ಶನಿವಾರ, ಜನವರಿ 16, 2021
24 °C

ಪಶ್ಚಿಮ ಬಂಗಾಳ: ಸುವೇಂದು ಅಧಿಕಾರಿ ಸಂಪರ್ಕದಲ್ಲಿರುವ ಬಿಜೆಪಿ ನಾಯಕರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ನಾಯಕ ಸುವೇಂದು ಅಧಿಕಾರಿ ಜೊತೆ ಬಿಜೆಪಿ ಕೇಂದ್ರ ನಾಯಕರು ಸಂಪರ್ಕದಲ್ಲಿದ್ದು, ಅವರು ಬಿಜೆಪಿಗೆ ಸೇರುವ ಕುರಿತಂತೆ ಇಲ್ಲಿಯವರೆಗೂ ಯಾವುದೇ ನಿರ್ಧಾರವಾಗಿಲ್ಲ ಎಂದು ಪಕ್ಷದ ಮೂಲಗಳು ಶನಿವಾರ ತಿಳಿಸಿವೆ.

‘ಕೆಲ ಬಿಜೆಪಿ ನಾಯಕರ ಜೊತೆ ಅಧಿಕಾರಿ ಅವರು ನಿಕಟ ಸಂಪರ್ಕ ಹೊಂದಿದ್ದಾರೆ. ಆದರೆ ಪಕ್ಷಕ್ಕೆ ಸೇರಲು ಅವರ ಷರತ್ತುಗಳ ಕುರಿತಂತೆ ಇನ್ನಷ್ಟೇ ಮಾತುಕತೆ ನಡೆಯಬೇಕಾಗಿದೆ’ ಎಂದು ಮೂಲಗಳು ಉಲ್ಲೇಖಿಸಿವೆ.

ಇದನ್ನೂ ಓದಿ: ಸರ್ಕಾರದಿಂದ ಹೊರಬಂದ ಟಿಎಂಸಿ ಪ್ರಭಾವಿ ನಾಯಕ: ಮಂತ್ರಿಗಿರಿಗೆ 'ಅಧಿಕಾರಿ' ರಾಜೀನಾಮೆ

ಅಧಿಕಾರಿ ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಬಿಜೆಪಿ ಆಶಾಭಾವದಲ್ಲಿದ್ದು, ಅವರ ಮುಂದೆ ಕೆಲ ಆಯ್ಕೆಗಳಷ್ಟೇ ಉಳಿದಿವೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದರು. ‘ನಾವು ಸುವೇಂದು ಅಧಿಕಾರಿ ಜೊತೆ ಸಂಪರ್ಕದಲ್ಲಿದ್ದೇವೆ. ಅವರು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ಇಲ್ಲಿಯವರೆಗೂ ಯಾವುದೇ ನಿರ್ಧಾರವಾಗಿಲ್ಲ. ಇದರ ಸ್ಪಷ್ಟ ಚಿತ್ರಣ ಸಿಗಲು ಕೆಲ ದಿನಗಳು ಕಾಯಬೇಕಾದೀತು’ ಎಂದು ಅವರು ತಿಳಿಸಿದರು.

ಸಾರಿಗೆ, ನೀರಾವರಿ ಸಚಿವ ಸ್ಥಾನಕ್ಕೆ ಅಧಿಕಾರಿ ಅವರು ರಾಜೀನಾಮೆ ನೀಡಿದ್ದರೂ, ಟಿಎಂಸಿಗಾಗಲಿ ಅಥವಾ ಶಾಸಕ ಸ್ಥಾನಕ್ಕಾಗಲಿ ಅವರು ರಾಜೀನಾಮೆ ನೀಡಿಲ್ಲ. ‘ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಟಿಎಂಸಿಯಲ್ಲಿ ಇರುವುದು ಅವರಿಗೆ ಕಷ್ಟವಾಗಬಹುದು. ಹೀಗಾಗಿ ಹೊಸ ಪಕ್ಷ ಸ್ಥಾಪಿಸುವುದು ಅಥವಾ ಕಾಂಗ್ರೆಸ್‌ ಅಥವಾ ಬಿಜೆಪಿ ಸೇರ್ಪಡೆಯಾಗುವುದು ಅವರ ಮುಂದಿರುವ ಆಯ್ಕೆಗಳು’ ಎಂದರು.

‘ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವುದಕ್ಕೆ ಹೆಚ್ಚಿನ ಹಣ ಹಾಗೂ ಮಾನವಸಂಪನ್ಮೂಲ ಅಗತ್ಯ. ಈ ಹಂತದಲ್ಲಿ ಅದು ಸಾಧ್ಯವಿಲ್ಲ ಎಂದೆನಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಪಕ್ಷ ದುರ್ಬಲವಾಗಿದೆ. ಹೀಗಾಗಿ ಬಿಜೆಪಿ ಸೇರುವುದೊಂದೇ ಅವರ ಮುಂದಿರುವ ಆಯ್ಕೆ’ ಎಂದರು.

2021ರ ಏಪ್ರಿಲ್‌ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಧಿಕಾರಿ ಅವರ ರಾಜೀನಾಮೆಯು ಹೆಚ್ಚಿನ ಮಹತ್ವವನ್ನು ಪಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು