ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಒಂದೇ ಆಂಬುಲೆನ್ಸ್‌ನಲ್ಲಿ ಚಿತಾಗಾರಕ್ಕೆ 22 ಕೋವಿಡ್‌ ಶವ ಸಾಗಾಟ!

ಆಸ್ಪತ್ರೆಯಲ್ಲಿ ವೈದ್ಯಕೀಯ ಸಾರಿಗೆ ವಾಹನಗಳ ಕೊರತೆ: ಜಿಲ್ಲಾಡಳಿತ
Last Updated 27 ಏಪ್ರಿಲ್ 2021, 7:49 IST
ಅಕ್ಷರ ಗಾತ್ರ

ಔರಂಗಬಾದ್‌: ಮಹಾರಾಷ್ಟ್ರದ ಬೀಡ್‌ ನಗರದಲ್ಲಿ ಭಾನುವಾರ ಕೋವಿಡ್‌ನಿಂದ ಮೃತಪಟ್ಟ 22 ಮಂದಿಯ ಮೃತ ದೇಹಗಳನ್ನು ಒಂದೇ ಆಂಬುಲೆನ್ಸ್‌ನಲ್ಲಿ ಚಿತಾಗಾರಕ್ಕೆ ಸಾಗಿಸಿದ ಘಟನೆ ನಡೆದಿದೆ.

ಈ ಘಟನೆಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ ‘ವೈದ್ಯಕೀಯ ಸಾರಿಗೆ ವಾಹನಗಳ ಕೊರತೆಯೇ ಇದಕ್ಕೆ ಕಾರಣ’ ಎಂದು ಹೇಳಿದೆ.

ಬೀಡ್‌ ನಗರದ ಅಂಬಾಜೋಗಾಯಿಯಲ್ಲಿರುವ ಸ್ವಾಮಿ ರಮಾನಂದ ತೀರ್ಥ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದ ಕೋವಿಡ್‌ನಿಂದ ಮೃತಪಟ್ಟವರ ದೇಹಗಳನ್ನು ಭಾನುವಾರ ಅಂತ್ಯಕ್ರಿಯೆಗಾಗಿ ಚಿತಾಗಾರಕ್ಕೆ ಸಾಗಿಸುವ ವೇಳೆ ಈ ಘಟನೆ ನಡೆದಿದೆ.

‘ಈ ಆಸ್ಪತ್ರೆಯಲ್ಲಿ ಸಾಕಷ್ಟು ಆಂಬುಲೆನ್ಸ್‌ಗಳಿಲ್ಲ. ಕಳೆದ ವರ್ಷ ಕೋವಿಡ್‌ನ ಮೊದಲ ಅಲೆ ಕಾಣಿಸಿಕೊಂಡಾಗ ಆಸ್ಪತ್ರೆಯಲ್ಲಿ ಐದು ಆಂಬುಲೆನ್ಸ್‌ಗಳಿದ್ದವು. ನಂತರದಲ್ಲಿ ಮೂರನ್ನು ಹಿಂದಕ್ಕೆ ಪಡೆಯಲಾಯಿತು. ಈಗ ಇರುವ ಎರಡು ಆಂಬುಲೆನ್ಸ್‌ಗಳಲ್ಲೇ ಕೋವಿಡ್‌ ರೋಗಿಗಳನ್ನು ಕರೆತರುವ ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದು ವೈದ್ಯಕೀಯ ಕಾಲೇಜಿನ ಡೀನ್‌ ಡಾ. ಶಿವಾಜಿ ಸೊರಕೆ ಮಂಗಳವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಪಕ್ಕದ ಲೋಖಂಡಿ ಸಾವರ್ಗಾಂವ್ ಗ್ರಾಮದಲ್ಲಿರುವ ಕೋವಿಡ್‌ ಕೇಂದ್ರದಲ್ಲಿ ಶವಗಳನ್ನು ಇಡಲು ಶೀತಲಗೃಹಗಳು ಇಲ್ಲ. ಈ ಕಾರಣ, ಅಲ್ಲಿಂದಲೂ ಶವಗಳನ್ನು ಈ ಆಸ್ಪತ್ರೆಗೆ ಕಳುಹಿಸುತ್ತಾರೆ. ಹೀಗಾಗಿ ಈ ಆಸ್ಪತ್ರೆಗೆ ಇನ್ನೂ ಮೂರು ಆಂಬುಲೆನ್ಸ್‌ಗಳನ್ನು ಒದಗಿಸುವಂತೆ ಮಾರ್ಚ್‌ 17ರಂದು ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ’ ಎಂದು ಅವರು ಹೇಳಿದರು.

‘ಈ ಅವ್ಯವಸ್ಥೆಯನ್ನು ತಪ್ಪಿಸುವುದಕ್ಕಾಗಿ ಬೆಳಿಗ್ಗೆ 8 ರಿಂದ ರಾತ್ರಿ 10ರವರೆಗೆ ಶವಸಂಸ್ಕಾರ ನಡೆಸಲು ಅಂಬಾಜೋಗಾಯಿ ಮುನ್ಸಿಪಲ್ ಕೌನ್ಸಿಲ್‌ಗೆ ಪತ್ರ ಬರೆಯಲಾಗಿದ್ದು, ಇನ್ನು ಮುಂದೆ ಆಸ್ಪತ್ರೆಯ ವಾರ್ಡ್‌ನಿಂದ ಶವಗಳನ್ನು ಚಿತಾಗಾರಕ್ಕೆ ಕಳುಹಿಸಲಾಗುವುದು‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT