ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಭಾರತದಲ್ಲೇ ಔಷಧಿ ತಯಾರಿ; 5 ಫಾರ್ಮಾಗಳಿಗೆ ಅನುಮತಿ

Last Updated 20 ಮೇ 2021, 16:30 IST
ಅಕ್ಷರ ಗಾತ್ರ

ನವದೆಹಲಿ: ಸಕ್ಕರೆ ಕಾಯಿಲೆ ಇರುವವರಿಗೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿರುವ ಮ್ಯೂಕರ್‌ಮೈಕೊಸಿಸ್‌ (ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್‌ ಫಂಗಸ್)‌ ಸೋಂಕು ಚಿಕಿತ್ಸೆಗೆ 'ಆ್ಯಂಫೊಟೆರಿಸಿನ್‌–ಬಿ' ಔಷಧಿಯು ಅವಶ್ಯವಾಗಿದ್ದು, ಅದರ ಲಭ್ಯತೆ ಕೊರತೆಯು ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂದು ಕೇಂದ್ರ ಸಚಿವ ಮನ್ಸುಖ್‌ ಮಾಂಡವಿಯಾ ಹೇಳಿದ್ದಾರೆ.

'ಬ್ಲ್ಯಾಕ್‌ ಫಂಗಸ್‌ ಸೋಂಕು ಗುಣಪಡಿಸಲು ಬಳಸಲಾಗುತ್ತಿರುವ ಆ್ಯಂಫೊಟೆರಿಸಿನ್‌–ಬಿ ಔಷಧಿ ಕೊರತೆಯು ಆದಷ್ಟು ಬೇಗ ಪರಿಹಾರವಾಗಲಿದೆ! ಭಾರತದಲ್ಲಿಯೇ ಆ್ಯಂಫೊಟೆರಿಸಿನ್‌ ತಯಾರಿಸಲು 5 ಫಾರ್ಮಾ ಕಂಪನಿಗಳಿಗೆ ಮೂರು ದಿನಗಳಲ್ಲಿ ಅನುಮತಿ ದೊರೆತಿದೆ. ಈಗಾಗಲೇ ದೇಶದಲ್ಲಿ 6 ಫಾರ್ಮಾ ಕಂಪನಿಗಳು ಈ ಔಷಧಿಯನ್ನು ತಯಾರಿಸುತ್ತಿವೆ' ಎಂದು ಮಾಂಡವಿಯಾ ಟ್ವೀಟಿಸಿದ್ದಾರೆ.

'ಆರು ಕಂಪನಿಗಳು ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಅಗತ್ಯವಿರುವ ಔಷಧಿ ತಯಾರಿಕೆಯನ್ನು ಹೆಚ್ಚಿಸಿವೆ. ಭಾರತದ ಕಂಪನಿಗಳು 6 ಲಕ್ಷ ಆ್ಯಂಫೊಟೆರಿಸಿನ್‌–ಬಿ ಚುಚ್ಚುಮದ್ದು ಸೀಸೆಗಳನ್ನು ಆಮದು ಮಾಡಿಕೊಳ್ಳಲು ಬೇಡಿಕೆ ಇಟ್ಟಿವೆ' ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮಾಂಡವಿಯಾ ತಿಳಿಸಿದ್ದಾರೆ.

ಕೋವಿಡ್‌–19ನಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳಲ್ಲಿ ಬ್ಲ್ಯಾಕ್‌ ಫಂಗಸ್‌ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಸ್ಟಿರಾಯ್ಡ್‌ ಬಳಕೆಯಿಂದಾಗಿ ಕೊರೊನಾ ವೈರಸ್‌ ಸೋಂಕಿತರ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಯಾಗುತ್ತಿದೆ ಹಾಗೂ ರೋಗನಿರೋಧಕ ಶಕ್ತಿ ಕುಂಠಿತಗೊಂಡಿರುತ್ತದೆ. ಇಂಥ ಸಂದರ್ಭದಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕು ಬೇಗ ವ್ಯಾಪಿಸುತ್ತಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಬ್ಲ್ಯಾಕ್‌ ಫಂಗಸ್‌ ಕಣ್ಣು, ಮೂಗಿನ ಭಾಗ, ಶ್ವಾಸಕೋಶ ಹಾಗೂ ಮಿದುಳಿಗೆ ಹಾನಿ ಮಾಡಬಹುದಾಗಿದ್ದು, ಜೀವಕ್ಕೆ ಅಪಾಯ ಉಂಟು ಮಾಡಬಹುದು.

ರಾಜಸ್ಥಾನ ಈಗಾಗಲೇ ಮ್ಯೂಕರ್‌ಮೈಕೊಸಿಸ್‌ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ್ದು, ತೆಲಂಗಾಣ ಮತ್ತು ತಮಿಳುನಾಡು ಸಹ ಈ ಸೋಂಕಿನ ಕುರಿತು ಆಸ್ಪತ್ರೆಗಳು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸುವುದು ಕಡ್ಡಾಯವೆಂದು ಸೂಚಿಸಿ ಅಧಿಸೂಚನೆ ಹೊರಡಿಸಿವೆ.

ದೇಶದಲ್ಲಿ ಆ್ಯಂಫೊಟೆರಿಸಿನ್‌–ಬಿ ತಯಾರಿಸುತ್ತಿರುವ ಕಂಪನಿಗಳು:

* ಮೈಲ್ಯಾನ್‌
* ಬಿಡಿಆರ್‌ ಫಾರ್ಮಾ
* ಸನ್‌ ಫಾರ್ಮಾ
* ಸಿಪ್ಲಾ
* ಭಾರತ್‌ ಸೀರಂ
* ಲೈಫ್‌ ಕೇರ್‌

ಆ್ಯಂಫೊಟೆರಿಸಿನ್‌–ಬಿ ತಯಾರಿಸಲು ಈಗಷ್ಟೇ ಅನುಮತಿ ಪಡೆದಿರುವ ಕಂಪನಿಗಳು:

* ಎಮ್‌ಕ್ಯೂರ್‌ ಫಾರ್ಮಾಸ್ಯೂಟಿಕಲ್ಸ್‌
* ನಟ್ಕೊ ಫಾರ್ಮಾ
* ಗುಫಿಕ್‌ ಬಯೋಸೈನ್ಸಸ್‌
* ಅಲೆಂಬಿಕ್‌ ಫಾರ್ಮಾಸ್ಯೂಟಿಕಲ್ಸ್‌
* ಲೈಕಾ ಫಾರ್ಮಾಸ್ಯೂಟಿಕಲ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT