ಬುಧವಾರ, ಮೇ 25, 2022
29 °C

ಮಣಿಪುರ: ಅಭ್ಯರ್ಥಿಗಳೊಂದಿಗೆ ಬಿಜೆಪಿ ‘ಅಗ್ರಿಮೆಂಟ್‌’, ಪಕ್ಷಾಂತರ ತಡೆಯಲು ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಫಾಲಾ: ಮಣಿಪುರ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯುವವರಿಂದ ಬಿಜೆಪಿಯು, ‘ಸಹಕಾರ ಒಪ್ಪಂದ’ಕ್ಕೆ ಸಹಿ ಮಾಡಿಸಿಕೊಂಡಿದೆ. ಚುನಾವಣೆಯ ನಂತರ ಪಕ್ಷಾಂತರವನ್ನು ತಡೆಯಲು ಹೀಗೆ ಮಾಡಲಾಗಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಪಕ್ಷಾಂತರದ ಸಾಧ್ಯತೆಗಳು ಅತ್ಯಧಿಕವಾಗಿವೆ. ಅವನ್ನು ತಡೆಗಟ್ಟಲು ಹೀಗೆ ಮಾಡಬೇಕಾಗಿದೆ’ ಎಂದು ರಾಜ್ಯ ಬಿಜೆಪಿ ಘಟಕದ ವಕ್ತಾರ ಸಿ.ಎಚ್‌.ಬಿಜೋಯ್ ಹೇಳಿದ್ದಾರೆ.

‘ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯುವವರಿಂದ, ಮುಖ್ಯಮಂತ್ರಿ ಎನ್‌.ಬಿರೇನ್ ಸಿಂಗ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳಲಾಗಿದೆ’ ಎಂದು ಬಿಜೋಯ್ ತಿಳಿಸಿದ್ದಾರೆ.

ರಾಜ್ಯದ ಎರಡು ಕ್ಷೇತ್ರಗಳಿಂದ ವಿಧಾನಸಭೆಗೆ ನಾಮನಿರ್ದೇಶನವಾಗುವ ಸಂಭಾವ್ಯ ಅಭ್ಯರ್ಥಿಗಳಿಂದಲೂ ಒಪ್ಪಂದಕ್ಕೆ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಆದರೆ ಈ ಒಪ್ಪಂದ ಪತ್ರದಲ್ಲಿ ಯಾವ ಷರತ್ತುಗಳನ್ನು ವಿಧಿಸಲಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

‘ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದ ಹಲವರು ಚುನಾವಣೆ ಹೊಸ್ತಿಲಲ್ಲಿ ಪಕ್ಷವನ್ನು ತೊರೆದಿದ್ದಾರೆ. ಅವರೆಲ್ಲಾ ವಿರೋಧ ಪಕ್ಷಗಳನ್ನು ಸೇರಿದ್ದಾರೆ. ಮಣಿಪುರದಲ್ಲೂ ಹೀಗಾಗುವುದನ್ನು ತಡೆಯಲು ಹೀಗೆ ಮಾಡಲಾಗುತ್ತಿದೆ’ ಎಂದು ಪಕ್ಷದ ಮೂಲಗಳು ಹೇಳಿವೆ.

2017ರ ಚುನಾವಣೆಯಲ್ಲಿ ಬಿಜೆಪಿ 21 ಸ್ಥಾನಗಳಲ್ಲಿ ಗೆಲುವು ಸಧಿಸಿತ್ತು. ಕಾಂಗ್ರೆಸ್‌ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಪ್ರಾದೇಶಿಕ ಪಕ್ಷಗಳು, ಮತ್ತು ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದವರ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿತ್ತು.

ಗೋವಾದಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳಿಂದ ಇದೇ ರೀತಿ ಪ್ರಮಾಣ ಮಾಡಿಸಿಕೊಂಡಿತ್ತು. 2017ರ ಚುನಾವಣೆಯಲ್ಲಿ ಗೋವಾದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ, ಪಕ್ಷಾಂತರಿಗಳ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು