ಗುರುವಾರ , ಸೆಪ್ಟೆಂಬರ್ 23, 2021
23 °C
ಪಾಲಿಕೆಯಿಂದ ಬೆದರಿಸುವ ತಂತ್ರ: ಕಂಗನಾ ಪ್ರತಿಕ್ರಿಯೆ

ಕಂಗನಾ ಬಂಗ್ಲೆ ಅಕ್ರಮ ನಿರ್ಮಾಣ: ಮುಂಬೈ ಪಾಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್ ನಟಿ ಕಂಗನಾ ರನೋಟ್ ಅವರ ಮುಂಬೈ ಬಂಗ್ಲೆಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಮಂಗಳವಾರ ನೋಟಿಸ್ ಅಂಟಿಸಿದ್ದು, ಕಂಗನಾ ಸೂಕ್ತ ಅನುಮತಿ ಪಡೆಯದೇ ಬಂಗ್ಲೆಯ ಆವರಣದಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿದ್ದಾರೆ ಎಂದು ಬಿಎಂಸಿ ಹೇಳಿದೆ.

‘ಕೆಲಸ ನಿಲ್ಲಿಸಿ’ ಎನ್ನುವ ನೋಟಿಸ್ ಅನ್ನು ಪಾಲಿಕೆ ಅಧಿಕಾರಿಗಳು ಕಂಗನಾ ಅವರ ಬಂಗ್ಲೆಗೆ ಅಂಟಿಸಿದ್ದಾರೆ. ಆದರೆ, ಬಿಎಂಸಿಯ ಆರೋಪವನ್ನು ನಿರಾಕರಿಸಿರುವ ಕಂಗನಾ, ಬಿಎಂಸಿ ತಮಗೆ ಬೆದರಿಕೆ ಒಡ್ಡುವ ಕಾರಣಕ್ಕಾಗಿಯೇ ಈ ರೀತಿ ವರ್ತಿಸುತ್ತಿದೆ ಎಂದು ದೂರಿದ್ದಾರೆ.

ಬಾಂದ್ರಾ ಉಪನಗರದ ಪಾಲಿ ಹಿಲ್ಸ್‌ನಲ್ಲಿರುವ ಕಂಗನಾ ಅವರ ಬಂಗ್ಲೆಯನ್ನು ಸೋಮವಾರ ಬಿಎಂಸಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಮಂಗಳವಾರವೂ ಬಂಗ್ಲೆಗೆ ಭೇಟಿ ನೀಡಿದ್ದ ಅಧಿಕಾರಿಗಳು ನೋಟಿಸ್ ಅಂಟಿಸಿದ್ದಾರೆ.

‘ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಅನುಮತಿಯ ದಾಖಲೆಗಳನ್ನು ಸಲ್ಲಿಸುವಂತೆ ಕಂಗನಾಗೆ ಸೂಚಿಸಲಾಗಿದೆ’ ಎಂದು ಪಾಲಿಕೆಯ ಅಧಿಕಾರಿ ವಿನಾಯಕ್ ವಿಸ್ಪೂತೆ ತಿಳಿಸಿದ್ದಾರೆ.

ನೋಟಿಸ್‌ಗೆ ಉತ್ತರ: ‘ನನ್ನ ಕಕ್ಷಿದಾರರು (ಕಂಗನಾ) ನೀವು ತಪ್ಪಾಗಿ ಅರ್ಥೈಸಿಕೊಂಡಂತೆ ಯಾವುದೇ ಅಕ್ರಮ ನಿರ್ಮಾಣ ಕಾಮಗಾರಿ ಕೈಗೊಂಡಿಲ್ಲ. ಹಾಗಾಗಿ ‘ಕೆಲಸ ನಿಲ್ಲಿಸಿ’ ಎಂದು ನೀವು ನೀಡಿರುವ ನೋಟಿಸ್ ಕಾನೂನು ಪ್ರಕಾರ ತಪ್ಪು. ಈ ಮೂಲಕ ನನ್ನ ಕಕ್ಷಿದಾರರಿಗೆ ನೀವು ಬೆದರಿಕೆ ಒಡ್ಡಿದ್ದೀರಿ’ ಎಂದು ಕಂಗನಾ ತಮ್ಮ ವಕೀಲರ ಮೂಲಕ ಪಾಲಿಕೆ ಅಧಿಕಾರಿಗಳ ನೋಟಿಸ್‌ಗೆ ಉತ್ತರ ನೀಡಿದ್ದಾರೆ.

ಟ್ವೀಟ್‌ ಮಾಡಿದ ಕಂಗನಾ: ‘ಅವರು (ಪಾಲಿಕೆ) ಇಂದು ಬುಲ್‌ಡೋಜರ್‌ನೊಂದಿಗೆ ಬಂದಿಲ್ಲ. ಬದಲಿಗೆ ಕಚೇರಿಯಲ್ಲಿ ನಡೆಯುತ್ತಿರುವ ಕೆಲ ರಿಪೇರಿ ಕೆಲಸಗಳನ್ನು ನಿಲ್ಲಿಸಲು ನೋಟಿಸ್ ಅಂಟಿಸಿದ್ದಾರೆ. ಸ್ನೇಹಿತರೇ, ನಾನು ಸಾಕಷ್ಟು ಅಪಾಯವನ್ನು ಎದುರಿಸಬೇಕಾಗಿದೆ. ನಿಮ್ಮೆಲ್ಲರ ಅಪಾರ ಪ್ರೀತಿ ಮತ್ತು ಬೆಂಬಲವನ್ನು ನಾನು ಕಂಡುಕೊಂಡಿದ್ದೇನೆ’ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಈ ನಡುವೆ ಬಿಎಂಸಿ, ನ್ಯಾಯಾಲಯದಲ್ಲಿ ಕೇವಿಟ್ ಸಲ್ಲಿಸಿದ್ದು, ಕಂಗನಾ ವಿರುದ್ಧ ಮೊಕದ್ದಮೆ ಹೂಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು