ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ 40 ಶಾಸಕರಿಗೆ ಬಿಜೆಪಿಯಿಂದ ₹800 ಕೋಟಿ ಆಮಿಷ: ಎಎಪಿ ಗಂಭೀರ ಆರೋಪ

ದೆಹಲಿ ಸರ್ಕಾರ ಉರುಳಿಸಲು ಯತ್ನ: ಎಎಪಿ ಆರೋಪ
Last Updated 25 ಆಗಸ್ಟ್ 2022, 19:46 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ವಿರುದ್ಧದ ಹೋರಾಟವನ್ನು ಎಎ‍ಪಿ ಇನ್ನಷ್ಟು ತೀವ್ರಗೊಳಿಸಿದೆ. ತನ್ನ 40 ಶಾಸಕರನ್ನು ಸೆಳೆದುಕೊಳ್ಳಲು ಬಿಜೆಪಿ ಯತ್ನಿಸಿದೆ ಎಂದು ಎಎಪಿ ಗುರುವಾರ ಆರೋಪಿಸಿದೆ. 40 ಶಾಸಕರು ಪಕ್ಷ ಬದಲಿಸಿದರೆ ಒಟ್ಟು ₹800 ಕೋಟಿ ನೀಡುವುದಾಗಿ ಆಮಿಷವನ್ನೂ ಒಡ್ಡಿದೆ ಎಂದೂ ಎಎ‍ಪಿ ಆರೋಪಿಸಿದೆ. ಇದಕ್ಕೂ ಮುನ್ನ, 12 ಶಾಸಕರು ಎಎಪಿ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಗುಲ್ಲು ಹಬ್ಬಿತ್ತು.

40 ಶಾಸಕರಿಗೆ ತಲಾ ₹20 ಕೋಟಿಯಂತೆ ₹800 ಕೋಟಿ ಬಿಜೆಪಿಗೆ ಎಲ್ಲಿಂದ ಬಂತು ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಪ್ರಶ್ನಿಸಿ
ದ್ದಾರೆ. ಬಿಜೆಪಿಯ ‘ಆಪರೇಷನ್‌ ಕಮಲ’ ವಿಫಲವಾಗಿದೆ ಎಂದಿರುವ ಅವರು ಪಕ್ಷದ ಶಾಸಕರನ್ನು ರಾಜಘಾಟ್‌ಗೆ ಕರೆದೊಯ್ದು ಅಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ಹಲವು ನಾಟಕೀಯ ವಿದ್ಯಮಾನ
ಗಳಿಗೆ ದೆಹಲಿಯ ರಾಜಕಾರಣ ಗುರುವಾರ ಸಾಕ್ಷಿಯಾಯಿತು. 12 ಶಾಸಕರು ಎಎಪಿ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಸುದ್ದಿ ಹರಿದಾಡಿದ ಬಳಿಕ, ಎಎಪಿ ಶಾಸಕರ ಸಭೆಯನ್ನು ಕೇಜ್ರಿವಾಲ್‌ ಕರೆದರು. ಎಎಪಿಯ 62 ಶಾಸಕರ ಪೈಕಿ 53 ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಸೇರಿದಂತೆ ಏಳು ಶಾಸಕರು ನಗರದಲ್ಲಿ ಇಲ್ಲದ ಕಾರಣ ಸಭೆಗೆ ಬಂದಿಲ್ಲ. ಸ್ಪೀಕರ್‌ ರಾಮ್‌ನಿವಾಸ್‌ ಗೋಯಲ್ ಅವರು ವಿದೇಶ ಪ್ರವಾಸದಲ್ಲಿದ್ದಾರೆ.
ಸತ್ಯೇಂದ್ರ ಜೈನ್‌ ಅವರು ಜೈಲಿನಲ್ಲಿ
ದ್ದಾರೆ. ಹೀಗಾಗಿ ಇವರು ಸಭೆಗೆ ಬಂದಿಲ್ಲ ಎಂದು ಸಭೆಯ ಬಳಿಕ ಎಎಪಿ ಹೇಳಿದೆ. ಸಿಸೋಡಿಯಾ ಮತ್ತು ಗೋಯಲ್‌ ಬಿಟ್ಟು, ಇತರ ಆರು ಶಾಸಕರು ಮೊಬೈಲ್‌ನ ಲೌಡ್‌ಸ್ಪೀಕರ್‌ ಮೂಲಕ ಸಭೆಯಲ್ಲಿ ಹಾಜರಿದ್ದ ಶಾಸಕರ ಜತೆ ಮಾತನಾಡಿದರು ಎಂದು ಎಎಪಿ ತಿಳಿಸಿದೆ.

‘ದೆಹಲಿ ಸರ್ಕಾರವನ್ನು ಉರುಳಿಸುವುದಕ್ಕಾಗಿ ಬಿಜೆಪಿ ₹800 ಕೋಟಿ ಇರಿಸಿಕೊಂಡಿದೆ. ಆದರೆ, ದೇಶದ ಜನರಿಗೆ ಈ ಹಣದ ಮೂಲ ಯಾವುದೆಂದು ತಿಳಿಯಬೇಕು. ಇದು ಜಿಎಸ್‌ಟಿಯಿಂದ ಬಂದ ಹಣವೇ ಅಥವಾ ಪಿಎಂ ಕೇರ್ಸ್ ನಿಧಿಯಿಂದ ಬಂದ ಹಣವೇ? ಅಥವಾ ಅವರ ಕೆಲವು ಗೆಳೆಯರು ಈ ನಿಧಿಯನ್ನು ಕೊಟ್ಟಿದ್ದಾರೆಯೇ’ ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಪಕ್ಷ ಒಡೆಯುವ ಯತ್ನದ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಎಎಪಿಯದ್ದು ಸಾರ್ವಜನಿಕವಾಗಿ ನಡೆಸಿದ ನಾಟಕ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಹೇಳಿದ್ದಾರೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಎಎಪಿ ಯತ್ನಿಸುತ್ತಿದೆ. ದೆಹಲಿ ಅಬಕಾರಿ ನೀತಿಯ ಕುರಿತು ಕೇಜ್ರಿವಾಲ್‌ ಏಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಸಿಸೋಡಿಯಾ ಅವರು ಜತೆಗಿರು ವುದು ತಮ್ಮ ಅದೃಷ್ಟ. ಅವರಿಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ದುರಾಸೆ ಇಲ್ಲ. ಎಎಪಿ ಶಾಸಕರು ಮಾರಾಟವಾಗುವ ಬದಲು ಸಾಯು ವುದಕ್ಕೆ ಸಿದ್ಧ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT