ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಪಕ್ಷೀಯ ಸಂಬಂಧ ವೃದ್ಧಿ: ಬ್ಲಿಂಕೆನ್‌, ಜೈಶಂಕರ್‌ ಮಾತುಕತೆ

Last Updated 28 ಜುಲೈ 2021, 15:54 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರ ಜೊತೆ ಬುಧವಾರ ಅಫ್ಗಾನಿಸ್ತಾನದ ವಿದ್ಯಮಾನಗಳು, ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿನ ಭದ್ರತೆ, ಕೋವಿಡ್‌ ನಿರ್ವಹಣೆ ಹಾಗೂ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಿಂಕೆನ್‌, ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ದೇಶಗಳಾದ ನಾವು, ಸ್ವಾತಂತ್ರ್ಯ, ಸಮಾನತೆ ಮತ್ತು ಮುಕ್ತ ಅವಕಾಶದ ವಿಷಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ ಎಂದರು.

21ನೇ ಶತಮಾನದಲ್ಲಿ ಭಾರತ ಮತ್ತು ಅಮೆರಿಕದ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದ್ದೇವೆ. ಭಾರತದೊಂದಿಗಿನ ಸಹಭಾಗಿತ್ವವನ್ನು ಬಲಪಡಿಸುವುದು ಅಮೆರಿಕ ವಿದೇಶಾಂಗ ನೀತಿಯ ಆದ್ಯತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಅಫ್ಗಾನಿಸ್ತಾನದಲ್ಲಿನ ಸಂಘರ್ಷ ಶಾಂತಿಯುತವಾಗಿ ಕೊನೆಗಾಣಿಸಬೇಕು ಎಂಬುದು ಭಾರತ ಮತ್ತು ಅಮೆರಿಕದ ಪ್ರತಿಪಾದನೆಯಾಗಿದ್ದು, ಅದಕ್ಕೆ ಎರಡೂ ದೇಶಗಳು ಬದ್ಧವಾಗಿವೆ ಎಂಧರು.

ಅಫ್ಗಾನಿಸ್ತಾನದಲ್ಲಿ ಭವಿಷ್ಯದಲ್ಲಿ ಬರುವ ಯಾವುದೇ ಸರ್ಕಾರವು ಅಲ್ಲಿನ ಜನರನ್ನು ಸಂಪೂರ್ಣವಾಗಿ ಪ್ರತಿನಿಧಿಸಬೇಕು ಎಂದು ಎರಡೂ ದೇಶಗಳು ನಂಬಿವೆ. ಅಫ್ಗಾನಿಸ್ತಾನದ ಸ್ಥಿರತೆ ಮತ್ತು ಅಭಿವೃದ್ಧಿಗೆ ಭಾರತವು ಮಹತ್ವದ ಕೊಡುಗೆಯನ್ನು ನೀಡುತ್ತಿದ್ದು, ಅದನ್ನು ಮುಂದುವರಿಸಲಿದೆ ಎಂದು ಬ್ಲಿಂಕೆನ್ ಹೇಳಿದರು.

ಜೈಶಂಕರ್‌ ಮಾತನಾಡಿ, ದ್ವಿಪಕ್ಷೀಯ ಸಹಭಾಗಿತ್ವದ ವ್ಯಾಪ್ತಿಯನ್ನು ವಿಸ್ತರಿಸಲು ಈ ಮಾತುಕತೆ ನೆರವಾಗಿದೆ. ಎರಡೂ ದೇಶಗಳಿಗೆ ಕೊರೊನಾ ಪಿಡುಗು ತೊಲಗಿಸುವುದು ಆದ್ಯತೆಯಾಗಿದೆ ಎಂದರು.

‘ಚರ್ಚೆಯ ಸಂದರ್ಭದಲ್ಲಿ, ಕೋವಿಡ್‌ನಿಂದ ಎದುರಾಗಿರುವ ಪ್ರಯಾಣದ ಸವಾಲುಗಳ ಕುರಿತು ಮಾತುಕತೆ ನಡೆಸಿದೆವು. ಅಫ್ಗಾನಿಸ್ತಾನದ ವಿದ್ಯಮಾನ, ಇಂಡೊ–ಪೆಸಿಫಿಕ್‌ ಪ್ರದೇಶದ ಕುರಿತು ಚರ್ಚೆ ನಡೆಸಿದೆವು’ ಎಂದು ತಿಳಿಸಿದರು.

ಸ್ವತಂತ್ರ, ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಸ್ಥಿರ ಆಡಳಿತದಿಂದ ಕೂಡಿದ ಅಫ್ಗಾನಿಸ್ಥಾನವನ್ನು ನೋಡಲು ಜಗತ್ತು ಬಯಸುತ್ತಿದೆ ಎಂದು ಎಂದು ಜೈಶಂಕರ್‌ ಇದೇ ವೇಳೆ ತಿಳಿಸಿದರು.

ಅಜಿತ್‌ ಡೋಭಾಲ್ ಜತೆ ಚರ್ಚೆ: ಭದ್ರತೆ, ರಕ್ಷಣಾ, ಆರ್ಥಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಕಾರ್ಯತಂತ್ರದ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೋಭಾಲ್ ಅವರೊಂದಿಗೆ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

ಈ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಂಬಂಧವನ್ನು ಇನ್ನಷ್ಟು ಸುಧಾರಿಸಿ, ಮುಂದಿನ ಹಂತಕ್ಕೆ ತಗೆದುಕೊಂಡು ಹೋಗಲು ದೀರ್ಘಾವಧಿ ಕ್ರಮಗಳ ಕೈಗೊಳ್ಳುವ ಕುರಿತು ವಿಶೇಷ ಗಮನ ಹರಿಸಲು ನಿರ್ಧರಿಸಲಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಅಫ್ಗಾನಿಸ್ತಾನದ ವಿದ್ಯಮಾನ, ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿನ ಬೆಳವಣಿಗೆಗಳ ಕುರಿತು ಈ ವೇಳೆ ಚರ್ಚೆಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT