಾ ಒಂದು ಸ್ಥಾನ ಜಯಿಸಿವೆ.

12 ಸ್ಥಾನಗಳನ್ನು ಗೆದ್ದಿರುವ ಯುಪಿಪಿಎಲ್‌ಗೆ ಬೆಂಬಲ ನೀಡಿರುವುದಾಗಿ ಬಿಜೆಪಿ ಭಾನುವಾರ ಘೋಷಿಸಿದೆ. ‘ಬಿಜೆಪಿ, ಯುಪಿಪಿಎಲ್‌ ಹಾಗೂಜಿಎಸ್‌ಪಿ ಒಟ್ಟಾಗಿ ಬಿಟಿಸಿ ಆಡಳಿತ ನಡೆಸಲಿವೆ. ಯುಪಿಪಿಎಲ್‌ ಮುಖ್ಯಸ್ಥ ಪ್ರಮೋದ್‌ ಬೊರೊ ಅವರನ್ನು ಬಿಟಿಸಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಸದಸ್ಯರನ್ನಾಗಿ (ಸಿಇಎಂ) ಆಯ್ಕೆ ಮಾಡಿದ್ದೇವೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್‌ ಭಾನುವಾರ ಹೇಳಿದ್ದಾರೆ.

ಬಿಜೆಪಿ, ಬಿಪಿಎಫ್‌ ಹಾಗೂ ಎಜಿಪಿ ಒಟ್ಟಾಗಿ 2016ರ ವಿಧಾನಸಭಾ ಚುನಾವಣೆ ಎದುರಿಸಿದ್ದವು. ಕಣಕ್ಕಿಳಿದಿದ್ದ 12 ಸ್ಥಾನಗಳಲ್ಲೂ ಬಿಪಿಎಫ್‌ ಅಭ್ಯರ್ಥಿಗಳು ಗೆದ್ದಿದ್ದರು. ಈ ಪೈಕಿ ಮೂವರು ಶಾಸಕರು ಸೋನೋವಾಲ್‌ ಅವರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ.

‘ಮೈತ್ರಿ ಧರ್ಮ ಪಾಲಿಸುವಂತೆ ನಾವು ಬಿಜೆಪಿಗೆ ಪದೇ ಪದೇ ಮನವಿ ಮಾಡಿದ್ದೇವೆ. ಬಿಟಿಸಿ ಆಡಳಿತ ನಡೆಸಲು ಸಹಕಾರ ನೀಡಬೇಕೆಂದೂ ಕೋರಿದ್ದೇವೆ. ನಮ್ಮ ಮನವಿಯನ್ನು ಅವರು ತಿರಸ್ಕರಿಸಿದ್ದಾರೆ’ ಎಂದು ಹಗ್ರಮ್‌ ಮೋಹಿಲರಿ ತಿಳಿಸಿದ್ದಾರೆ.

ಮೋಹಿಲರಿ ಅವರು ಹಿಂದಿನ 17 ವರ್ಷಗಳಿಂದ ಬಿಟಿಸಿಯ ಸಿಇಎಂ ಆಗಿದ್ದರು.ಬಿಟಿಸಿಗೆ ಎರಡು ಹಂತಗಳಲ್ಲಿ (ಡಿ.7 ಮತ್ತು 10) ಚುನಾವಣೆ ನಡೆಸಲಾಗಿತ್ತು.

ಈಶಾನ್ಯ ಜನರ ಸೇವೆಗೆ ಬದ್ಧ: ‘ಈಶಾನ್ಯ ರಾಜ್ಯಗಳ ಜನರ ಶ್ರೇಯೋಭಿವೃದ್ಧಿಗೆ ಎನ್‌ಡಿಎ ಬದ್ಧವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌‌ ಮಾಡಿದ್ದಾರೆ.

‘ನಮ್ಮ ಮಿತ್ರಪಕ್ಷ ಯುಪಿಪಿಎಲ್‌ ಹಾಗೂ ಅಸ್ಸಾಂ ಬಿಜೆಪಿಗೆ ಶುಭಾಶಯಗಳು. ಈ ಮೈತ್ರಿಕೂಟವು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ. ಎನ್‌ಡಿಎ ಮೈತ್ರಿಕೂಟದ ಮೇಲೆ ನಂಬಿಕೆ ಇಟ್ಟ ಜನರಿಗೆ ಆಭಾರಿಯಾಗಿದ್ದೇನೆ’ ಎಂದಿದ್ದಾರೆ.

‘ಮೋದಿ ನಾಯಕತ್ವದ ಮೇಲೆ ಜನ ಇಟ್ಟಿರುವ ನಂಬಿಕೆಯ ದ್ಯೋತಕ’
ನವದೆಹಲಿ (ಪಿಟಿಐ):
‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಜನ ಅಪಾರ ನಂಬಿಕೆ ಇಟ್ಟಿರುವುದಕ್ಕೆ ಬಿಟಿಸಿ ಚುನಾವಣಾ ಫಲಿತಾಂಶವೇ ಸಾಕ್ಷಿ’ ಎಂದು ಬಿಜೆ‍ಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾನುವಾರ ಹೇಳಿದ್ದಾರೆ.

‘ಎನ್‌ಡಿಎಯ ಮಿತ್ರಪಕ್ಷ ಯುಪಿಪಿಎಲ್‌, ಅಸ್ಸಾಂ ಮುಖ್ಯ ಮಂತ್ರಿ ಸರ್ಬಾನಂದ ಸೋನೋವಾಲ್‌, ರಾಜ್ಯಾಧ್ಯಕ್ಷ ರಂಜಿತ್‌ಕುಮಾರ್‌ ದಾಸ್‌, ಹಿರಿಯ ಸಚಿವ ಹಿಮಾಂತ ಬಿಸ್ವಾ ಹಾಗೂ ರಾಜ್ಯ ಬಿಜೆಪಿಗೆ ಅಭಿನಂದನೆಗಳು’ ಎಂದು ನಡ್ಡಾ ಟ್ವೀಟ್‌ ಮಾಡಿದ್ದಾರೆ.

*
ಅಸ್ಸಾಂ ಜನರು ಮೋದಿ ಅವರ ನಾಯಕತ್ವದ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಬಿಟಿಸಿ ಚುನಾವಣಾ ಫಲಿತಾಂಶ ಇದಕ್ಕೆ ತಾಜಾ ಉದಾಹರಣೆ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT