ಬುಧವಾರ, ಜೂನ್ 29, 2022
26 °C
ರಾಜಕೀಯ ಮೇಲಾಟಕ್ಕೆ ಕಾರಣವಾದ ಮಹಾರಾಷ್ಟ್ರದಲ್ಲಿ ಕಾನೂನು–ಸುವ್ಯವಸ್ಥೆ ಸ್ಥಿತಿ

ದೆಹಲಿಗೆ ಬಿಜೆಪಿ ನಿಯೋಗ: ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರ ಎಂದ ‘ಮಹಾ’ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪಕ್ಷದ ನಾಯಕರ ಮೇಲೆ ದಾಳಿ, ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್‌ ರಾಣಾ ಅವರ ಬಂಧನದಂತಹ ಬೆಳವಣಿಗೆಗಳ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಬಿಜೆಪಿ ಮುಖಂಡರು, ಸೋಮವಾರ (ಏ.25) ನವದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ.

ಬಿಜೆಪಿ ಮುಖಂಡರನ್ನು ಒಳಗೊಂಡ ನಿಯೋಗ ಕೇಂದ್ರ ಗೃಹ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಮಹಾರಾಷ್ಟ್ರದಲ್ಲಿನ ಕಾನೂನು–ಸುವ್ಯವಸ್ಥೆ ಬಗ್ಗೆ ವಿವರಿಸಲಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ಪಾಳೆಯದ ಈ ನಡೆಯನ್ನು ಗಮನಿಸುತ್ತಿರುವ ಮಹಾ ವಿಕಾಸ್‌ ಆಘಾಡಿ (ಎಂವಿಎ) ನಾಯಕರು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿಯ ಮಾಜಿ ಸಂಸದ ಕಿರೀಟ್‌ ಸೋಮಯ್ಯ ಅವರ ಮೇಲೆ ಶನಿವಾರ ದಾಳಿ ನಡೆಯಿತು. ಈ ಘಟನೆ ಬೆನ್ನಲ್ಲೇ ಅವರು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅವರೊಂದಿಗೆ ಮಾತನಾಡಿದರು. ನಂತರ, ಗೌಬಾ ಅವರು ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯಕುಮಾರ್ ಭಲ್ಲಾ ಅವರಿಗೆ ಮಾತನಾಡಿ, ಸೋಮಯ್ಯ ಪ್ರಸ್ತಾಪಿಸಿದ ವಿಷಯದ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಇದಕ್ಕೂ ಮೊದಲು, ಬಿಜೆಪಿಯ ಮತ್ತೊಬ್ಬ ಮುಖಂಡ ಮೋಹಿತ್ ಕಾಂಭೋಜ್ ಭಾರತೀಯ ಅವರ ಮೇಲೂ ದಾಳಿಯ ಯತ್ನಗಳು ನಡೆದಿವೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಮುಂದೆ ಹನುಮಾನ್‌ ಚಾಲೀಸಾ ಪಠಿಸುವುದಾಗಿ ಪಕ್ಷೇತರ ಶಾಸಕ ರವಿ ರಾಣಾ, ಸಂಸದೆ ಹಾಗೂ ಅವರ ಪತ್ನಿ ನವನೀತ್ ರಾಣಾ ಘೋಷಿಸಿದ್ದರು. ಪೊಲೀಸರು ಈ ದಂಪತಿಯನ್ನು ಬಂಧಿಸಿದ್ದಾರೆ. 

ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಸಂಸದ ಮಂಗಲಪ್ರಭಾತ್ ಲೋಧಾ ಹಾಗೂ ಕೇಂದ್ರ ಎಂಎಸ್‌ಎಂಇ ಸಚಿವ ನಾರಾಯಣ ರಾಣೆ ಅವರು ಕೇಂದ್ರದ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಎಂದು ಸೋಮಯ್ಯ ಹೇಳಿದ್ದಾರೆ.

‘ಝಡ್ ಶ್ರೇಣಿ ಭದ್ರತೆ ನೀಡಲಾಗಿರುವ ವ್ಯಕ್ತಿಯನ್ನು ರಕ್ಷಿಸಲು ಪೊಲೀಸರು ವಿಫಲರಾಗಿದ್ದು, ಇನ್ನು ಸಾಮಾನ್ಯ ಜನರನ್ನು ಹೇಗೆ ರಕ್ಷಿಸುತ್ತಾರೆ’ ಎಂದು ಫಡಣವೀಸ್ ಅವರು ಶಿವಸೇನಾ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರ ಆರೋಪಗಳನ್ನು ತಳ್ಳಿಹಾಕಿರುವ ಶಿವಸೇನಾ ಮುಖ್ಯವಕ್ತಾರ ಸಂಜಯ್ ರಾವುತ್, ‘ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಉತ್ತಮವಾಗಿದೆ’ ಎಂದಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ದಿಲೀಪ್‌ ವಲ್ಸೆಪಾಟೀಲ ಅವರು, ‘ಹನುಮಾನ್‌ ಚಾಲೀಸಾ ಪಠಣ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಶಾಂತಿ ಕದಡುವ ಒಂದೆರಡು ಘಟನೆಗಳು ನಡೆದಿವೆ. ರಾಷ್ಟ್ರಪತಿ ಆಡಳಿತ ಹೇರುವಂತಹ ಸನ್ನಿವೇಶ ನಿರ್ಮಾಣ ಮಾಡುವ ಯತ್ನಗಳೂ ನಡೆಯುತ್ತಿವೆ’ ಎಂದು ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು