ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾದ ಬಗ್ಗೆ ಕೇಜ್ರಿವಾಲ್‌ ಹೇಳಿಕೆ: ಬಿಜೆಪಿ ವಿರೋಧ

Last Updated 25 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ನವದೆಹಲಿ/ಭೋಪಾಲ್/ಪಣಜಿ/ಅಹಮದಾಬಾದ್: ‘ದಿ ಕಾಶ್ಮೀರ್ ಫೈಲ್ಸ್‌’ ಚಲನಚಿತ್ರವನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆದಿದೆ.

ಈ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂಬ ಒತ್ತಾಯಕ್ಕೆ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದರು. ‘ತೆರಿಗೆ ವಿನಾಯಿತಿ ನೀಡುವ ಬದಲು, ಚಲನಚಿತ್ರವನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿಬಿಡಿ. ಜನರೆಲ್ಲರೂ ಉಚಿತವಾಗಿ ಚಲನಚಿತ್ರ ನೋಡುತ್ತಾರೆ’ ಎಂದು ಕೇಜ್ರಿವಾಲ್ ಹೇಳಿದ್ದರು.

ಕೇಜ್ರಿವಾಲ್ ಅವರ ಈ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಖಂಡಿಸಿದ್ದಾರೆ. ಗೋವಾ ನಿಯೋಜಿತ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಹ ಟೀಕಿಸಿದ್ದಾರೆ.

ಕೇಜ್ರಿವಾಲ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಎಎಪಿ ನಾಯಕ ಸಂಜಯ್ ಸಿಂಗ್, ‘ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ದೇಶದ ಎಲ್ಲಾ ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ ₹5 ಕೋಟಿ ನೀಡಬೇಕು’ ಎಂದು ಹೇಳಿದ್ದಾರೆ.ಬಿಜೆಪಿ ನಾಯಕರು ಈ ಹೇಳಿಕೆಯನ್ನೂ ಟೀಕಿಸಿದ್ದಾರೆ.

ಎಎಪಿ ನಾಯಕರ ಈ ಹೇಳಿಕೆಗಳ ವಿರುದ್ಧ ಗುಜರಾತ್‌ನ ಅಹಮದಾಬಾದ್‌ನಲ್ಲಿ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.

ನಿರ್ದೇಶಕರಿಗೆ ಸಿ.ಎಂ ಶ್ಲಾಘನೆ
‘ದಿ ಕಾಶ್ಮೀರ್ ಫೈಲ್ಸ್‌’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಅವರನ್ನು ಭೋಪಾಲ್‌ನಲ್ಲಿಶುಕ್ರವಾರ ಭೇಟಿ ಮಾಡಿದರು.

ಈ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಚೌಹಾಣ್‌, ‘ಈ ಸಿನಿಮಾದ ಮೂಲಕ ಕಾಶ್ಮೀರಿ ಪಂಡಿತರು ಅನುಭವಿಸಿದ ನೋವು, ಸಂಕಷ್ಟಗಳ ಬಗ್ಗೆ ಜಗತ್ತಿಗೆ ತಿಳಿಯಿತು.ಕಾಶ್ಮೀರಿ ಪಂಡಿತರು ಎದುರಿಸಿದ ನೋವಿನ ಬಗ್ಗೆ ಜಗತ್ತಿಗೆ ಅರಿವಿರಲಿಲ್ಲ. ಇದನ್ನು ಎಲ್ಲರಿಗೆ ತಿಳಿಯುವಂತೆ ಮಾಡಿದ ನಿಮ್ಮ ಧೈರ್ಯಕ್ಕೆ ನನ್ನ ಸೆಲ್ಯೂಟ್‌’ ಎಂದು ಅವರು ಶ್ಲಾಘಿಸಿದ್ದಾರೆ.

‘ಭೋಪಾಲಿ ಎಂದರೆ ಸಲಿಂಗಕಾಮಿ’
‘ಭೋಪಾಲಿ ಎಂದರೆ ಸಲಿಂಗಕಾಮಿ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಈ ಹಿಂದೆ ನೀಡಿದ್ದ ಹೇಳಿಕೆಯೊಂದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.

‘ದಿ ಕಾಶ್ಮೀರ್ ಫೈಲ್ಸ್‌’ ಚಿತ್ರ ಕುರಿತು ಮೂರು ವಾರಗಳ ಹಿಂದೆ, ಹಿಂದಿ ಸುದ್ದಿವಾಹಿನಿಯೊಂದಕ್ಕೆ ವಿವೇಕ್ ಸಂದರ್ಶನ ನೀಡಿದ್ದರು. ಆಗ, ‘ನಾನು ಭೋಪಾಲ್‌ನವನು. ಇಲ್ಲಿನವರನ್ನು ಭೋಪಾಲಿಗಳು ಎಂದು ಕರೆಯುತ್ತಾರೆ. ಭೋಪಾಲಿ ಎಂದರೆ ಸಲಿಂಗಕಾಮಿಗಳು ಎಂದರ್ಥ’ ಎಂದು ಹೇಳಿಕೆ ನೀಡಿದ್ದರು. ಶುಕ್ರವಾರ ಅವರು ಭೋಪಾಲ್‌ಗೆ ಭೇಟಿ ನೀಡುವ ಮುನ್ನ ಈ ಹೇಳಿಕೆ ಚರ್ಚೆಗೆ ಬಂದಿದೆ. ಈ ಹೇಳಿಕೆ ವಿರುದ್ಧ ಭೋಪಾಲ್‌ನ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವೇಕ್‌ ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

*
ಕಾಶ್ಮೀರಿ ಜನರು ಸತ್ತಾಗ ಇವರು ನಗುತ್ತಿದ್ದರು. ಹಿಂದೂ ವಿರೋಧಿಗಳು ಹೀಗೇ ಇರುತ್ತಾರೆ. ಇವರೆಲ್ಲಾ ನಾಚಿಕೆಯೇ ಇಲ್ಲದ ಅರಾಜಕತಾವಾದಿಗಳು.
-ಬಿ.ಎಲ್‌.ಸಂತೋಷ್, ಬಿಜೆಪಿ ಪ್ರಧಾನ ಕಾರ್ಯದರ್ಶಿ

*
ಈ ಹಿಂದೆ ಹಲವು ಬಾಲಿವುಡ್‌ ಸಿನೆಮಾಗಳಿಗೆ ಕೇಜ್ರಿವಾಲ್‌ ತೆರಿಗೆ ವಿನಾಯಿತಿ ನೀಡಿದ್ದರು. ಆದರೆ ದಿ ಕಾಶ್ಮೀರ್ ಫೈಲ್ಸ್‌ಗೆ ತೆರಿಗೆ ವಿನಾಯಿತಿ ನೀಡಲು ನಿರಾಕರಿಸುತ್ತಿದ್ದಾರೆ.
-ಪ್ರಮೋದ್ ಸಾವಂತ್, ಗೋವಾ ನಿಯೋಜಿತ ಮುಖ್ಯಮಂತ್ರಿ

*
ನರಮೇಧಕ್ಕೆ ಸಂಬಂಧಿಸಿದ ವಸ್ತುಸಂಗ್ರಹಾಲಯ ಸ್ಥಾಪಿಸುವಂತೆ ಚಿತ್ರದ ನಿರ್ದೇಶಕ ಸಲಹೆ ನೀಡಿದ್ದಾರೆ. ಅದಕ್ಕಾಗಿ ನಾವು ಭೋಪಾಲ್‌ನಲ್ಲಿ ಜಾಗ ನೀಡುತ್ತೇವೆ.
- ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT