ಬುಧವಾರ, ಅಕ್ಟೋಬರ್ 21, 2020
21 °C

ಮನೆಗಳಲ್ಲಿ ವಿವೇಕಾನಂದ ಚಿತ್ರ ಇದ್ದರೆ ಬಿಜೆಪಿಗೆ 30 ವರ್ಷ ಅಧಿಕಾರ: ತ್ರಿಪುರ ಸಿಎಂ

ಪಿಟಿಐ Updated:

ಅಕ್ಷರ ಗಾತ್ರ : | |

ಅಗರ್ತಲ: ಸ್ವಾಮಿ ವಿವೇಕಾನಂದರ ಚಿತ್ರಗಳು ಮತ್ತು ಅವರ ಸಂದೇಶವನ್ನು ಶೇ.80 ರಷ್ಟು ಮನೆಗಳಲ್ಲಿ ನೇತುಹಾಕಿದರೆ, ಮುಂದಿನ 30 ವರ್ಷಗಳ ಕಾಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಉಳಿಯುತ್ತದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇವ್‌ ಹೇಳಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ದೇವ್‌, ಪಕ್ಷದ ಕಾರ್ಯಕರ್ತರು ರಾಜ್ಯದ ಜನರಿಗೆ ಸ್ವಾಮಿ ವಿವೇಕಾನಂದರ ಸಂದೇಶ ಮತ್ತು ಅವರ ಭಾವಚಿತ್ರಗಳನ್ನು ವಿತರಿಸಬೇಕು ಎಂದು ಹೇಳಿದರು.

‘ಕಮ್ಯುನಿಸ್ಟ್ ನಾಯಕರಾದ ಜ್ಯೋತಿ ಬಸು, ಜೋಸೆಫ್ ಸ್ಟಾಲಿನ್, ಮಾವೊ ಜೆಡಾಂಗ್ ಅವರ ಚಿತ್ರಗಳನ್ನು ತಮ್ಮ ಡ್ರಾಯಿಂಗ್ ರೂಮ್‌ಗಳಲ್ಲಿ ನೇತುಹಾಕಿರುವುದನ್ನು ಇಂದಿಗೂ ನನ್ನ ಹಳ್ಳಿಯಲ್ಲಿಯೂ ನಾನು ನೋಡಿದ್ದೇನೆ. ಸ್ವಾಮಿ ವಿವೇಕಾನಂದರ ಚಿತ್ರಗಳನ್ನು ಮನೆಗಳಲ್ಲಿ ನೇತುಹಾಕುವಂತೆ ಮಾಡಲು ನಮಗೆ ಆಗದೇ? ಬಿಜೆಪಿಯು ನಮ್ಮ ಸಿದ್ಧಾಂತ, ಸಂಸ್ಕಾರಗಳನ್ನು (ಮೌಲ್ಯಗಳು ) ರಕ್ಷಿಸುತ್ತದೆ. ಶೇಕಡಾ 80 ರಷ್ಟು ತ್ರಿಪುರ ಮನೆಗಳಲ್ಲಿ ಸ್ವಾಮಿ ವಿವೇಕಾನಂದರ ಚಿತ್ರಗಳನ್ನು ನೇತುಹಾಕಿದರೆ, ಈ ಸರ್ಕಾರ ಇನ್ನೂ 30-35 ವರ್ಷಗಳ ಕಾಲ ಉಳಿಯುತ್ತದೆ,’ ಎಂದು ದೇವ್‌ ಹೇಳಿದ್ದಾರೆ.

‘ಕಡಿಮೆ ಮಾತನಾಡಲು, ಮೌನವಾಗಿರಲು ಮತ್ತು ಕೆಲಸದ ಬಗ್ಗೆ ಗಮನಹರಿಸಲು ಸ್ವಾಮಿ ವಿವೇಕಾನಂದರು ಹೇಳಿದ್ದರು. ನಾವು ಹೆಚ್ಚು ಮಾತನಾಡಿದರೆ ನಮ್ಮ ಶಕ್ತಿ ವ್ಯರ್ಥವಾಗುತ್ತದೆ. ಆದ್ದರಿಂದ, ನಾವು ನಮ್ಮ ಶಕ್ತಿಯನ್ನು ವ್ಯರ್ಥ ಮಾಡಬಾರದು’ ಎಂದು ದೇವ್‌ ತಿಳಿಸಿದ್ದಾರೆ.

ಭಾರತೀಯ ಸಂಸ್ಕೃತಿಯನ್ನು ಜನರಿಗೆ ಹೆಚ್ಚು ಹೆಚ್ಚು ಮನವರಿಕೆ ಮಾಡಿಕೊಡುವಂತೆ ಅವರು ಮಹಿಳಾ ಮೋರ್ಚಾದ ಕಾರ್ಯಕರ್ತರಿಗೆ ತಿಳಿಸಿದರು.
ಕಳೆದ ಆಗಸ್ಟ್‌ನಲ್ಲಿ ದೇವ್‌ ಅವರು ಕೊರೊನಾ ಸೋಂಕಿತರಿಗೆ ಸ್ವಾಮಿ ವಿವೇಕಾನಂದರ ಕುರಿತ ಪುಸ್ತಕಗಳನ್ನು ವಿತರಿಸಿದ್ದರು. ಆ ಪುಸ್ತಕಗಳು ಸೋಂಕಿತರ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲಕಾರಿ ಎಂದು ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು